ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಹಿಂದೆಯೂ ಮುಖ್ಯಮಂತ್ರಿ ಸ್ಥಾನದ ಸ್ಪರ್ಧಿಯಾಗಿರಲಿಲ್ಲ, ಈಗಲೂ ಇಲ್ಲ ಎಂದು ಹೇಳಿದ್ದಾರೆ.
“ನಾನು ಈ ಹಿಂದೆ ಅಥವಾ ಈಗ ಸಿಎಂ ಸ್ಪರ್ಧಿಯಾಗಿರಲಿಲ್ಲ. ನಾನು ಕೇವಲ ಪಕ್ಷದ ಕಾರ್ಯಕರ್ತ ಮತ್ತು ಪಕ್ಷವು ಯಾವುದೇ ಹುದ್ದೆ ಅಥವಾ ಕರ್ತವ್ಯವನ್ನು ನೀಡಿದರೆ ಅದನ್ನು ನಾನು ನಿಭಾಯಿಸುತ್ತೇನೆ” ಎಂದು ಚೌಹಾಣ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚೌಹಾಣ್, ಬಿಜೆಪಿ ನಾಯಕತ್ವವನ್ನು ಭೇಟಿ ಮಾಡಲು ನಾನು ದೆಹಲಿಗೆ ಹೋಗುವುದಿಲ್ಲ ಎಂದು ಹೇಳಿದರು.
“ನಾನು ದೆಹಲಿಗೆ ಹೋಗುವುದಿಲ್ಲ, ನಾಳೆ ನಾನು ಛಿಂದ್ವಾರಾಕ್ಕೆ ಹೋಗುತ್ತೇನೆ, ಅಲ್ಲಿ ನಾವು ಎಲ್ಲಾ 7 ವಿಧಾನಸಭಾ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ನನ್ನ ಬಳಿ ಒಂದೇ ಒಂದು ಉದ್ದೇಶವಿರುವುದು, ಅದು 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 29 ಸ್ಥಾನಗಳನ್ನು ಗೆಲ್ಲವುದು” ಎಂದು ಅವರು ಹೇಳಿದರು.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿತ್ತು. 230 ವಿಧಾನಸಭಾ ಕ್ಷೇತ್ರಗಳ ಮಧ್ಯ ಪ್ರದೇಶದಲ್ಲಿ ಬಿಜೆಪಿ 163 ಸ್ಥಾನಗಳಲ್ಲಿ ಗೆಲುವು ಕಂಡಿತ್ತು.