Advertisement

ಇಂದು ‘ಮೇಡ್‌ ಇನ್‌ ಚೈನಾ’ ರಿಲೀಸ್‌

02:34 PM Jun 17, 2022 | Team Udayavani |

ಕನ್ನಡದ ಮೊದಲ ವರ್ಚುವಲ್‌ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಅದು “ಮೇಡ್‌ ಇನ್‌ ಚೈನಾ’. ನಾಗಭೂಷಣ್‌ ಹಾಗೂ ಪ್ರಿಯಾಂಕಾ ತಿಮ್ಮೇಶ್‌ ನಾಯಕ-ನಾಯಕಿಯಾಗಿರುವ ಈ ಚಿತ್ರ ಆರಂಭದಿಂದ ಹಿಡಿದು ಕೊನೆವರೆಗೂ ವಿಡಿಯೋ ಕಾಲ್‌ ಮೂಲಕವೇ ನಡೆಯಲಿದೆ.

Advertisement

ಸಾಫ್ಟ್ವೇರ್‌ ಉದ್ಯೋಗಿಯೊಬ್ಬ ಚೀನಾಗೆ ಹೋದ ಸಂದರ್ಭದಲ್ಲಿ ಲಾಕ್‌ಡೌನ್‌ ಘೋಷಣೆಯಾಗುತ್ತದೆ. ಆತ ಕೋವಿಡ್‌ ಸೋಂಕಿತನ ಸಂಪರ್ಕಕ್ಕೆ ಬಂದಿರುವ ಕಾರಣ, ಆತನ ಮನೆಯನ್ನು ಸೀಲ್‌ಡೌನ್‌ ಮಾಡಲಾಗುತ್ತದೆ. ಇತ್ತ ಭಾರತದಲ್ಲಿ ಆತನ ಪತ್ನಿ ತುಂಬು ಗರ್ಭಿಣಿ. ಇಂಥ ಸನ್ನಿವೇಶದಲ್ಲಿ ಆತ ಅನುಭವಿಸುವ ತೊಳಲಾಟ, ದುಗುಡ, ದುಃಖದ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.

ಪ್ರೀತಮ್‌ ತೆಗ್ಗಿನಮನೆ ಈ ಚಿತ್ರದ ನಿರ್ದೇಶಕರು. “ಅಯೋಗ್ಯ’, “ಚಮಕ್‌’, “ರತ್ನ ಮಂಜರಿ’ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಮ್‌ ಅವರಿಗೆ ನಿರ್ದೇಶಕರಾಗಿ ಇದು ಚೊಚ್ಚಲ ಚಿತ್ರ. ನಿರ್ದೇಶನದ ಜೊತೆಗೆ ಗ್ರಾಫಿಕ್ಸ್‌, ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನೂ ಪ್ರೀತಮ್‌ ಅವರೇ ನಿರ್ವಹಿಸಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ಪ್ರೀತಮ್‌, “ಈಗಾಗಲೇ ಮಲಯಾಳಂನಲ್ಲಿ “ಸಿ ಯೂ ಸೂನ್‌’ ಹಾಗೂ ಬಾಲಿವುಡ್‌ನ‌ಲ್ಲಿ “ಸರ್ಚಿಂಗ್‌’ ಎನ್ನುವ ವರ್ಚುವಲ್‌ ಸಿನಿಮಾಗಳು ಬಂದಿದ್ದವು. ಇವರೆಡೂ ಸಿನಿಮಾಗಳು ಸಸ್ಪೆನ್ಸ್ ಥ್ರಿಲ್ಲರ್‌ ಜಾನರ್‌ ಸಿನಿಮಾಗಳಾಗಿದ್ದವು. ಇಂಥ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸೂಕ್ತ. ಆದರೆ ಚಿತ್ರಮಂದಿರಗಳಲ್ಲೂ ಇಂಥ ಸಿನಿಮಾವನ್ನು ಜನರು ವೀಕ್ಷಿಸಬೇಕು ಎನ್ನುವುದು ನಮ್ಮ ಆಸೆ. ಹೀಗಾಗಿ ನಮ್ಮ ಸಿನಿಮಾವನ್ನು ಕೇವಲ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಇದು ಫ್ಯಾಮಿಲಿ ಡ್ರಾಮಾ ಆಗಿದ್ದು, ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ’ ಎಂದರು.

ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನಡಿ ಈ ಸಿನಿಮಾವನ್ನು ನಿರ್ಮಾಪಕ ಟಿ. ಆರ್‌ ಚಂದ್ರಶೇಖರ್‌ ಪ್ರಸ್ತುತಪಡಿಸುತ್ತಿದ್ದಾರೆ. ಎನ್.ಕೆ ಸ್ಟುಡಿಯೋಸ್‌ ನಡಿ ನಂದಕಿಶೋರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಗೌರವ್‌ ಶೆಟ್ಟಿ, ಅಶ್ವಿ‌ನ್‌ ರಾವ್‌ ಪಲ್ಲಕ್ಕಿ, ಅರುಣಾ ಬಾಲರಾಜ್‌, ರವಿ ಭಟ್‌ ಕೂಡ ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next