ಭೋಪಾಲ್: ಖಾಸಗಿ ಶಾಲೆಯ 39 ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್ ಬಳಸಿ ಕೋವಿಡ್ ಲಸಿಕೆ ನೀಡಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಕುರಿತು ತಿಳಿದು ಬಂದ ಕೂಡಲೇ ತರಬೇತು ಆರೋಗ್ಯ ಸಿಬ್ಬಂದಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪ್ರವೀಣ್ ಹತ್ಯೆ ಪ್ರಕರಣ ಎನ್ಐಎಗೆ ವಹಿಸಿದ ಸಿಎಂ ಬೊಮ್ಮಾಯಿ
ಕೋವಿಡ್ ಲಸಿಕೆ ಅಭಿಯಾನದಡಿ ಇತ್ತೀಚೆಗೆ ಜೈನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕೆ ನೀಡುವ ವೇಳೆ ಈ ಘಟನೆ ನಡೆದಿದೆ. ಜಿತೇಂದ್ರ ಅಹಿರ್ವಾರ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಹಿರ್ವಾರ್ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ. ಲಸಿಕೆ ಅಭಿಯಾನದಲ್ಲಿ ಆರೋಗ್ಯ ಇಲಾಖೆ ಈತನಿಗೆ ಲಸಿಕೆ ನೀಡುವ ಬಗ್ಗೆ ತರಬೇತಿ ನೀಡುತ್ತಿತ್ತು ಎಂದು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ.ಡಿ.ಕೆ.ಗೋಸ್ವಾಮಿ ಮಾಹಿತಿ ನೀಡಿದ್ದಾರೆ.
ಆರೋಗ್ಯ ಇಲಾಖೆಯ ಮುಖ್ಯಸ್ಥರು ತನ್ನನ್ನು ಕಾರಿನಲ್ಲಿ ಕರೆದುಕೊಂಡು ಬಂದು ಶಾಲೆ ಬಳಿ ಬಿಟ್ಟು, ಎಲ್ಲರಿಗೂ ಲಸಿಕೆ ನೀಡುವಂತೆ ಹೇಳಿ ಒಂದು ಸಿರಿಂಜ್ ಕೊಟ್ಟು ಹೋಗಿದ್ದರು ಎಂದು ಬಂಧಿತ ಅಹಿರ್ವಾರ್ ಆರೋಪಿಸಿರುವ ವಿಡಿಯೋ ವೈರಲ್ ಆಗಿದೆ.
ಒಂದೇ ಸಿರಿಂಜ್ ನಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುತ್ತಿದ್ದ ಬಗ್ಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಹಿರ್ವಾರ್ ನನ್ನು ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿರುವುದಾಗಿ ಗೋಪಾಲ್ ಗಂಜ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಕಮಲ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.