Advertisement

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಕದನ ವಿರಾಮ ಘೋಷಿಸಿ

09:51 AM Mar 20, 2020 | mahesh |

ತಮ್ಮ ಸರ್ಕಾರ, ಕೋವಿಡ್ ತಡೆಗೆ ಬದ್ಧ ಎಂದು ಕಮಲ್‌ನಾಥ್‌ ಹೇಳುತ್ತಿದ್ದಾರಾದರೂ, ಅಲುಗುತ್ತಿರುವ ಕುರ್ಚಿಯ ಮೇಲೆ ಕುಳಿತು, ಜನರತ್ತ ಗಮನ ಕೊಡಲು ಅವರಿಗೆ ನಿಜಕ್ಕೂ ಸಾಧ್ಯವೇ? ಈ ಯುದ್ಧವೀಗ ನಿಲ್ಲಲೇಬೇಕಿದೆ. ಬಿಜೆಪಿ- ಕಾಂಗ್ರೆಸ್‌ ನಡುವೆ ಕದನವಿರಾಮ ಘೋಷಣೆಯಾಗಲೇಬೇಕಿದೆ.

Advertisement

ಇಡೀ ದೇಶವೇ ಕೋವಿಡ್ ವೈರಸ್‌ ವಿರುದ್ಧದ ಹೋರಾಟದಲ್ಲಿ ತೊಡಗಿದ್ದರೆ, ಅತ್ತ ಮಧ್ಯಪ್ರದೇಶದಲ್ಲಿ ಬೇರೆಯದ್ದೇ ಹೋರಾಟ ನಡೆದಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಚದುರಂಗದಾಟ ನಡೆಸಿವೆ. ಕಾಂಗ್ರೆಸ್‌ ನಾಯಕ, ಮುಖ್ಯಮಂತ್ರಿ ಕಮಲ್‌ನಾಥ್‌ರ ಸರ್ಕಾರ ಅಲುಗಾಡುತ್ತಿದ್ದರೆ, ಇನ್ನೊಂದೆಡೆ ಜ್ಯೋತಿರಾದಿತ್ಯ ಸಿಂಧಿಯಾ, ಬಂಡಾಯ ಶಾಸಕರು ಮತ್ತು ಬಿಜೆಪಿ ಕೂಡಲೇ ಫ್ಲೋರ್‌ ಟೆಸ್ಟ್‌ ಆಗಬೇಕು ಎಂದು ಬಯಸುತ್ತಿದ್ದಾರೆ. ತಮ್ಮ ಸರ್ಕಾರ ಅಲುಗಾಡುತ್ತಿಲ್ಲ, ನಮ್ಮ ಬಳಿ ಸಂಖ್ಯಾಬಲವಿಲ್ಲ ಎನ್ನುವುದನ್ನು ಬಿಜೆಪಿ ರುಜುವಾತು ಮಾಡಲಿ ಎನ್ನುತ್ತಿದ್ದಾರೆ ಕಮಲ್‌ನಾಥ್‌. ಕಾಂಗ್ರೆಸ್‌ ತನ್ನ ಸಂಖ್ಯಾಬಲ ರುಜುವಾತ ಮಾಡಬೇಕೆಂದು ಬಿಜೆಪಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಒಟ್ಟಲ್ಲಿ, ಮಧ್ಯಪ್ರದೇಶದ ರಾಜಕೀಯ ಗದ್ದಲ ಇಷ್ಟಕ್ಕೇ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಬಂಡಾಯ ಶಾಸಕರ ತಂಡವೀಗ ರೆಸಾರ್ಟ್‌ ರಾಜಕಾರಣಕ್ಕೆ ಕುಖ್ಯಾತವಾದ ಬೆಂಗಳೂರಿನಲ್ಲಿ ಇದೆ. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಕಮಲ್‌ನಾಥ್‌ ಸರಕಾರಕ್ಕೆ ವಿಶ್ವಾಸಮತ ಯಾಚಿಸಲು ಹತ್ತು ದಿನಗಳ ರಿಲೀಫ್ ಸಿಕ್ಕ ಕಾರಣ ಶಾಸಕರ ಮನವೊಲಿಕೆಗೆ ದಿಗ್ವಿಜಯ್‌ ಸಿಂಗ್‌ ಬೆಂಗಳೂರಿಗೆ ಆಗಮಿಸಿದ್ದರು. ಬುಧವಾರ ರೆಸಾರ್ಟ್‌ನಲ್ಲಿ ವಾಸ್ತವ್ಯವಿರುವ ಮಧ್ಯಪ್ರದೇಶ ಕೈ ನಾಯಕರ ಮನವೊಲಿಕೆಗೆ ಬಂದ ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರನ್ನು ಪೊಲೀಸರು ವಶಕ್ಕೆ ಪಡೆದದ್ದೂ ಸೇರಿದಂತೆ, ಹಲವು ಪ್ರಹಸನಗಳಿಗೆ ಬೆಂಗಳೂರು ಸಾಕ್ಷಿಯಾಯಿತು.

ಒಟ್ಟಲ್ಲಿ, ಈ ಪರಿಸ್ಥಿತಿ ನಿರ್ಮಾಣವಾಗಲು ಬಿಜೆಪಿಯ ಅಧಿಕಾರದಾಸೆಯೇ ಕಾರಣ ಎಂದು ಕಾಂಗ್ರೆಸ್‌ ದೂರುತ್ತಿದೆ. ಆದರೆ, ಇದೇ ವೇಳೆಯಲ್ಲೇ, ಈ ಪರಿಸ್ಥಿತಿಯನ್ನು ಖುದ್ದು ಕಮಲ್‌ನಾಥ್‌-ದಿಗ್ವಿಜಯ್‌ ಸಿಂಗ್‌ ಜೋಡಿ ಹಾಗೂ ಕಾಂಗ್ರೆಸ್‌ನ ಹೈಕಮಾಂಡ್‌(ಮುಖ್ಯವಾಗಿ ಸೋನಿಯಾ ಮತ್ತು ರಾಹುಲ್‌) ಮೈಮೇಲೆ ಎಳೆದುಕೊಂಡಿದ್ದಾರೆ ಎನ್ನುವುದನ್ನೂ ಕಾಂಗ್ರೆಸ್‌ ಒಪ್ಪಿಕೊಳ್ಳಬೇಕಿದೆ.

ಕಾಂಗ್ರೆಸ್‌ನಲ್ಲಿ ಗಾಂಧಿಯೇತರ ಯುವ ನಾಯಕರ ಏಳಿಗೆಯನ್ನು ಹೈಕಮಾಂಡ್‌ ಸಹಿಸುವುದಿಲ್ಲ ಎನ್ನುವ ಕೂಗೂ ಹೆಚ್ಚಾಗುವಂತೆ ಮಾಡಿದೆ ಈ ಇಡೀ ವಿದ್ಯಮಾನ. ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಸಿಗಬೇಕಾಗಿದ್ದ ಗೌರವ, ಸ್ಥಾನಮಾನ ಸಿಕ್ಕಿದ್ದರೆ ಅವರು ಪಕ್ಷ ತೊರೆಯುವ ಪ್ರಮೇಯ ಎದುರಾಗುತ್ತಿರಲಿಲ್ಲವೇನೋ? ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಬಲವರ್ಧನೆಗಾಗಿ ದುಡಿದ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಬರಲು ಕಾರಣರಾದ ಸಿಂಧಿಯಾರನ್ನು ಕಾಂಗ್ರೆಸ್‌ ಕಡೆಗಣಿಸುತ್ತಲೇ ಬಂದು, ಇಂದು ಈ ಸ್ಥಿತಿ ನಿರ್ಮಿಸಿಕೊಂಡಿದೆ. ಕಾಂಗ್ರೆಸ್‌ ಮಾಡಿದ ತಪ್ಪಿನ ಲಾಭವನ್ನು ಬಿಜೆಪಿ ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಿದೆ.

Advertisement

ಆದರೆ, ಇಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎನ್ನುವ ಚರ್ಚೆಗಿಂತ, ಇದರಿಂದ ಆಡಳಿತದ ಮೇಲೆ, ಸಾರ್ವಜನಿಕರ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ರಾಜಕೀಯ ಹಗ್ಗಜಗ್ಗಾಟದಲ್ಲೇ ಮಧ್ಯಪ್ರದೇಶದ ನಾಯಕರು ವ್ಯಸ್ತರಾದರೆ, ಕೊರೊನಾದ ವಿರುದ್ಧ ಪ್ರಾಮಾಣಿಕ ಹೋರಾಟ ಸಾಧ್ಯವಾಗಬಲ್ಲದೆ? ಆದಾಗ್ಯೂ, ತಮ್ಮ ಸರ್ಕಾರ, ಕೋವಿಡ್‌-19 ತಡೆಗೆ ಬದ್ಧ ಎಂದು ಕಮಲ್‌ನಾಥ್‌ ಹೇಳುತ್ತಿದ್ದಾರಾದರೂ, ಅಲುಗುತ್ತಿರುವ ಕುರ್ಚಿಯ ಮೇಲೆ ಕುಳಿತು, ರಾಜ್ಯದ ಜನರ ಕಾಳಜಿಗೆ ಗಮನ ಕೊಡಲು ಅವರಿಗೆ ಸಾಧ್ಯವೇ? ಇಂಥ ದುರಿತ ಕಾಲದಲ್ಲಿ ಅವರನ್ನು ಕುರ್ಚಿಯಿಂದ ಕೆಡವಲೇಬೇಕು ಎಂಬ ಅವಸರವೇಕೆ ಬಿಜೆಪಿಗೆ? ಈ ಯುದ್ಧವೀಗ ನಿಲ್ಲಲೇಬೇಕಿದೆ. ಬಿಜೆಪಿ ಕಾಂಗ್ರೆಸ್‌ ನಡುವೆ ಕದನವಿರಾಮ ಘೋಷಣೆಯಾಗಲೇಬೇಕಿದೆ. ಮೊದಲು ಈ ಎರಡೂ ಪಕ್ಷಗಳ ನಾಯಕರು ಕೊರೊನಾ ವಿರುದ್ಧ ಜಯ ಸಾಧಿಸಲು ಪ್ರಯತ್ನಿಸಲಿ. ಆಮೇಲೆ, ಯಾರಾದರೂ ಅಧಿಕಾರಕ್ಕೆ ಬರಲಿ.

Advertisement

Udayavani is now on Telegram. Click here to join our channel and stay updated with the latest news.

Next