Advertisement

ಮಾಧವ-ಮಾನವ ಸೇವೆಯಿಂದ ಬದುಕು ಸಾರ್ಥಕ

09:14 AM Jul 23, 2019 | Sriram |

ಉಡುಪಿ: ಜೀವನದಲ್ಲಿ ಸಾರ್ಥಕ್ಯ ಪಡೆಯಬೇಕಾದರೆ ದೇಹದ ಜತೆಗೆ ದೇವರು ಮತ್ತು ದೇಶವನ್ನು ಕೂಡ ಪ್ರೀತಿಸಬೇಕು. ಶ್ರೀಕೃಷ್ಣನ ಸೇವೆಯಲ್ಲಿ ತನ್ನನ್ನು ಅರ್ಪಿಸಿಕೊಂಡ ಭುವನೇಂದ್ರ ಕಿದಿಯೂರು ಅವರು ಮಾಧವ ಮತ್ತು ಮಾನವನ ಸೇವೆಯಲ್ಲಿ ಸಾರ್ಥಕ್ಯ ಕಾಣುತ್ತಿದ್ದಾರೆ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

Advertisement

ಹಿರಿಯ ಉದ್ಯಮಿ, ದಾನಿ, ಧಾರ್ಮಿಕ, ಸಾಮಾಜಿಕ ಮುಂದಾಳು ಭುವನೇಂದ್ರ ಕಿದಿಯೂರು ಅವರ75ನೇ ಸಂವತ್ಸರ ಪ್ರಯುಕ್ತ ಅಭಿನಂದನಸಮಿತಿ ವತಿಯಿಂದ ಜರಗಿದ ‘ರತ್ನೋತ್ಸವ- ಅಭಿನಂದನ ಸಮಾರಂಭ’ದಲ್ಲಿ ಕಿದಿಯೂರು ಅವರನ್ನು ಅಭಿನಂದಿಸಿ ಪೇಜಾವರ ಶ್ರೀಗಳು ಅನುಗ್ರಹ ಸಂದೇಶ ನೀಡಿದರು.

ಭಗವಂತನಿಗೆ ಅಂಟಿಕೊಂಡರೆ ನಿರ್ಭಯ
ಸಂಸಾರವೆಂಬುದು ಬೀಸುವ ಕಲ್ಲಿನಂತೆ. ಕಲ್ಲುಗಳ ನಡುವೆ ಸಿಲುಕಿದ ಧಾನ್ಯಗಳು ಪುಡಿಯಾಗುತ್ತವೆ. ಆದರೆಅದರ ಗೂಟಕ್ಕೆ ಅಂಟಿಕೊಂಡ ಧಾನ್ಯಗಳು ಪುಡಿಯಾಗದೆ ಉಳಿಯುತ್ತವೆ. ಅಂತೆಯೇ ಸಂಸಾರದ ಘರ್ಷಣೆಯಲ್ಲಿಯೂ ಮನುಷ್ಯರು ನುಚ್ಚುನೂರು ಆಗಬಹುದು. ಇಹದಲ್ಲಿ ಭಗವಂತನೇನಮಗೆ ಗೂಟ. ಅವನನ್ನು ಅಪ್ಪಿಕೊಂಡರೆ ನಮಗೆ ಭಯವಿಲ್ಲ. ದೇವರಿಂದ ದೂರ ಹೋದಂತೆ ಪುಡಿಯಾಗುವ ಪಾಡು ನಮ್ಮದಾಗುತ್ತದೆ ಎಂದು ಶ್ರೀಗಳು ಹೇಳಿದರು.

ಹಣ ಸಮಾಜಕ್ಕೆ ವಿನಿಯೋಗ
ದೋಣಿ ಸಾಗಲು ನೀರು ಬೇಕು. ಆದರೆ ಅದು ದೋಣಿಯೊಳಗೆ ಬಂದರೆಅಪಾಯ. ಒಳಸೇರಿದ ನೀರು ಹೆಚ್ಚಾದರೆ ದೋಣಿ ಮುಳುಗಬಹುದು. ಅದನ್ನು ಹೊರಗೆ ಚೆಲ್ಲಬೇಕು. ಅಂತೆಯೇ ಮನೆ ನಡೆಯಲು ಹಣಬೇಕಾದರೂ ಹೆಚ್ಚು ಕೂಡಿ ಹಾಕಿದರೆ ತೊಂದರೆ. ಅದನ್ನು ಸಮಾಜಕ್ಕೆ ವಿನಿಯೋಗಿಸಿದರೆ ಯಾವ ತೊಂದರೆಯೂ ಇಲ್ಲ ಎಂದು ಶ್ರೀಗಳು ಹೇಳಿದರು.

ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಉಡುಪಿ ಮದರ್‌ ಆಫ್ ಸಾರೋಸ್‌ ಚರ್ಚ್‌ ಧರ್ಮಗುರು ರೆ|ಫಾ| ವಲೇರಿಯನ್‌ ಮೆಂಡೋನ್ಸಾ ಶುಭ ಕೋರಿದರು. ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್‌. ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಣಿಪಾಲ ಮೀಡಿಯಾ ನೆಟ್ವರ್ಕ್‌ ಲಿ.ನ ಆಡಳಿತ ನಿರ್ದೇಶಕ ಟಿ. ಸತೀಶ್‌ ಯು. ಪೈ, ‘ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ, ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಕೋಟ ಗೀತಾನಂದ ಫೌಂಡೇಶನ್‌ ಅಧ್ಯಕ್ಷ ಆನಂದ ಸಿ.ಕುಂದರ್‌, ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಶುಭ ಹಾರೈಸಿದರು. ಭುವನೇಂದ್ರ ಕಿದಿಯೂರು ಅವರ ಪತ್ನಿ ಹೀರಾ ಭುವನೇಂದ್ರ ಕಿದಿಯೂರು ಅವರು ಉಪಸ್ಥಿತರಿದ್ದರು. ಜ್ಯೋತಿಷಿ ಕಬಿಯಾಡಿ ಜಯರಾಮ ಆಚಾರ್ಯ ಅಭಿನಂದನ ಭಾಷಣ ಮಾಡಿದರು.

Advertisement

ಅಭಿನಂದನ ಸಮಿತಿ ಅಧ್ಯಕ್ಷ ಡಾ| ಜಿ.ಶಂಕರ್‌ ಸ್ವಾಗತಿಸಿ, ಹರಿಯಪ್ಪ ಕೋಟ್ಯಾನ್‌ಪ್ರಸ್ತಾವನೆಗೈದರು. ಮುರಲಿ ಕಡೆಕಾರ್‌ಕಾರ್ಯಕ್ರಮ ನಿರ್ವಹಿಸಿ ಗಣೇಶ್‌ ರಾವ್‌ವಂದಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಅಭಿನಂದನ ಪತ್ರ ವಾಚಿಸಿದರು. ಹಾರಾರ್ಪಣೆ ಪಟ್ಟಿಯನ್ನು ರಮೇಶ್‌ ಕಿದಿಯೂರು ವಾಚಿಸಿದರು.

ಪೇಜಾವರ ಶ್ರೀಗಳಿಗೆ ಸಮ್ಮಾನ ನನ್ನಾಸೆ

ಇಂಥ ವಿಭಿನ್ನ ಕಾರ್ಯಕ್ರಮಕ್ಕೆ ಕಾರಣರಾದ ಡಾ| ಜಿ. ಶಂಕರ್‌ ಅವರಿಗೆ ಅನಂತ ಕೃತಜ್ಞತೆಗಳು. ನನ್ನ ಅಭಿನಂದನೆ ಸಮಾರಂಭ ಮಾಡುವ ಬಗ್ಗೆ ಅವರು ಕೇಳಿದಾಗ, ‘ನನಗೆ ಸಮ್ಮಾನ ಬೇಡ. ನಡೆದಾಡುವ ದೇವರಾದ ಪೇಜಾವರ ಶ್ರೀಗಳಿಗೆ ಮುಂದಿನ ವರ್ಷ 90 ವರ್ಷಗಳು ತುಂಬುತ್ತವೆ, ಅವರಿಗೆ ಸಮ್ಮಾನ ಮಾಡಿದರೆ ಒಳ್ಳೆಯದು’ ಎಂದಿದ್ದೆ. ಆಗ ಜಿ. ಶಂಕರ್‌ ಅವರು, ‘ಮಾಡೋಣ. ನಾನೇ ಮುಂದಾಳತ್ವ ವಹಿಸುತ್ತೇನೆ, ಲಕ್ಷ ಜನ ಸೇರಿಸೋಣ’ ಎಂದು ಅಭಯ ಕೊಟ್ಟಿದ್ದಾರೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು.
-ಭುವನೇಂದ್ರ ಕಿದಿಯೂರು

ಭುವನೇಂದ್ರ ಕಿದಿಯೂರು ಅವರಿಗೆ ಭಗವಂತನ ಭಕ್ತಿಯೇ ಶಕ್ತಿ. ದೇವರ ಅನುಗ್ರಹ, ಸಮಾಜದ ಸಹಕಾರವಿಲ್ಲದೆ ಯಾರೂ ಶ್ರೀಮಂತರಾಗಲು ಸಾಧ್ಯವಿಲ್ಲ. ಗಳಿಸಿದ ಸಂಪತ್ತನ್ನು ದೇವರು, ಸಮಾಜಕ್ಕೆ ಅರ್ಪಿಸಿದರೆ ಮಾತ್ರ ಜೀವನಕ್ಕೆ ನ್ಯಾಯ. ಕಿದಿಯೂರು ಅವರಿಗೆ ತುಂಬಿದ ಹೃದಯದಿಂದ ಹರಸುತ್ತಿದ್ದೇನೆ; ಭಗವಂತನ ಪೂರ್ಣ ಅನುಗ್ರಹವಾಗಲಿ, ಯಶಸ್ಸು ನಿರಂತರವಾಗಿರಲಿ.
– ಶ್ರೀ ವಿಶ್ವೇಶತೀರ್ಥ ಶ್ರೀಪಾದರು,ಪೇಜಾವರ ಮಠಾಧೀಶರು
Advertisement

Udayavani is now on Telegram. Click here to join our channel and stay updated with the latest news.

Next