ಭೋಪಾಲ್: ಪೊಲೀಸ್ ವಶದಲ್ಲಿದ್ದ ಮದ್ಯದ ಬಾಟಲಿಯಿಂದ ಮದ್ಯ ಕುಡಿದು ಖಾಲಿ ಮಾಡಿದ ಆರೋಪದ ಮೇಲೆ ಇಲಿಯೊಂದನ್ನು ಹಿಡಿದು ಬೋನಿನೊಳಗೆ ಹಾಕಿರುವ ವಿಚಿತ್ರ ಘಟನೆ ಮಧ್ಯ ಪ್ರದೇಶದ ಛಿಂದ್ವಾರಾದಲ್ಲಿ ನಡೆದಿದೆ.
ಮನೆ ಅಥವಾ ಕಚೇರಿಗಳಲ್ಲಿ ಹಳೆಯ ಕೋಣೆಗಳಿದ್ದರೆ ಅಲ್ಲಿ ಇಲಿ, ಜೀರಳೆಗಳ ಸಾಮ್ರಾಜ್ಯವೊಂದು ಹಾಯಾಗಿ ರಾತ್ರಿ ಹೊತ್ತು ತಿರುಗಾಡುತ್ತವೆ. ಇವುಗಳ ದೆಸೆಯಿಂದ ಕೆಲವೊಮ್ಮೆ ಪೇಪರ್ ಹಾಗೂ ಕೆಲ ಅಗತ್ಯ ದಾಖಲೆಗಳು ನಾಶವಾಗುವುದುಂಟು. ಇಂಥದ್ಧೇ ಒಂದು ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡು ಠಾಣೆಯಲ್ಲಿ ಇಟ್ಟಿದ್ದರು. 60 ಮದ್ಯದ ಪ್ಲ್ಟಾಸ್ಟಿಕ್ ಬಾಟಲಿಗಳನ್ನು ಚೀಲವೊಂದರಲ್ಲಿ ಕಟ್ಟಿ ಇಟ್ಟಿದ್ದರು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಇದನ್ನು ಪೊಲೀಸರು ತೋರಿಸಬೇಕಿತ್ತು.
ಆದರೆ ಠಾಣೆ ಸ್ಟೋರ್ ರೂಮ್ ನಲ್ಲಿದ್ದ ಮದ್ಯದ ಬಾಟಲಿಗಳು ಖಾಲಿಯಾಗಿರುವುದನ್ನು ಪೊಲೀಸರು ನೋಡಿದ್ದಾರೆ. ಇದು ಯಾರ ಕೆಲಸವೆಂದು ನೋಡಿದ ವೇಳೆ, ಇದು ಇಲಿಗಳ ಕೈವಾಡವೆಂದು ಗೊತ್ತಾಗಿದೆ.ಈ ಕಾರಣದಿಂದ ಮರುದಿನ ಇಲಿಯ ಹಿಡಿಯುವ ಬೋನು ತಂದು ಠಾಣೆಯಲ್ಲಿಟ್ಟಿದ್ದಾರೆ. ಇದರಲ್ಲಿ ಒಂದು ಇಲಿ ಬಂದು ಬಿದ್ದಿದೆ.
ಎಲ್ಲ ಮದ್ಯದ ಬಾಟಲಿಯಲ್ಲಿನ ಮದ್ಯವನ್ನು ಇಲಿಗಳೇ ಕುಡಿದು ಖಾಲಿ ಮಾಡಿವೆ ಎನ್ನುವುದರ ಬಗ್ಗೆ ಖಚಿತತೆ ಇಲ್ಲ. ಉಳಿದ ಇಲಿಗಳನ್ನು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ.