Advertisement

Madikeri ಕಾಡಾನೆ ದಾಳಿ: ಬೆಳೆಗಾರ ಸಾವು: ಆನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರ ಆಗ್ರಹ

12:56 AM Apr 16, 2024 | Team Udayavani |

ಮಡಿಕೇರಿ: ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಬೀರುಗ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.

Advertisement

ಬೀರುಗ ಗ್ರಾಮದ ಅಯ್ಯಮಾಡ ಮಾದಯ್ಯ (63) ಮೃತಪಟ್ಟಿರುವ ಕೃಷಿಕ. ಬೆಳಗ್ಗೆ 6.45ರ ಸುಮಾರಿಗೆ ಮಾದಯ್ಯ ಅವರು ಗ್ರಾಮದ ಚಾಮುಂಡಿ ಮುತ್ತಪ್ಪ ಕೊಲ್ಲಿ ರಸ್ತೆಯ ಮೂಲಕ ತೋಟಕ್ಕೆ ತೆರಳುತ್ತಿದ್ದ ಸಂದರ್ಭ ಕಾಡಾನೆ ದಾಳಿ ಮಾಡಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳೀಯರ ಆಕ್ರೋಶ
ಘಟನ ಸ್ಥಳದಲ್ಲಿ ಸೇರಿದ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳು ಬರುವವರೆಗೆ ಮೃತದೇಹವನ್ನು ಸ್ಥಳದಿಂದ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ಅನಂತರ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ಎದುರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತತ್‌ಕ್ಷಣದಿಂದಲೇ ಕಾರ್ಯಾಚರಣೆ ಆರಂಭಿಸಿ ಆನೆಗಳನ್ನು ಕಾಡಿಗೆ ಅಟ್ಟುವಂತೆ ತಾಕೀತು ಮಾಡಿದರು. ಇದಕ್ಕೆ ಅರಣ್ಯ ಅಧಿಕಾರಿಗಳು ಸಮ್ಮತಿ ಸೂಚಿಸಿದರು.

ರೈತ ಸಂಘದ ಮುಖಂಡರಾದ ಅಜ್ಜಮಾಡ ಚಂಗಪ್ಪ ಮಾತನಾಡಿ, ಬೀರುಗ ಹಾಗೂ ಕುರ್ಚಿ ಭಾಗದ ತೋಟಗಳಲ್ಲಿ 40ಕ್ಕೂ ಹೆಚ್ಚು ಕಾಡನೆಗಳು ಬೀಡು ಬಿಟ್ಟಿದ್ದು, ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೃಷಿಕರು, ಕಾರ್ಮಿಕರು ಬದುಕುವುದೇ ಕಷ್ಟವಾಗಿದೆ. ವನ್ಯಪ್ರಾಣಿಗಳ ಉಪಟಳದಿಂದ ಈ ಭಾಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಪರಿಹಾರ ಹಸ್ತಾಂತರ
ಮಾದಯ್ಯ ಅವರ ಕುಟುಂಬಕ್ಕೆ ಡಿಎಫ್ಒ ಭಾಸ್ಕರ್‌ ಅವರು ಪರಿಹಾರದ ಚೆಕ್‌R ಹತ್ತಾಂತರಿಸಿದರು. ವಿಧಾನ ಪರಿಷತ್‌ ಸದಸ್ಯರಾದ ಸುಜಾ ಕುಶಾಲಪ್ಪ, ಎಸಿಎಫ್ ನೆಹರೂ, ರೈತ ಸಂಘದ ಪ್ರಮುಖರು ಹಾಜರಿದ್ದರು.

Advertisement

45 ದಿನಗಳಲ್ಲಿ 5ನೇ ಸಾವು!
ಇತ್ತೀಚಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿಕರ ಕಷ್ಟಪಟ್ಟು ಬೆಳೆದ ಫ‌ಸಲು ಹಾನಿಯಾಗುವುದಲ್ಲದೆ ಕೃಷಿಕರು, ಕೃಷಿ ಕಾರ್ಮಿಕರು ಆನೆ ದಾಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವ ಘಟನೆಯೂ ಹೆಚ್ಚುತ್ತಿದೆ. ಮಾರ್ಚ್‌ ತಿಂಗಳೊಂದರಲ್ಲೇ 4 ಮಂದಿ ಕಾಡಾನೆ ದಾಳಿ ಸಿಲುಕಿ ಸಾವಪ್ಪಿದ್ದಾರೆ. ಎ. 15ರಂದು ಓರ್ವ ಕೃಷಕನ ಸಾವು ಸಂಭವಿಸುವುದರೊಂದಿಗೆ ಜಿಲ್ಲೆಯಲ್ಲಿ ಕಳೆದ 45 ದಿನಗಳಲ್ಲಿ ಆನೆ ದಾಳಿಗೆ 5ನೇ ಸಾವು ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next