Advertisement

ಕಮಲ್‌ ಗೆಲ್ಲುವರೋ ಸೋಲುವರೋ? ನಾಳೆ ನಡೆಯಲಿದೆ ಬಲಪರೀಕ್ಷೆ

10:08 AM Mar 16, 2020 | sudhir |

ಭೋಪಾಲ್‌/ಜೈಪುರ: ಮಧ್ಯಪ್ರದೇಶದಲ್ಲಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಉಳಿಯುತ್ತದೋ, ಪತನವಾಗಲಿದೆಯೋ ಎಂಬ ಪ್ರಶ್ನೆಗೆ ಸೋಮವಾರ ಉತ್ತರ ಸಿಗಲಿದೆ. 22 ಶಾಸಕರು ರಾಜೀನಾಮೆ ನೀಡಿರುವ ಕಾರಣ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಲಾಲ್‌ಜಿ ಟಂಡನ್‌ ಅವರು ವಿಶ್ವಾಸಮತ ಸಾಬೀತು ಮಾಡುವಂತೆ ಸೂಚನೆ ನೀಡಿದ್ದು, ಸೋಮವಾರ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರಕ್ರಿಯೆ ನಡೆಯಲಿದೆ.

Advertisement

ಅದಕ್ಕೆ ಪೂರಕವಾಗಿ ಭೋಪಾಲ್‌ನಲ್ಲಿ ಭಾನುವಾರ ಸಚಿವ ಸಂಪುಟ ಸಭೆಯನ್ನೂ ಸಿಎಂ ಕಮಲ್‌ನಾಥ್‌ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ವಿಶ್ವಾಸಮತ ಪ್ರಕ್ರಿಯೆಯಲ್ಲಿ ಜಯ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ವಿಧಾನಸಭೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಜನರು ಗುಂಪುಗೂಡದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಭೋಪಾಲಕ್ಕೆ ಆಗಮನ
ಬಿಜೆಪಿಯಿಂದ ಮತ್ತಷ್ಟು ಸಂಖ್ಯೆಯಲ್ಲಿ ಶಾಸಕರು ಆಮಿಷಕ್ಕೆ ಒಳಗಾಗದೇ ಇರುವುದನ್ನು ತಪ್ಪಿಸಲು ಜೈಪುರದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ತನ್ನ ಶಾಸಕರನ್ನು ಭೋಪಾಲಕ್ಕೆ ಕಾಂಗ್ರೆಸ್‌ ಕರೆ ತಂದಿದೆ. “ಭೋಪಾಲ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ನಮ್ಮನ್ನು ಹೋಟೆಲ್‌ಗ‌ಳಿಗೆ ಕರೆದೊಯ್ಯಲಾಗಿದೆ. ರಾಜ್ಯದ ಬಜೆಟ್‌ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ’ ಎಂದು ಕಾಂಗ್ರೆಸ್‌ ಶಾಸಕರೊಬ್ಬರು ಹೇಳಿದ್ದಾರೆ. ಅವರಿಗೆಲ್ಲ ವೈದ್ಯಕೀಯ ತಪಾಸಣೆಯನ್ನೂ ನಡೆಸಲಾಗಿದೆ.

ನಾಳೆ ಸ್ಪೀಕರ್‌ ರೂಲಿಂಗ್‌
ಮಧ್ಯಪ್ರದೇಶ ರಾಜ್ಯಪಾಲ ಲಾಲ್‌ಜಿ ಟಂಡನ್‌ ಆದೇಶ ಪ್ರಕಾರ ಸಿಎಂ ಕಮಲ್‌ನಾಥ್‌ ವಿಶ್ವಾಸ ಮತ ಎದುರಿಸಬೇಕು ಎಂಬ ಬಗ್ಗೆ ಸ್ಪೀಕರ್‌ ಎನ್‌.ಪಿ.ಪ್ರಜಾಪತಿ ಯಾವುದೇ ಆದೇಶ ನೀಡಲು ಭಾನುವಾರ ನಿರಾಕರಿಸಿದ್ದಾರೆ. ಈ ಬಗ್ಗೆ ಏನಿದ್ದರೂ, ಸೋಮವಾರವೇ ರೂಲಿಂಗ್‌ ನೀಡುವುದಾಗಿ ಹೇಳಿದ್ದಾರೆ.

ಸಿಂಧಿಯಾ ನಾಳೆ ಆಗಮನ
ಕಾಂಗ್ರೆಸ್‌ನ 22 ಶಾಸಕರ ರಾಜೀನಾಮೆಗೆ ಕಾರಣರಾಗಿರುವ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ನವದೆಹಲಿಯಿಂದ ಭೋಪಾಲಕ್ಕೆ ಆಗಮಿಸಲಿದ್ದಾರೆ. ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಕೆಲವು ಶಾಸಕರು ಸೋಮವಾರ ತೆರಳಲಿದ್ದಾರೆ.

Advertisement

ಬಿಜೆಪಿಯಿಂದ ವಿಪ್‌ ಜಾರಿ
ಅಲ್ಪಮತಕ್ಕೆ ಕುಸಿದಿರುವ ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸೋಮವಾರ ವಿಶ್ವಾಸಮತ ಯಾಚಿಸಲಿರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಲ್ಲಾ ಶಾಸಕರಿಗೆ ಕಲಾಪದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ವಿಪ್‌ ಜಾರಿ ಮಾಡಿದೆ. ವಿಶ್ವಾಸ ಮತ ಯಾಚನೆ ವೇಳೆ ಸರ್ಕಾರದ ವಿರುದ್ಧವಾಗಿ ಮತ ಚಲಾಯಿಸಬೇಕು ಎಂದೂ ತಾಕೀತು ಮಾಡಲಾಗಿದೆ.

ಕಾಂಗ್ರೆಸ್‌ ಸರ್ಕಾರಕ್ಕೆ ಬಹುಮತವೇ ಇಲ್ಲ. ರಾಜ್ಯಪಾಲರು ಹೇಳಿರುವ ಪ್ರಕಾರ ಕಮಲ್‌ನಾಥ್‌ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಈ ಅಂಶವನ್ನು ರಾಜ್ಯಪಾಲರು ಸಿಎಂಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
– ನರೋತ್ತಮ್‌ ಮಿಶ್ರಾ, ಬಿಜೆಪಿ ಮುಖ್ಯ ಸಚೇತಕ

Advertisement

Udayavani is now on Telegram. Click here to join our channel and stay updated with the latest news.

Next