ಮಧುಗಿರಿ: ಪಟ್ಟಣದ ಲೋಕೋಪಯೋಗಿ ಇಲಾಖೆಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಲಕ್ಷ್ಮೀನರಸಯ್ಯ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಗಂಗೆಯ ಪ್ರವಾಸಿ ಮಂದಿರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಇವರು ಮೂಲತಃ ಶಿರಾ ತಾಲೂಕಿನ ಸೋರೆಕುಂಟೆಯ ವಾಸಿಯಾಗಿದ್ದು ಮಧುಗಿರಿಯ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಮಧುಗಿರಿ ಲೋಕೋಪಯೋಗಿ ಕಚೇರಿಯ ವ್ಯವಸ್ಥಾಪಕರಾಗಿ ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೂಲಗಳ ಪ್ರಕಾರ ಇಲಾಖೆಯ ಇಬ್ಬರು ಸಿಬಂದಿಗಳ ಎಸ್. ಆರ್ .ಬುಕ್ ಗಳನ್ನು ಆಟೋದಲ್ಲಿ ಕಳೆದು ಕೊಂಡಿದ್ದರಿಂದ ನೆಲಮಂಗಲದ ಆಟೋ ನಿಲ್ದಾಣ ಸೇರಿದಂತೆ ತಮ್ಮ ಕಚೇರಿಯಲ್ಲಿ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ಬುಕ್ ಗಳು ದೊರೆಯದ ಹಿನ್ನೆಲೆಯಲ್ಲಿ ಮನ ನೊಂದು ನೆಲಮಂಗಲ ತಾಲೂಕಿನ ಶಿವಗಂಗೆಯ ಪ್ರವಾಸಿ ಮಂದಿರದ ಶೌಚಾಲಯದಲ್ಲಿ ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ದಾಬಸ್‌ಪೇಟೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ.