ಉಡುಪಿ: ಮಂಗಳೂರು ಸಮೀಪದ ಉಡುಪಿ ಮತ್ತು ಶೃಂಗೇರಿಗಳಲ್ಲಿ ತಮ್ಮ ಜ್ಞಾನ ಪ್ರಸಾರ ಕೇಂದ್ರವನ್ನು ಸ್ಥಾಪಿಸಿರುವ ಶ್ರೀ ಮಧ್ವಾಚಾರ್ಯ ಮತ್ತು ಶ್ರೀ ಶಂಕರಾಚಾರ್ಯ ಅವರ ಹೆಸರನ್ನು ಪರಶುರಾಮ ಕ್ಷೇತ್ರದಲ್ಲಿರುವ ಮಂಗಳೂರು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವುದು ಅರ್ಥಪೂರ್ಣ ಮತ್ತು ಮೌಲಿಕವೆನಿಸುತ್ತದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
ಅಯೋಧ್ಯೆಯಲ್ಲಿ ರಾಮನ ಹೆಸರಿನಲ್ಲಿ ವಿಮಾನ ನಿಲ್ದಾಣ ಮೂಡಿಬಂದಂತೆ ದಾರ್ಶನಿಕ ಆಚಾರ್ಯರ ನೆಲೆವೀಡಾದ ದಕ್ಷಿಣ ಭಾರತದ ವಿಮಾನ ನಿಲ್ದಾಣಕ್ಕೆ ಮಧ್ವಶಂಕರರ ನಾಮಕರಣ ಮಾಡುವುದು ದಾರ್ಶನಿಕ ಪರಂಪರೆಗೆ ಗೌರವ ಸಲ್ಲಿಸಿದಂತಾಗುತ್ತದೆ. ರಾಮಾನುಜಾಚಾರ್ಯ, ಬಸವಣ್ಣ ಮೊದಲಾದ ಮಹಾ ಧಾರ್ಮಿಕ ನೇತಾರರ ಮೂಲಸ್ಥಳಗಳ ಸಮೀಪದಲ್ಲಿರುವ ವಿಮಾನ ನಿಲ್ದಾಣಗಳಿಗೂ ಆ ಧಾರ್ಮಿಕ ನೇತಾರರ ಹೆಸರನ್ನು ಇಡುವುದು ಉಳಿದೆಲ್ಲ ಆಯ್ಕೆಗಳಿಗಿಂತಲೂ ಪ್ರಶಸ್ತ ಎಂದು ಸ್ವಾಮೀಜಿ ಹೇಳಿದ್ದಾರೆ.