ಮಡಿಕೇರಿ: ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ರವಿವಾರ ಸಂಭವಿಸಿದೆ.
ಗದ್ದೆಹಳ್ಳದ ಪಟ್ಟೆಮನೆ ನಿವಾಸಿ ಲೋಕೇಶ್ (60) ಮೃತರು.
ಸುಂಟಿಕೊಪ್ಪದಿಂದ ಗದ್ದೆಹಳ್ಳದ ಕಡೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಖಾಸಗಿ ಬಸ್ ಹಿಂಬದಿಯಿಂದ ಢಿಕ್ಕಿಯಾಗಿದೆ.
ಅಪಘಾತದಿಂದ ಲೋಕೇಶ್ ಅವರು ವಾಹನ ಸಹಿತ ರಸ್ತೆಗೆ ಬಿದ್ದ ವೇಳೆ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕಾಗಮಿಸಿದ ಸುಂಟಿಕೊಪ್ಪ ಪೊಲೀಸರು ಖಾಸಗಿ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗದ್ದೆಹಳ್ಳ ಭಾಗದ ಹೆದ್ದಾರಿ ತಿರುವಿನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.