ಭೋಪಾಲ್: ಕೋವಿಡ್ 19 ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಪೊಲೀಸರು ಮತ್ತು ವೈದ್ಯರ ಮೇಲೆ ಮತ್ತೆ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಶೇಯೊಪುರ್ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಇಂದೋರ್ ಪ್ರದೇಶ ಕೋವಿಡ್ 19 ಹಾಟ್ ಸ್ಪಾಟ್ ಎಂದು ಗುರುತಿಸಲ್ಪಟ್ಟಿದ್ದು, ಇತ್ತೀಚೆಗೆ ಇಂದೋರ್ ನಿಂದ ಶೇಯೋಪುರ್ ಗೆ 21 ವರ್ಷದ ಗೋಪಾಲ್ ಶಿವ್ ಹರೆ ಎಂಬಾತ ಬಂದಿದ್ದ. ಆತನ ಆರೋಗ್ಯ ತಪಾಸಣೆ ನಡೆಸಲು ವೈದ್ಯ ಸಿಬ್ಬಂದಿ, ಪೊಲೀಸರು ಬಂದ ವೇಳೆ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಘಟನೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಶ್ರೀರಾಮ್ ಅವಾಸ್ಥಿ (52ವರ್ಷ) ಅವರ ತಲೆಗೆ ಏಟು ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನನ್ನ ಮಗನಿಗೆ ಏನೂ ಆಗಿಲ್ಲ ಆತ ಆರೋಗ್ಯವಾಗಿದ್ದು, ಈಗ ಮನೆಯಲ್ಲಿ ಇಲ್ಲ ಎಂದು ಗೋಪಾಲ್ ತಂದೆ ಗಂಗಾರಾಮ್ ಆರೋಗ್ಯ ತಪಾಸಣೆ ಮಾಡಲು ಬಂದ ಸಿಬ್ಬಂದಿಗೆ ತಿಳಿಸಿದ್ದರು.
ನಂತರ ತಂಡದ ವೈದ್ಯರಾದ ಪವನ್ ಉಪಾಧ್ಯಾಯ ಅವರು ಗ್ಯಾಸ್ ವಾನಿ ಪೊಲೀಸ್ ಠಾಣೆಗೆ ಕರೆ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಎಸ್ ಐ ಶ್ರೀರಾಮ್ ಅವಾಸ್ಥಿ ಅವರು ತಮ್ಮ ಮೂವರು ಸಿಬ್ಬಂದಿಗಳ ಜತೆ ಸ್ಥಳಕ್ಕೆ ಭೇಟಿ ನೀಡಿದ್ದರು. ಮಗನ ಆರೋಗ್ಯ ಪರೀಕ್ಷೆ ನಡೆಸಲು ಗ್ಯಾಸ್ ವಾನಿಗೆ ಕರೆತರುವಂತೆ ಗೋಪಾಲ್ ತಂದೆಗೆ ಎಸ್ ಐ ಸೂಚನೆ ನೀಡಿದ್ದರು.
ಈ ವೇಳೆ ಮಾತಿನ ಚಕಮಕಿ ನಡೆದು ಗೋಪಾಲ್ ಹಿರಿಯ ಪುತ್ರ ಹಾಗೂ ಸ್ಥಳೀಯರು ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿ ವಿವರಿಸಿದೆ. ಗೋಪಾಲ್ ಸೇರಿದಂತೆ ನಾಲ್ವರ ವಿರುದ್ಧ ಐಪಿಸಿ ಕಾಯ್ದೆಯಡಿ ದೂರು ದಾಖಲಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.