ಭೋಪಾಲ್: ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ಭಾನುವಾರ(ಆಗಸ್ಟ್ 09) 38 ಪುಟಗಳ ಕಿರುಹೊತ್ತಗೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕಲಾಪದಲ್ಲಿ ಸದಸ್ಯರು ಬಳಸುವ ಪಪ್ಪು, ಮಿಸ್ಟರ್ ಬಂಟಾಧಾರ್, ಡೋಂಗಿ ಹೀಗೆ 1,100 ಅಸಂಸದೀಯ ಶಬ್ದ, ವಾಕ್ಯಗಳ ಪಟ್ಟಿಯನ್ನು ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ವೀಕೆಂಡ್ ಕರ್ಫ್ಯೂ ನಡುವೆಯೂ ಹುಣಸೂರು ಮಾರಮ್ಮ ದೇವಸ್ಥಾನದಲ್ಲಿ ಭಕ್ತ ಜನಸಾಗರ
ಇದರಲ್ಲಿನ ಬಹುತೇಕ ಶಬ್ದಗಳನ್ನು ದೇಶದ ಹಿರಿಯ ರಾಜಕಾರಣಿಗಳು ಉಪಯೋಗಿಸುತ್ತಲೇ ಇರುತ್ತಾರೆ ಎಂಬುದನ್ನು ಗಮನಿಸಬೇಕು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್, ಸಂಸದೀಯ ವ್ಯವಹಾರಗಳ ಸಚಿವ ನರೋತ್ತಮ್ ಮಿಶ್ರಾ, ವಿಧಾನಸಭಾ ಸ್ಪೀಕರ್ ಗಿರೀಶ್ ಗೌತಮ್ ಈ ಬುಕ್ ಲೆಟ್ (ಕಿರುಹೊತ್ತಗೆ) ಅನ್ನು ಬಿಡುಗಡೆಗೊಳಿಸಿದ್ದಾರೆ.
ಆ ನಿಟ್ಟಿನಲ್ಲಿ ವಿಧಾನಸಭೆ ಕಲಾಪದಲ್ಲಿ ಅಸಂಸದೀಯ ಪದ ಬಳಕೆಯ ಪಟ್ಟಿಯಲ್ಲಿನ ಢೋಂಗಿ, ನಿಸ್ಪ್ರಯೋಜಕ, ಕಳ್ಳ, ಭ್ರಷ್ಟ, ಸರ್ವಾಧಿಕಾರಿ, ಗೂಂಡಾ, ಸುಳ್ಳುಗಾರ, ವ್ಯಭಿಚಾರದಲ್ಲಿ ತೊಡಗಿಕೊಳ್ಳುವ ವ್ಯಕ್ತಿ ಹೀಗೆ 1,100ಕ್ಕೂ ಅಧಿಕ ಶಬ್ದಗಳನ್ನು ಬಳಕೆ ಮಾಡುವುದನ್ನು ನಿಷೇಧಿಸಿದೆ ಎಂದು ವರದಿ ವಿವರಿಸಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಉತ್ತಮ ಗುಣಮಟ್ಟದ ಚರ್ಚೆ ನಡೆಯುತ್ತಿರುವ ವೇಳೆ, ತಮ್ಮ ಹೇಳಿಕೆಯ ಅಥವಾ ಚರ್ಚೆಯ ವೇಳೆ ಇಂತಹ ಅಸಂಸದೀಯ ಪದಗಳನ್ನು ಬಳಕೆ ಮಾಡುತ್ತಾರೆ ಎಂಬುದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಮಧ್ಯಪ್ರದೇಶ ವಿಧಾನಸಭೆ ಈ ಕಿರುಹೊತ್ತಗೆಯನ್ನು ಬಿಡುಗಡೆಗೊಳಿಸಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಸಿಎಂ, ಇದರಿಂದ ಸದಸ್ಯರು ಅಸಂಸದೀಯ ಪದ ಬಳಕೆಯನ್ನು ಉಪಯೋಗಿಸದಿರಲು ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.