ಭೋಪಾಲ್: ಮಧ್ಯಪ್ರದೇಶದ ಸರ್ಕಾರಿ ಉದ್ಯೋಗ ರಾಜ್ಯದ ಜನತೆಗೆ ಮಾತ್ರ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ (ಆಗಸ್ಟ್ 18,2020) ತಿಳಿಸಿದ್ದು, ಈ ಬಗ್ಗೆ ಶೀಘ್ರವೇ ಕಾನೂನು ರೂಪಿಸಲಾಗುವುದು ಎಂದು ಹೇಳಿದರು.
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾವಿರಾರು ಮಂದಿ ಉದ್ಯೋಗ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ಘೋಷಿಸಿರುವುದು ವಿವಾದಕ್ಕೆ ಕಾರಣವಾಗಬಹುದು ಎಂದು ವರದಿ ತಿಳಿಸಿದೆ.
“ಮಧ್ಯಪ್ರದೇಶ ಸರ್ಕಾರ ಇಂದು ಮುಖ್ಯವಾದ ನಿರ್ಧಾರವನ್ನು ಕೈಗೊಂಡಿದೆ. ಮಧ್ಯಪ್ರದೇಶದಲ್ಲಿ ಕೇವಲ ರಾಜ್ಯದ ಯುವಕರಿಗೆ ಮಾತ್ರ ಸರ್ಕಾರಿ ಉದ್ಯೋಗ ನೀಡುವಂತೆ ಬೇಕಾದ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ. ಮಧ್ಯಪ್ರದೇಶದ ಯುವ ಸಂಪನ್ಮೂಲ ಮಧ್ಯಪ್ರದೇಶಕ್ಕೆ ಬಳಕೆಯಾಗಬೇಕು ಎಂದು ಚೌಹಾಣ್ ಬಿಡುಗಡೆ ಮಾಡಿರುವ ವಿಡಿಯೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮೊದಲು ಹೇಳಿಕೆ ನೀಡಿದ್ದ ಸಿಎಂ ಚೌಹಾಣ್ ಅವರು, ಮಧ್ಯಪ್ರದೇಶದಲ್ಲಿನ ಉದ್ಯೋಗದಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು. ಮಧ್ಯಪ್ರದೇಶ ಸರ್ಕಾರಿ ಉದ್ಯೋಗದಲ್ಲಿ ಯುವಕರಿಗೆ ಆದ್ಯತೆ. ನಮ್ಮ ರಾಜ್ಯದ ಯುವಕರಿಗೆ ಉದ್ಯೋಗ ಮೀಸಲಿಡುವುದು ನಮ್ಮ ಕರ್ತವ್ಯವಾಗಿದೆ ಎಂದು ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ತಿಳಿಸಿದ್ದರು.
ಅಷ್ಟೇ ಅಲ್ಲ ರಾಜ್ಯದಲ್ಲಿನ ಒಬಿಸಿ ಮೀಸಲಾತಿಯನ್ನು ಶೇ.14ರಿಂದ 27ಕ್ಕೆ ಏರಿಸಲು ಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುತ್ತಿರುವುದಾಗಿ ಚೌಹಾಣ್ ಹೇಳಿದರು. ಆದರೆ ಈ ಹೋರಾಟವನ್ನು ಜಬಲ್ಪುರ್ ಹೈಕೋರ್ಟ್ ತಡೆ ಹಿಡಿದಿದೆ ಎಂದು ತಿಳಿಸಿದರು.