Advertisement

Madikeri ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

09:58 PM Jul 05, 2024 | Team Udayavani |

ಮಡಿಕೇರಿ : ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಬೆಳೆಗಾರರೊಬ್ಬರು ಪಾರಾಗಿ ಜೀವ ಉಳಿಸಿಕೊಂಡ ಘಟನೆ ಸುಂಟಿಕೊಪ್ಪ ಸಮೀಪ ಕೊಡಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಕೊಡಗರಹಳ್ಳಿ ಲಕ್ಷ್ಮಿ ತೋಟದ ಮಾಲೀಕ ಬಿ.ಡಿ.ಸುಭಾಷ್ ಎಂಬುವವರೇ ಪ್ರಾಣ ಉಳಿಸಿಕೊಂಡ ವ್ಯಕ್ತಿ.

ಶುಕ್ರವಾರ ಬೆಳಿಗ್ಗೆ ಮನೆಯ ಮುಂದೆ ವಾಯು ವಿಹಾರ ಮಾಡುತ್ತಿದ್ದ ಸಂದರ್ಭ ದಿಢೀರ್ ಆಗಿ ಗೀಳಿಡುತ್ತಾ ಪ್ರತ್ಯಕ್ಷವಾದ ಒಂಟಿಸಲಗ ಏಕಾಏಕಿ ಸುಭಾಷ್ ಅವರ ಮೇಲೆ ದಾಳಿ ಮಾಡಲು ಮುಂದಾಗಿದೆ.

ತಕ್ಷಣ ಎಚ್ಚೆತ್ತುಕೊಂಡ ಸುಭಾಷ್ ಅವರು ಕಿರುಚುತ್ತಾ ಓಡಿ ಹೋಗಿ ಗೇಟ್ ಮೂಲಕ ಮನೆಯ ಆವರಣ ಸೇರಿಕೊಂಡಿದ್ದಾರೆ.

ಗ್ರಾಮಸ್ಥರು ಹಾಗೂ ನಾಯಿಗಳು ಜೋರಾಗಿ ಕಿರುಚಿಕೊಂಡ ಪರಿಣಾಮ ಕಾಡಾನೆ ಸುಭಾಷ್ ಅವರ ಮನೆಯ ಗೇಟ್ ಬಳಿಯಿಂದ ರಸ್ತೆ ದಾಟಿ ತೋಟವೊಂದರೊಳಗೆ ನುಸುಳಿತು.

Advertisement

ಗ್ರಾಮದಲ್ಲಿ ಆತಂಕದ ವಾತಾವರಣ ಮೂಡಿದ್ದು, ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಉಪ್ಪು ತೋಡು, ಕಂಬಿಬಾಣೆ, 7ನೇ ಹೊಸಕೋಟೆ, ಮತ್ತಿಕಾಡು, ಭೂತನಕಾಡು, ಕೆದಕಲ್, ಹೊರೂರು ಮತ್ತಿತರ ಭಾಗದಲ್ಲಿ ಹಗಲು ರಾತ್ರಿ ಎನ್ನದೆ ಕಾಡಾನೆಗಳು ಸಂಚರಿಸುತ್ತಿವೆ.

ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರೂ ಯಾವುದೇ ಆತಂಕವಿಲ್ಲದೆ ಆನೆಗಳು ಗ್ರಾಮದಲ್ಲೇ ಬೀಡು ಬಿಟ್ಟಿವೆ. ಹೆದ್ದಾರಿಯ ಮೂಲಕವೂ ಕಾಡಾನೆಗಳ ಹಿಂಡು ಹಾದು ಹೋಗುತ್ತಿದ್ದು, ನಿತ್ಯ ವಾಹನಗಳಿಗೆ ಅಡಚಣೆಯಾಗುತ್ತಿದೆ. ಪರಿಸ್ಥಿತಿ ಕೈಮೀರುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿದ್ದು, ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next