ಭೋಪಾಲ್ : ‘ಮಂದ್‌ಸೋರ್‌ನಲ್ಲಿ ಪ್ರತಿಭಟನೆ ನಿರತ (ಐವರು) ರೈತರು ಸತ್ತದ್ದು ಪೊಲೀಸ್ ಫಯರಿಂಗ್‌ನಲ್ಲೇ’ ಎಂದು ಮಧ್ಯಪ್ರದೇಶ ಸರಕಾರ ಕೊನೆಗೂ ಒಪ್ಪಿಕೊಂಡಿದೆ.
ಮಧ್ಯಪ್ರದೇಶದ ಗೃಹ ಸಚಿವ ಭೂಪೇಂದ್ರ ಸಿಂಗ್ ಅವರು “ಸರಕಾರ ಕೈಗೊಂಡ ತನಿಖೆಯಲ್ಲಿ ರೈತರು ಮೃತಪಟ್ಟದ್ದು ಫೋಲಿಸ್ ಫಯರಿಂಗ್‌ನಿಂದಲೇ ಎಂಬುದು ದೃಢ ಪಟ್ಟಿದೆ’ ಎಂದು ಹೇಳಿರುವುದನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೊನ್ನೆ ಮಂಗಳವಾರ ಮಧ್ಯಪ್ರದೇಶದ ಮಂದ್‌ಸೋರ್‌ನಲ್ಲಿ ಪ್ರತಿಭಟನೆ ನಿರತರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಐವರು ರೈತರು ಮೃತಪಟ್ಟಿದ್ದರು. ರೈತರ ಸಾವು ಪೊಲೀಸ್ ಗುಂಡೇಟಿನಿಂದ ಆದದ್ದಲ್ಲ; ರೈತ ಪ್ರತಿಭಟನೆಯ ದಿಕ್ಕು ತಪ್ಪಿಸಲು ಯತ್ನಿಸಿದ ಸಮಾಜ ವಿರೋಧಿ ಶಕ್ತಿಗಳಿಂದ ಆದದ್ದು ಎಂದು ಈ ಮೊದಲು ಮಧ್ಯಪ್ರದೇಶ ಸರಕಾರ ಹೇಳಿತ್ತು.
ಪೊಲೀಸ್ ಗುಂಡಿಗೆ ಐವರು ರೈತರ ಸಾವು ಸಂಭವಿಸಿದ್ದರ ವಿರುದ್ಧ ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತರು ಇಂದು ಸರಕಾರಕ್ಕೆ ಬೆದರಿಕೆ ಹಾಕಿದ ಬೆನ್ನಿಗೇ ಗೃಹ ಸಚಿವ ಭೂಪೇಂದ್ರ ಸಿಂಗ್ ಅವರು “ಐವರು ರೈತರು ಸತ್ತದ್ದು ಪೊಲೀಸ್ ಫಯರಿಂಗ್‌ನಲ್ಲೇ ಎಂಬುದು ತನಿಖೆಯಿಂದ ಶ್ರುತಪಟ್ಟಿದೆ’ ಎಂದು ಹೇಳಿದರು.
ಇದೇ ವೇಳೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಜೂನ್ 1ರಿಂದ ಪ್ರತಿಭಟನೆ ನಿರತರಾಗಿರುವ ರೈತರಿಗೆ ತಮ್ಮ ಮುಷ್ಕರವನ್ನು ಕೊನೆಗೊಳಿಸುವಂತೆ, ಹಿಂಸೆಯನ್ನು ನಿಲ್ಲಿಸುವಂತೆ ಮನವಿ ಮಾಡಿದರು. ರೈತರು ಸಾಲ ಮನ್ನಾ ಕ್ಕಾಗಿ, ತಮ್ಮ ಬೆಳೆಗೆ ಉತ್ತಮ ಬೆಲೆ ಸಿಗಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ತೊಡಗಿದ್ದರು.
ಇಂದು ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹಿಂಸಾತ್ರಸ್ತ ಮಂದ್‌ಸೋರ್‌ಗೆ ಭೇಟಿ ನೀಡಲು ಮುಂದಾಗಿದ್ದಾರೆ. ಅವರಿಗೆ ಜಿಲ್ಲೆಯನ್ನು ಪ್ರವೇಶಿಸಲು ಬಿಡುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.