Advertisement

ಬನ್ನಿರಿ ಬೆಂಗಳೂರಿಗೆ… : ಮೇಡ್‌ ಇನ್‌ ಬೆಂಗಳೂರು ಹಾಡು ಬಿಡುಗಡೆ

03:21 PM Aug 17, 2022 | Team Udayavani |

ಬೆಂಗಳೂರು ಮಹಾನಗರಕ್ಕೆ “ಗಾರ್ಡನ್‌ ಸಿಟಿ’, “ಸಿಲಿಕಾನ್‌ ಸಿಟಿ’ ಎಂಬ ಹಲವು ಬಿರುದುಗಳಿವೆ. ಇತ್ತೀಚೆಗೆ ಜಾಗತಿಕ ಭೂಪಟದಲ್ಲಿ ಬೆಂಗಳೂರು “ಸ್ಟಾರ್ಟಪ್‌ ಹಬ್‌’ ಎಂದೇ ಕರೆಸಿಕೊಳ್ಳುತ್ತಿದೆ. ಅದರಲ್ಲೂ ಕಳೆದ ಏಳೆಂಟು ವರ್ಷಗಳಿಂದ ನೂರಾರು ಸ್ಟಾರ್ಟಪ್ಸ್‌ ಬೆಂಗಳೂರಿನಲ್ಲಿ ಆರಂಭಗೊಂಡು, ವಿಶ್ವವಿಖ್ಯಾತವಾಗುತ್ತಿವೆ. ಈಗ ಇದೇ ಬೆಂಗಳೂರಿನ ಸ್ಟಾರ್ಟಪ್‌ ವಿಷಯವನ್ನು ಇಟ್ಟುಕೊಂಡು, ಇಲ್ಲೊಂದು ಹೊಸಬರ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

Advertisement

ಅಂದಹಾಗೆ, ಆ ಸಿನಿಮಾದ ಹೆಸರು, “ಮೇಡ್‌ ಇನ್‌ ಬೆಂಗಳೂರು’. ಸ್ಟಾರ್ಟಪ್‌ ಶುರುಮಾಡಬೇಕಾದರೆ, ಎದುರಾಗುವ ಸಮಸ್ಯೆ, ಸವಾಲುಗಳು, ಅದೆಲ್ಲವನ್ನು ಎದುರಿಸುವ ರೀತಿ ಹೀಗೆ ಎಲ್ಲವನ್ನು ಈ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದಿಡಲು ಹೊರಟಿದೆ ಚಿತ್ರತಂಡ. ಈಗಾಗಲೇ ಸದ್ದಿಲ್ಲದೆ “ಮೇಡ್‌ ಇನ್‌ ಬೆಂಗಳೂರು’ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮೊದಲ ಹಾಡನ್ನು ಬಿಡುಗಡೆಗೊಳಿಸಿದೆ.

ಹಿರಿಯ ನಿರ್ದೇಶಕ ಭಗವಾನ್‌ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು, “ಮೇಡ್‌ ಇನ್‌ ಬೆಂಗಳೂರು’ ಸಿನಿಮಾದ ಮೊದಲ ಪೋಸ್ಟರ್‌ ಮತ್ತು ಹಾಡನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. “ರಜನಿ ಥರ್ಸ್‌ಡೇ ಸ್ಟೋರಿಸ್‌’ ಬ್ಯಾನರ್‌ನಲ್ಲಿ ಬಾಲಕೃಷ್ಣ ಬಿ. ಎಸ್‌ ನಿರ್ಮಿಸುತ್ತಿರುವ “ಮೇಡ್‌ ಇನ್‌ ಬೆಂಗಳೂರು’ ಸಿನಿಮಾಕ್ಕೆ ಪ್ರದೀಪ್‌ ಶಾಸ್ತ್ರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಹಿರಿಯ ನಟ ಅನಂತ ನಾಗ್‌, ಮಧುಸೂದನ್‌ ಗೋವಿಂದ, ಸಾಯಿಕುಮಾರ್‌, ಪ್ರಕಾಶ್‌ ಬೆಳವಾಡಿ, ಪುನೀತ್‌ ಮಂಜ, ವಂಶೀಧರ್‌, ಹಿಮಾಂಶಿ ವರ್ಮಾ, ಶಂಕರ್‌ ಮೂರ್ತಿ, ವಿನೀತ್‌, ಮಂಜುನಾಥ ಹೆಗ್ಡೆ, ರಮೇಶ್‌ ಭಟ್‌ ಮೊದಲಾದವರು “ಮೇಡ್‌ ಇನ್‌ ಬೆಂಗಳೂರು’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ, “ಮೇಡ್‌ ಇನ್‌ ಬೆಂಗಳೂರು’ ಸಿನಿಮಾದ “ಬನ್ನಿರಿ ಬೆಂಗಳೂರಿಗೆ…’ ಎಂಬ ಹಾಡಿನಲ್ಲಿ ಬೆಂಗಳೂರಿನ ಜನ- ಜೀವನ ಮತ್ತು ಭಾಷಾ ವೈವಿಧ್ಯತೆಯನ್ನು ತೆರೆದಿಡಲಾಗಿದೆ. ಅಶ್ವಿ‌ನ್‌ ಪಿ. ಕುಮಾರ್‌ ಸಂಗೀತ ಸಂಯೋಜನೆಯ, ಈ ಒಂದೇ ಹಾಡಿನಲ್ಲಿ ಸುಮಾರು ಹನ್ನೊಂದು ವಿವಿಧ ಭಾಷೆಯ ಸಾಲುಗಳನ್ನು ಬಳಸಿ ಸಾಹಿತ್ಯ ರಚಿಸಲಾಗಿದೆ.

Advertisement

ಹರ್ಷ ಕಂಬದ ರಂಗಯ್ಯ ಮೊದಲಾದ ಗಾಯಕರು ಈ ಹಾಡಿಗೆ ಧ್ವನಿಯಾಗಿರುವುದರ ಜೊತೆಗೆ, ಹಾಡಿನಲ್ಲಿ ತೆರೆಮೇಲೂ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಚಿತ್ರದ ನಿರ್ಮಾಪಕ ಬಾಲಕೃಷ್ಣ ಬಿ. ಎಸ್‌, ನಟರಾದ ಮಧುಸೂದನ್‌ ಗೋವಿಂದ್‌, ಪುನೀತ್‌ ಮಂಜ, ವಂಶೀಧರ್‌, ಸಂಕಲನಕಾರ ಪ್ರಶಾಂತ್‌ ನಾಯಕ್‌ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ತಮ್ಮ ಅನುಭವ ಹಂಚಿಕೊಂಡರು. ಸದ್ಯ ಪ್ರಚಾರ ಕಾರ್ಯದಲ್ಲಿರುವ “ಮೇಡ್‌ ಇನ್‌ ಬೆಂಗಳೂರು’ ಸಿನಿಮಾವನ್ನು ಸೆಪ್ಟೆಂಬರ್‌ ವೇಳೆಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next