ಹೊಸಪೇಟೆ: ನಾನು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ತಪ್ಪು ಮಾಡಿರುವೆ. ಜನ ಬಯಸಿದಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಕಣಕ್ಕೆ ಇಳಿಯಬೇಕಿತ್ತು. ರಾಜಕೀಯದಲ್ಲಿ ಕರುಣೆ ಎಂಬುದು ಇರಬಾರದು, ನಾನು ಬಿಜೆಪಿ ಟಿಕೆಟ್ ಬಿಟ್ಟುಕೊಟ್ಟು ತಪ್ಪು ಮಾಡಿರುವೆ. ಈ ಕುರಿತು ಜನರ ಕ್ಷಮೆಯಾಚಿಸುವೆ ಎಂದು ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ನುಡಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಪಕ್ಷಗಳ ನಾಯಕರಾಗಬಾರದು. ಜನರ ನಾಯಕರಾಗಬೇಕು. ಯಾವುದೇ ನಾಯಕರಿಗೆ ಜನರು ಮತ್ತು ಬೆಂಬಲಿಗರು ಮುಖ್ಯ. ಅವರ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು. ನಾವು ಆ ರೀತಿ ನಡೆದುಕೊಳ್ಳಲಿಲ್ಲ ಎಂಬ ಬೇಸರವೂ ಇದೆ ಎಂದರು.
ಲೋಕಸಭೆ ಚುನಾವಣೆ ವೇಳೆಯಲ್ಲೇ ಬಿಜೆಪಿ ವರಿಷ್ಠರಿಗೆ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂದು ಹೇಳಿದ್ದೆ. ಕಳೆದ ಮೂರು ವರ್ಷಗಳಿಂದಲೂ ನನಗೆ ಪಕ್ಷದ ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಆಹ್ವಾನ ನೀಡಿಲ್ಲ. ನಾನು ಉಪಚುನಾವಣೆಯಲ್ಲಿ ಆನಂದ್ ಸಿಂಗ್ ಅವರಿಗೆ ಎಂಎಲ್ಸಿ ಮಾಡಿ, ನನಗೆ ಟಿಕೆಟ್ ನೀಡಿ ಎಂದು ಕೇಳಿಕೊಂಡಿದ್ದೆ. ಆದರೆ ನಾವು ಮಾತುಕೊಟ್ಟಿದ್ದೇವೆ. ಮುಂದಿನ ಚುನಾವಣೆಗೆ ನಿಮಗೆ ಟಿಕೆಟ್ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ರಾಜ್ಯ ಕಾರ್ಯಕಾರಿಣಿ ಸಭೆ ಹೊಸಪೇಟೆಯಲ್ಲೇ ನಡೆಯುತ್ತಿದ್ದರೂ ನನಗೆ ಇದುವರೆಗೆ ಆಹ್ವಾನ ಬಂದಿಲ್ಲ. ಕಾದು ನೋಡೋಣ ಎಂದರು.
ಸದ್ಯ ನಾನು ಬಿಜೆಪಿ, ಕಾಂಗ್ರೆಸ್ ಅಂತ ಇಲ್ಲ. ಯಾವುದೇ ಪಕ್ಷದ ಜತೆಗೆ ಗುರುತಿಸಿಕೊಳ್ಳದೇ ತಟಸ್ಥವಾಗಿರುವೆ. ಜನರು ಮತ್ತು ಬೆಂಬಲಿಗರ ಇಚ್ಛೆಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ. ವಿಧಾನಸಭೆ ಚುನಾವಣೆಗೆ ಜನರ ನಿರೀಕ್ಷೆಯಂತೆ ಕಣದಲ್ಲಿ ಇರುವೆ. ಒಂದು ವೇಳೆ ತಾಪಂ, ಜಿಪಂ ಚುನಾವಣೆ ಬೇಗನೆ ಬಂದರೆ, ನನ್ನ ಬೆಂಬಲಿಗರನ್ನು ಕಣಕ್ಕೆ ಇಳಿಸುವ ಕುರಿತೂ ಆಲೋಚಿಸುವೆ ಎಂದು ಹೇಳಿದರು. ಮುಖಂಡರಾದ ಸಂಗಪ್ಪ, ಗುಂಡಿ ರಾಘವೇಂದ್ರ ಇದ್ದರು.