ಮಡಿಕೇರಿ: ಕಳೆದ ವರ್ಷದಂತೆ ಪ್ರಸಕ್ತ ಸಾಲಿನಲ್ಲೂ ಮಳೆಗಾಲದಲ್ಲಿ ಮಳೆಯ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆಯ ನಿವೃತ್ತ ಉಪ ಮಹಾನಿರ್ದೇಶಕ ಡಾ| ಎಚ್.ಎಸ್.ಎಂ. ಪ್ರಕಾಶ್ ತಿಳಿಸಿದ್ದಾರೆ.
ಇಂದಿನವರೆಗಿನ ಜಿಯೋ ಮೀಟಿಯೋರಾಲಜಿ ಅಧ್ಯಯನದ ಆಧಾರದಂತೆ 2024ನೇ ಸಾಲಿನ ಜೂನ್‌ನಿಂದ ಸೆಪ್ಟಂಬರ್ ಅವಧಿಯ ಮುಂಗಾರು ಕಳೆದ 2023ನೇ ಸಾಲಿನ ಪರಿಸ್ಥಿತಿಯಂತೆ ಇರಲಿದೆ ಎನ್ನುವುದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಸಾಲಿನ ಮುಂಗಾರು ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ತೀರಾ ದುರ್ಬಲವಾಗಿದ್ದ ಹಿನ್ನೆಲೆಯಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿ ಜಿಲ್ಲೆಯ ತಾಲೂಕುಗಳನ್ನು ಬರದ ಪಟ್ಟಿಗೆ ಸೇರಿಸಲಾಗಿತ್ತು. ಈ ಬಾರಿಯ ಮುಂಗಾರು ಕೂಡ ಕೊರತೆಯ ಮುಂಗಾರು ಆಗುವ ಸಾಧ್ಯತೆಯಿದೆ. ಹಿಂಗಾರಿನ ಬಗ್ಗೆ ಅಕ್ಟೋಬರ್ 2024ರ ಮೊದಲ ವಾರದಲ್ಲಿ ನಿಷ್ಕರ್ಷೆ ಮಾಡಬಹುದಾಗಿದೆ ಎಂದು ಡಾ| ಪ್ರಕಾಶ್ ಹೇಳಿದ್ದಾರೆ.
ಕೊರತೆಗೆ ಕಾರಣ: ಆವಿಯ ಮೂಲಗಳಾದ ಭಾರತ ದೇಶದ ಸುತ್ತಮುತ್ತಲಿನ ಸುಮತ್ರ, ಇಂಡೋನೇಷ್ಯಾ, ಫಿಲಿಪ್ಪಿನ್ಸ್, ಪಪುವಾ ನ್ಯೂ ಗಿನಿಯಾ, ಜಪಾನ್, ಕಾಮಚಟ್ಕ, ಅರಬೀ ಸಮುದ್ರ, ಹಿಂದೂ ಮಹಾಸಾಗರ ಹಾಗೂ ಬಂಗಾಲಕೊಲ್ಲಿಯಲ್ಲಿನ ಮುಖ್ಯವಾದ ಮತ್ತು ದೊಡ್ಡ ಮಟ್ಟದ ಜ್ವಾಲಾಮುಖೀಗಳು ನಿಷ್ಕ್ರಿಯಯಾಗಿರುವುದೇ ಮಳೆಯ ಕೊರತೆಗೆ ಕಾರಣವಾಗಿದೆ. ಇವುಗಳು ಮುಂದಿನ ತಿಂಗಳುಗಳಲ್ಲಿ ಸಕ್ರಿಯವಾಗುವ ಯಾವ ಮುನ್ಸೂಚನೆಗಳು ಇಂದಿನವರೆಗೂ ಕಂಡು ಬಂದಿಲ್ಲ. ಹಾಗಾಗಿ ಇಂದಿನ ಪರಿಸ್ಥಿತಿ 2023ರ ಪರಿಸ್ಥಿತಿಯ ಹಾಗೆ ಇರುವುದರಿಂದ ಮಳೆಯ ಪ್ರಮಾಣವು ಕಳೆದ ಬಾರಿಯಷ್ಟೇ ಇರುವ ಸಾಧ್ಯತೆ ಇದೆಯೆಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರವಾಹ-ಭೂಕುಸಿತ ಇರಲಾರದು: ಮುಂಗಾರು ಕೊರತೆಯಾಗುವುದರಿಂದ ಉತ್ತರ ಕರ್ನಾಟಕ, ಕೊಡಗು ಮತ್ತು ಕೇರಳದಲ್ಲಿ ಪ್ರವಾಹ, ಭೂಕುಸಿತ ಪ್ರಕರಣಗಳ ಸಾಧ್ಯತೆ ಕಡಿಮೆ ಇದೆ. 2018 ಮತ್ತು 2019ರ ದುರಂತ ಪರಿಸ್ಥಿತಿ ಇರುವುದಿಲ್ಲ ಎಂದು ಹೇಳಿದ್ದಾರೆ.