Advertisement

ಕಾರಹುಣ್ಣಿಮೆ ಮೇಲೆ ಬರಗಾಲ ಛಾಯೆ

09:55 AM Jun 16, 2019 | Naveen |

ಪರಮೇಶ್ವರ ಭೂಸನೂರ
ಮಾದನ ಹಿಪ್ಪರಗಿ:
ರೈತ ಮಳೆ, ಬೆಳೆ ಚೆನ್ನಾಗಿದ್ರೇನೆ ಸಂತೋಷವಾಗಿರುತ್ತಾನೆ. ಆತನ ಜಾನುವಾರುಗಳು ಚೆನ್ನಾಗಿರುತ್ತವೆ. ವರ್ಷಕ್ಕೊಮ್ಮೆ ಮಾಡುವ ದನಗಳ ಹಬ್ಬ ಕಾರಹುಣ್ಣಿಮೆಯನ್ನು ಹೌಸಿಯಿಂದ (ಖುಷಿಯಿಂದ) ಆಚರಿಸುತ್ತಾನೆ. ಆದರೆ ಪ್ರಸಕ್ತ ವರ್ಷದ ಹಬ್ಬದ ಮೇಲೆ ಬರಗಾಲದ ಕಾರ್ಮೋಡ ಬಿದ್ದಂತಿದೆ.

Advertisement

ಈ ವರ್ಷ ಜೂನ್‌ ತಿಂಗಳ ಅರ್ಧ ಕಳೆದಿದೆ. ಪ್ರತಿವರ್ಷ ರೋಹಿಣಿ ಮಳೆಗೆ ಬಿತ್ತಣಿಕೆ ಆಗಿರುತ್ತಿತ್ತು. ಬೆಳೆಗಳು ನಾಟಿಗೆ ಹಾಯುತ್ತಿದ್ದವು. ರೋಹಿಣಿ ಮಳೆ ಬರಲಿಲ್ಲ. ಕೃತ್ತಿಕಾ ಆರಂಭವಾಗಿ ಮುಗಿಯುತ್ತ ಬಂದರೂ ಮಳೆ ಬರುವ ಲಕ್ಷಣ ಕಾಣುತ್ತಿಲ್ಲ. ಮೊದಲೇ ಈ ವರ್ಷ ಬರಗಾಲ ಬಿದ್ದಿದ್ದರಿಂದ ದನಕರುಗಳು ಹಸಿ ಮೇವು ಕಾಣದೆ ಒಣ ಕಣಕಿ ತಿಂದು ಬಡಕಲಾಗಿವೆ.

ಹೌಸಿಯಿಂದ ಆಚರಿಸಬೇಕಾದ ಕಾರಹುಣ್ಣಿಮೆಯನ್ನು ಕಾಟಾಚಾರಕ್ಕಾಗಿ ಆಚರಿಸುವಂತಾಗಿದೆ. ಹಗ್ಗ, ಮಗಡ, ಮೂಗುದಾರ, ಬಾಸಿಂಗವನ್ನು ಎತ್ತಿನ ಕೋಡುಗಳಿಗೆ ಬಣ್ಣ ಹಚ್ಚಲು ರೈತರು ಖರೀದಿಸುತ್ತಿದ್ದಾರೆ. ಗ್ರಾಮದಲ್ಲಿ ಒಂದು ದಿನ ಮುಂಚಿತವಾಗಿಯೇ ಅಂದರೆ ರವಿವಾರವೇ ಕಾರಹುಣ್ಣಿಮೆ ಆಚರಿಸಲು ರೈತರು ತಯಾರಾಗಿದ್ದಾರೆ. ಸೋಮವಾರ ಊರ ಗೌಡರ ಬಾಗಿಲಿಗೆ ರಾಹುಕಾಲ ಹತ್ತುತದೆಂದು ರವಿವಾರವೇ ಕಾರಹುಣ್ಣಿಮೆ ಆಚರಿಸುವಂತೆ ಡಂಗೂರ ಹೊಡೆಸಲಾಗಿತ್ತು.

ಹೊನ್ನುಗ್ಗಿ ದಿನವಾದ ಶನಿವಾರ ಬಸವಣ್ಣನ (ಹೋರಿ, ಎತ್ತುಗಳಿಗೆ) ಮೈತೊಳೆದು ಹೂಗಾರ ಮನೆಯಿಂದ ಬಾಸಿಂಗ ಕಟ್ಟುತ್ತಾರೆ. ರವಿವಾರ ದಿವಸ ಪೂಜೆ ಮಾಡಿ ಸಂಜೆ ಊರ ಹೊರಗೆ ಕಾಲಗಾಡಿ ಕಟ್ಟಿ ಓಡಿಸುತ್ತಾರೆ. ಎಲ್ಲರೂ ಜಿದ್ದಾ ಜಿದ್ದಿಗೆ ಬಿದ್ದು ಓಡಿಸುವವರೇ. ಆದರೆ ಈ ವರ್ಷ ಎತ್ತುಗಳಿಗೆ ಕಾಲಗಾಡಿ ಕಟ್ಟಿ ಓಡಿಸುವ ಧೈರ್ಯ ಯಾವ ರೈತರಿಗೂ ಸಾಲುತ್ತಿಲ್ಲ. ಹಸಿ ಮೇವು ತಿಂದರಷ್ಟೇ ಅವುಗಳ ಮೈಯಲ್ಲಿ ತಾಕತ್ತು ಇರುತ್ತದೆ. ತಾಕತ್ತು ಇಲ್ಲದ ಎತ್ತುಗಳನ್ನು ಓಡಿಸದೇ ಇರುವುದು ಒಳ್ಳೆಯದು ಎನ್ನುತ್ತಾರೆ ರೈತರು.

ಪ್ರತಿವರ್ಷ ಎತ್ತುಗಳಿಗೆ ಕಾಲಗಾಡಿ ಕಟ್ಟಿ ಓಡಿಸುತ್ತಿದ್ದೆವು. ಆದರೆ ಈ ವರ್ಷ ಮಳೆ ಬಾರದೆ ಜಾನುವಾರುಗಳಿಗೆ ಹಸಿ ಮೇವು ಇಲ್ಲದ ಕಾರಣ ಅವುಗಳಲ್ಲಿ ತಾಕತ್ತಿಲ್ಲ. ಆದ್ದರಿಂದ ನನ್ನ ಹಾಗೆ ಬಹಳಷ್ಟು ರೈತರು ತಮ್ಮ ದನಗಳನ್ನು ಹೊರಗೆ ತರುತ್ತಿಲ್ಲ. ವರ್ಷಕ್ಕೊಮ್ಮೆ ಬಸವಣ್ಣ ಜಾತ್ರೆ ಇರುವುದರಿಂದ ಹಗ್ಗ ಮತ್ತು ಇತರೆ ದನಕರುಗಳಿಗೆ ಬೇಕಾಗುವ ಸಾಮಾನುಗಳನ್ನು ಖರೀದಿ ಮಾಡಿದ್ದೇವೆ.
ಹಣಮಂತ ಈರಣ್ಣ ಆಳಂದ,
   ರೈತ

Advertisement
Advertisement

Udayavani is now on Telegram. Click here to join our channel and stay updated with the latest news.

Next