Advertisement

7ರ ಬಾಲಕಿ ಮೇಲೆ ರಾಕ್ಷಸರ ಕ್ರೌರ್ಯ

06:00 AM Jul 01, 2018 | Team Udayavani |

ಮಾಂಡ್‌ಸರ್‌: ಮಧ್ಯಪ್ರದೇಶದ ಮಾಂಡ್‌ಸರ್‌ನಲ್ಲಿ ನಿರ್ಭಯಾ ಕೇಸನ್ನು ನೆನಪಿಸುವಂಥ ಅಮಾನುಷ ಕ್ರೌರ್ಯವೊಂದು ನಡೆದಿದ್ದು, ರಾಜ್ಯಾದ್ಯಂತ ಭಾರೀ ಪ್ರತಿಭಟನೆಗಳು ಆರಂಭವಾಗಿವೆ. ಬುಧವಾರ 7 ವರ್ಷದ ಬಾಲಕಿಯನ್ನು ಅಪಹರಿಸಿದ್ದ ದುಷ್ಕರ್ಮಿಗಳು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಅವಳ ಕತ್ತು ಸೀಳಿ, ನಿರ್ಜನ ಪ್ರದೇಶವೊಂದರಲ್ಲಿ ಎಸೆದು ಹೋಗಿದ್ದರು. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಪ್ರಸ್ತುತ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. “ಬಾಲಕಿಯ ಶರೀರದೆಲ್ಲೆಡೆ ಕಚ್ಚಿದ ಗಾಯಗಳು ಕಂಡುಬಂದಿದ್ದು, ಆಕೆಯ ಮೂಗಿಗೆ ಭಾರೀ ಹಾನಿಯಾಗಿದೆ. ಆಕೆಯ ಗುಪ್ತಾಂಗದೊಳಕ್ಕೆ ಸರಳನ್ನು ತುರುಕಿರುವ ಕಾರಣ, ದೊಡ್ಡ ಕರುಳಿನ ಕೆಳತುದಿಯ ಭಾಗ ಛಿದ್ರಗೊಂಡಿದೆ. ಆಕೆಯನ್ನು ರಕ್ಷಿಸಲು ನಾವು ಆಕೆಯ ಕೆಲವು ನರಗಳನ್ನು ಕತ್ತರಿಸಿ, ಮೂರು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದೇವೆ. ಸದ್ಯಕ್ಕೆ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಅತ್ಯಾಚಾರಿಗಳು ಭೂಮಿಯಲ್ಲಿ ಬದುಕಲು ಅರ್ಹರಲ್ಲ ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಕೂಡ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಒಂದು ದೇಶವಾಗಿ ನಾವು ನಮ್ಮ ಮಕ್ಕಳನ್ನು ರಕ್ಷಿಸಬೇಕು. ಸಂತ್ರಸ್ತೆಗೆ ಬೇಗ ನ್ಯಾಯ ಸಿಗಲಿ ಎಂದು ಹೇಳಿದ್ದಾರೆ.

ಥ್ಯಾಂಕ್ಸ್‌ ಹೇಳಿ: ಇನ್ನೊಂದೆಡೆ, ಬಾಲಕಿಯ ಹೆತ್ತವರನ್ನು ಭೇಟಿಯಾಗಲು ಬಂದ ಬಿಜೆಪಿ ನಾಯಕರು, ಸಂತ್ರಸ್ತೆಯ ಕುಟುಂಬದ ಜತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜತೆಗೆ, “ಸಂಸದರು ನಿಮ್ಮನ್ನು ನೋಡಲೆಂದೇ ಇಲ್ಲಿಯವರೆಗೂ ಬಂದಿದ್ದಾರೆ. ಅದಕ್ಕೆ ಅವರಿಗೆ ಥ್ಯಾಂಕ್ಸ್‌ ಹೇಳಿ’ ಎಂದು ನಾಯಕರೊಬ್ಬರು ಸಂತ್ರಸ್ತೆಯ ಹೆತ್ತವರಿಗೆ ಸೂಚಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next