Advertisement

ಮದ್ದೂರು: ಜನಸ್ನೇಹಿಯಾಗದ ಕೆ.ಹೊನ್ನಲಗೆರೆ ಅಟಲ್‌ ಜೀ ಕೇಂದ್ರ

05:41 PM Apr 04, 2024 | Team Udayavani |

ಉದಯವಾಣಿ ಸಮಾಚಾರ
ಮದ್ದೂರು: ತಾಲೂಕಿನ ಕೆ.ಹೊನ್ನಲಗೆರೆ ಅಟಲ್‌ ಜೀ ಜನಸ್ನೇಹಿ ಕೇಂದ್ರ (ನಾಡಕಚೇರಿ) ಅವ್ಯವಸ್ಥೆಯ ಆಗರವಾಗಿದ್ದು, ನಾಡಕಚೇರಿ ಜನಸ್ನೇಹಿಯಾಗಿ ಉಳಿದಿಲ್ಲ. ಕಚೇರಿ ತುಂಬಾ ಸಮಸ್ಯೆಗಳ ಸರಮಾಲೆ ತಾಂಡವ ವಾಡುತ್ತಿದೆ. ಸಮಸ್ಯೆಗಳ ಪರಿಹಾರಕ್ಕೆಂದು ನಾಗರಿಕರು ಮತ್ತಷ್ಟು ಪರದಾಡುವಂತಾಗಿದ್ದು, ತಾಲೂಕು ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ತಾಲೂಕಿನ ಕಸಬಾ ಕಂದಾಯ ವಿಭಾಗದ ಎರಡನೇ ವೃತ್ತಕ್ಕೆ ಒಳಪಡುವ ಹತ್ತಾರು ಹಳ್ಳಿಗಳು, ಸಾರ್ವಜನಿಕರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ವೃದ್ಧರು, ಕಂದಾಯ ಇಲಾಖೆ ಹಾಗೂ ಇನ್ನಿತರೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ಸದರಿ ಕೇಂದ್ರಕ್ಕೆ ದಿನನಿತ್ಯ ಬಂದು ಹೋಗುತ್ತಿದ್ದಾರೆ. ಆದರೆ, ಕೇಂದ್ರದಲ್ಲಿನ ಹಲವು ಸಮಸ್ಯೆಗಳು ನಾಗರಿಕರ ಬೇಸರಕ್ಕೆ ಕಾರಣವಾಗಿದೆ.

ಮೌನಕ್ಕೆ ಶರಣಾದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು: ರೈತರು, ನಾಗರಿಕರಿಗೆ ಉತ್ತಮ ಸೇವೆ ದೊರೆಯಲೆಂಬ ಉದ್ದೇಶದಿಂದ ಅಟಲ್‌ ಜೀ ಜನಸ್ನೇಹಿ ಕೇಂದ್ರ ತೆರೆಯಲಾಗಿದೆ. ಆದರೆ, ಕೆ.ಹೊನ್ನಲಗೆರೆ ನಾಡಕಚೇರಿ ಯಲ್ಲಿ ಉದ್ದೇಶಿತ
ಕಾರ್ಯ ಮಾತ್ರ ಈಡೇರಿಲ್ಲ. ಅಧಿಕಾರಿಗಳಾಗಲೀ, ಚುನಾಯಿತ ಪ್ರತಿನಿಧಿಗಳಾಗಲೀ, ಇಲ್ಲಿನ ಸಮಸ್ಯೆಗಳು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಆಡಳಿತ ವೈಫ‌ಲ್ಯಕ್ಕೆ ಹಿಡಿದ ಕೈಗನ್ನಡಿ.

ನಾಡಕಚೇರಿಗೆ ಮದ್ದೂರು ತಾಲೂಕು ಕೇಂದ್ರ ಸ್ಥಾನಕ್ಕೆ ಹೊಂದಿಕೊಂಡಿರುವ ಚನ್ನೇಗೌಡನ ದೊಡ್ಡಿ, ಚನ್ನಸಂದ್ರ, ನಗರಕರೆ, ದೇಶಹಳ್ಳಿ, ಸೋಮನಹಳ್ಳಿ, ಮೊಬ್ಬಳಗೆರೆ, ಹಾಗೂ ಉಪ್ಪಿನಕೆರೆ, ಸಾದೊಳಲು, ಅಜ್ಜಹಳ್ಳಿ, ಹುಲಿಗರೆಪುರ, ಮಾಲಗಾರನಹಳ್ಳಿ,
ಸೋಂಪುರ ಒಳಗೊಂಡಂತೆ ಹತ್ತಾರು ಹಳ್ಳಿಗಳು ಸೇರಿವೆ. ನಿತ್ಯದ ಕೆಲಸ ಕಾರ್ಯಗಳಿಗೆ ದೂರದ ಕೆ. ಹೊನ್ನಲಗೆರೆ ಗ್ರಾಮಕ್ಕೆ 20 ಕಿಲೋಮೀಟರ್‌ ಸುತ್ತಿ ಬಳಸಿ ಹೋಗಲೇಬೇಕಾದ ಅನಿವಾರ್ಯತೆ ಇದೆ.

ಕಟ್ಟಡ ನಿರ್ವಹಣೆ ಅಸಮರ್ಪಕ: ಗ್ರಾಪಂ ಕಚೇರಿ ಕಟ್ಟಡದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಸಬಾ 2ರ ನಾಡಕಚೇರಿ ಕೊಠಡಿಯು ಅವ್ಯವಸ್ಥೆಗಳಿಂದ ಕೂಡಿದೆ. ಮೇಲ್ಛಾವಣಿ ಪದರ ಕಳಚುತ್ತಿದ್ದು, ಸಿಬ್ಬಂದಿ ಜೀವಭಯದಲ್ಲೇ ಕೆಲಸ ಮಾಡಬೇಕಿದೆ.

Advertisement

ವಿದ್ಯುತ್‌ ಹೋದರೆ ಕಚೇರಿಯಲ್ಲಿ ಕೆಲಸವೇ ಸ್ಥಗಿತ
ಪವರ್‌ ಕಟ್‌ ಆದರೆ ಕಚೇರಿಯಲ್ಲಿನ ಕೆಲಸ ಕಾರ್ಯಗಳು ಸ್ಥಗಿತಗೊಳ್ಳಲಿವೆ. ಅವಶ್ಯವಿರುವ ಜನರೇಟರ್‌ ಅಥವಾ ಯುಪಿಎಸ್‌ ವ್ಯವಸ್ಥೆ ಕಚೇರಿಯಲ್ಲಿ ಮರೀಚಿಕೆಯಾಗಿದೆ. ಕೇಂದ್ರ ಆರಂಭದ ದಿನಗಳಲ್ಲಿ ಮದ್ದೂರು ಪಟ್ಟಣ ವ್ಯಾಪ್ತಿಗೆ ಹೊಂದಿಕೊಂಡಿರುವ ಗ್ರಾಮಗಳ ಸಾರ್ವಜನಿಕರು ತಮ್ಮ ತಕರಾರು ವ್ಯಕ್ತಪಡಿಸಿದ ವೇಳೆ ಬದಲಿ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ದಿನಕಳೆದಂತೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಬಳಿಕ ತನ್ನ ನಿರ್ಲಕ್ಷ್ಯ ಮುಂದುವರಿಸಿದ್ದು, ಸಮಸ್ಯೆಗಳು ಹಾಗೇ ಉಳಿದಿದ್ದು, ಪರಿಹಾರ ಮಾತ್ರ ಸಿಕ್ಕಿಲ್ಲ.

ಕೆ.ಹೊನ್ನಲಗೆರೆ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸಬಾ ಕಂದಾಯ ಎರಡನೇ ವಲಯದ ಅಟಲ್‌ ಜೀ ಜನಸ್ನೇಹಿ ಕೇಂದ್ರದ ಸ್ಥಳಾಂತರ ಸಂಬಂಧ ಈಗಾಗಲೇ ಕ್ರಮ ವಹಿಸಲಾಗಿದೆ. ನಾನೇ ಖುದ್ದು ಭೇಟಿ ನೀಡಿ ಅಲ್ಲಿನ
ವ್ಯವಸ್ಥೆಗಳನ್ನು ಪರಿಶೀಲಿಸಲಾಗಿದ್ದು ಶೀಘ್ರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
●ಕೆ.ಎಸ್‌.ಸೋಮಶೇಖರ್‌,
ತಹಶೀಲ್ದಾರ್‌, ಮದ್ದೂರ

*ಪುಟ್ಟಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next