ಈ ಹಿಂದೆ “ಕಾಲ್ಗೆಜ್ಜೆ’ ಎಂಬ ಸಿನಿಮಾ ನಿರ್ದೇಶಿಸಿದ್ದ ಎ.ಬಂಗಾರು ಈಗ ಹೊಸ ಸಿನಿಮಾ ಮಾಡಲು ಮುಂದಾಗಿದ್ದು, ಮೊದಲ ಹಂತವಾಗಿ ಚಿತ್ರದ ಟೈಟಲ್ ಬಿಡುಗಡೆಯಾಗಿದೆ. ಚಿತ್ರಕ್ಕೆ “ಮಡಿಕೇರಿ’ ಎಂದು ಟೈಟಲ್ ಇಡಲಾಗಿದ್ದು, ಹಿರಿಯ ನಿರ್ದೇಶಕ ಎಸ್.ಮಹೇಂದರ್ ಅವರು ಟೈಟಲ್ ಲಾಂಚ್ ಮಾಡಿ ಚಿತ್ರಕ್ಕೆ ಶುಭಕೋರಿದರು. ಪರಮಹಸ್ತ ಪ್ರೊಡಕ್ಷನ್ಸ್ ಮತ್ತು ಶ್ರೀ ಬಾಲಾಜಿ ಸಿನಿ ಕಂಬೈನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಎ. ಬಂಗಾರು ಅವರು ಕಥೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ಸಾಹಿತ್ಯವನ್ನೂ ರಚಿಸಿದ್ದಾರೆ.
ಚಿತ್ರದ ನಿರ್ದೇಶಕ ಎ ಬಂಗಾರು ಮಾತನಾಡಿ, ಇದೊಂದು ಸುಮಧುರ ದೃಶ್ಯಕಾವ್ಯವಾಗಿದ್ದು, ಸಂಗೀತವೇ ಚಿತ್ರದ ಜೀವಾಳವಾಗಿರುತ್ತದೆ. ಮೂರು ಬೇರೆ ಬೇರೆ ಕುಟುಂಬದ ಟ್ರಾಕ್‌ನಲ್ಲಿ ಕಥೆ ಸಾಗುತ್ತದೆ. ಸುಹಾಸಿನಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮನರಂಜನಾತ್ಮಕ ಕಥಾಹಂದರವುಳ್ಳ ಈ ಚಿತ್ರಕ್ಕೆ ಪೃಥ್ವಿ ಅಂಬರ್ ನಾಯಕರಾಗುವ ಸಾಧ್ಯತೆಯಿದೆ. ಶಾಲಿನಿ ಭಟ್ ಚಿತ್ರದ ನಾಯಕಿಯಾಗಿದ್ದಾರೆ. ಟೈಟಲ್ ಅನಾವರಣಕ್ಕೋಸ್ಕರವೇ ಹಾಡೊಂದರ ಚಿತ್ರೀಕರಣ ಮಾಡಿದ್ದು, ನವಂಬರ್ ಹೊತ್ತಿಗೆ ಚಿತ್ರದ ಮುಹೂರ್ತ ಮತ್ತು ಶೂಟಿಂಗ್ ಮಾಡಲಾಗುವುದು’ ಎಂದರು.
ನಿರ್ಮಾಪಕ ರವಿ ಶ್ಯಾಮನೂರು ಮಾತನಾಡಿ, “ಬಂಗಾರು ಅವರು ಹದಿನೈದು ವರ್ಷದ ಸ್ನೇಹಿತರು. ಅವರ ಸಿನೆಮಾ ಮೇಲಿನ ಪ್ರೀತಿ ನಿಜಕ್ಕೂ ಶ್ಲಾಘನೀಯ. ಈ ಹಿಂದೆ ಪದವಿಪೂರ್ವ ಸಿನೆಮಾ ನಿರ್ಮಾಣ ಮಾಡಿದ್ದೆ. ಇದೀಗ ಮಡಿಕೇರಿ ಸಿನೆಮಾಗೆ ಕೈ ಜೋಡಿಸಿದ್ದೇನೆ’ ಎಂದರು.
ಇನ್ನೊಬ್ಬ ನಿರ್ಮಾಪಕರಾದ ಶಿವಪ್ರಕಾಶ್ ಮಾತನಾಡಿ, “ಬಂಗಾರು ಅವರ ಕಾಲ್ಗೆಜ್ಜೆ ಸಿನೆಮಾ ನೋಡಿ ತುಂಬಾ ಖುಷಿಪಟ್ಟಿದ್ದೆ. ಅವರ ಸಿನೆಮಾ ಪ್ಯಾಷನ್ ನನಗೆ ತುಂಬಾ ಇಷ್ಟವಾಗಿ ನಾವೆಲ್ಲಾ ಸೇರಿ ಈ ಚಿತ್ರಕ್ಕೆ ಸಾಥ್ ನೀಡುತ್ತಿದ್ದೇವೆ’ ಎಂದರು. ಮಡಿಕೇರಿ ಚಿತ್ರದ ಸಂಗೀತ ನಿರ್ದೇಶಕರಾಗಿ ಗಂಧರ್ವ ಅವರು ಸಂಗೀತದ ಬಗ್ಗೆ ಮಾಹಿತಿ ನೀಡಿ, “ಇದೊಂದು ಸಂಗೀತಮಯ ಚಿತ್ರವಾಗಿದ್ದು, ಚಿತ್ರದ ಟೈಟಲ್ ಗೆ ತಕ್ಕಂತೆ ಮ್ಯೂಸಿಕ್ ಮಾಡಿದ್ದೇನೆ’ ಎಂದು ವಿವರಿಸಿದರು.
ನಾಯಕಿ ಶಾಲಿನಿ ಭಟ್, ನಟಿ ಭವಾನಿ ಪ್ರಕಾಶ್ ಮಾತನಾಡಿ ಅನುಭವ ಹಂಚಿಕೊಂಡರು.