Advertisement

ಮದಗಜ ಚಿತ್ರ ವಿಮರ್ಶೆ: ಹೈವೋಲ್ಟೇಜ್‌ ಗಜಕಾಳಗದಲ್ಲಿ ಮಾಸ್‌ ಮಿಂಚು

11:43 AM Dec 04, 2021 | Team Udayavani |

ಒಂದು ಪಕ್ಕಾ ಕಮರ್ಷಿಯಲ್‌ ಸಿನಿಮಾದಲ್ಲಿ ಮುಖ್ಯವಾಗಿ ಪ್ರೇಕ್ಷಕರು ಏನು ಬಯಸುತ್ತಾರೆ ಹೇಳಿ, ಹೈವೋಲ್ಟೇಜ್‌ ಫೈಟ್‌, ಪಂಚಿಂಗ್‌ ಡೈಲಾಗ್‌, ಖಡಕ್‌ ವಿಲನ್‌, ಕುತೂಹಲ ಹೆಚ್ಚಿಸುವ ಹಿನ್ನೆಲೆ ಸಂಗೀತ, ರಗಡ್‌ ಲೊಕೇಶನ್‌, ಒಂಚೂರು ಕಾಮಿಡಿ, ರುಚಿಗೆ ತಕ್ಕಷ್ಟು ಲವ್‌ಸ್ಟೋರಿ… ಇವಿಷ್ಟನ್ನು ನೀಟಾಗಿ ಕಟ್ಟಿಕೊಟ್ಟರೆ ಆ ಸಿನಿಮಾವನ್ನು ಆರಾಮವಾಗಿ ಒಮ್ಮೆ ಕಣ್ತುಂಬಿಕೊಳ್ಳಬಹುದು. ಈ ವಾರ ತೆರೆಕಂಡಿರುವ “ಮದಗಜ’ ಚಿತ್ರದಲ್ಲಿ ಮೇಲೆ ಹೇಳಿದ ಅಷ್ಟೂ ಅಂಶಗಳನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಆ ಮಟ್ಟಿಗೆ “ಮದಗಜ’ ಒಂದು ಪಕ್ಕಾ ಮಾಸ್‌ ಎಂಟರ್‌ಟೈನರ್‌ ಆಗಿ ರಂಜಿಸುವ ಸಿನಿಮಾ.

Advertisement

ನಾಯಕನ ಜಬರ್‌ದಸ್ತ್ ಎಂಟ್ರಿ, ಅಷ್ಟೇ ಖಡಕ್‌ ಆದ ಎದುರಾಳಿ, ಎರಡು ಊರುಗಳ ಮಧ್ಯೆ ಹತ್ತಿಕೊಳ್ಳುವ ದ್ವೇಷದ ಬೆಂಕಿ, ಜೊತೆಗೊಂದು ತಾಯಿ ಸೆಂಟಿಮೆಂಟ್‌, ಮಧ್ಯೆ ಒಂದಷ್ಟು ಟ್ವಿಸ್ಟ್‌… ಇಷ್ಟು ಅಂಶಗಳನ್ನು ಇಟ್ಟುಕೊಂಡು ನಿರ್ದೇಶಕ ಮಹೇಶ್‌ “ಮದಗಜ’ ಸಿನಿಮಾ ಮಾಡಿದ್ದಾರೆ. ಕಮರ್ಷಿಯಲ್‌ ಸಿನಿಮಾಗಳಲ್ಲಿ ಕಥೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು, ಚಿತ್ರಕಥೆಯಲ್ಲೇ ಆಟವಾಡಬೇಕು ಎಂಬ ನಿರ್ಧಾರಕ್ಕೆ ಇತ್ತೀಚೆಗೆ ಒಂದಷ್ಟು ನಿರ್ದೇಶಕರು ಬಂದಂತಿದೆ. ಈ ಚಿತ್ರದಲ್ಲೂ ನಿರ್ದೇಶಕ ಮಹೇಶ್‌ ಕಥೆಗಿಂತ, ಚಿತ್ರಕಥೆ, ನಿರೂಪಣೆಯಲ್ಲಿ ಹೆಚ್ಚು ಶ್ರಮ ವಹಿಸಿದ್ದಾರೆ. ಜೊತೆಗೆ ಫೈಟ್‌, ಎಮೋಶನಲ್‌, ಲವ್‌ ಸೀನ್‌ಗಳನ್ನು ಕಟ್ಟಿಕೊಡುವ ಮೂಲಕ “ಮದಗಜ’ ಖದರ್‌ ಹೆಚ್ಚಿದೆ.

ಇದನ್ನೂ ಓದಿ:ಡಿ.6ಕ್ಕೆ ಪುನೀತ್‌ ರಾಜ್ ಕುಮಾರ್ ಡ್ರೀಮ್‌ ಪ್ರಾಜೆಕ್ಟ್ ಟೀಸರ್‌ ಬಿಡುಗಡೆ

ಮೊದಲೇ ಹೇಳಿದಂತೆ “ಮದಗಜ’ ಕೇವಲ ಮಾಸ್‌ ಸಿನಿಮಾವಲ್ಲ. ಈ ಚಿತ್ರದಲ್ಲಿ ಒಂದಷ್ಟು ಫ್ಯಾಮಿಲಿ ಸೆಂಟಿಮೆಂಟ್‌ ಅಂಶಗಳನ್ನು ಅಳವಡಿಸಲಾಗಿದೆ. ಒಂದು ಕಡೆ ಆ್ಯಕ್ಷನ್‌, ಮತ್ತೂಂದು ಕಡೆ ಫ್ಯಾಮಿಲಿ… ಈ ಎರಡನ್ನೂ ನೀಟಾಗಿ ಬೆರೆಸಲಾಗಿದೆ. “ಮದಗಜ’ ಚಿತ್ರ ಕಥೆಗಿಂತ ಹೆಚ್ಚು ಗಮನ ಸೆಳೆಯುವುದು ಅದರ ಮೇಕಿಂಗ್‌ನಿಂದ. ಒಂದು ಮಾಸ್‌ ಕಮರ್ಷಿಯಲ್‌ ಸಿನಿಮಾವನ್ನು ಕಟ್ಟಿಕೊಡುವಾಗ ಅಲ್ಲಿ ಮುಖ್ಯವಾಗುವುದು ಚಿತ್ರದ ಮೇಕಿಂಗ್‌. ಕಥೆಗೆ ಪೂರಕವಾದ ಪರಿಸರ ಹಾಗೂ ಅದರ ಅದ್ಧೂರಿತನ ಮುಖ್ಯವಾಗುತ್ತದೆ. ಆ ವಿಚಾರ ದಲ್ಲಿ “ಮದಗಜ’ ಎಲ್ಲೂ ಕಾಂಪ್ರಮೈಸ್‌ ಆಗಿಲ್ಲ.

ನಿರ್ಮಾಪಕ ಉಮಾಪತಿ ಇಡೀ ಸಿನಿಮಾದ ಅದ್ಧೂರಿತನಕ್ಕೆ ಎಲ್ಲೂ ಧಕ್ಕೆಯಾಗದಂತೆ ನೋಡಿಕೊಂಡಿದ್ದಾರೆ. ಪ್ರತಿ ಫ್ರೇಮ್‌ನಲ್ಲೂ ಕಲಾವಿದರ ದಂಡು ಎದ್ದು ಕಾಣುತ್ತದೆ. ಈ ಚಿತ್ರದ ಹೈಲೈಟ್‌ ಗಳಲ್ಲಿ ಡೈಲಾಗ್‌ ಕೂಡಾ ಒಂದು. ಖಡಕ್‌ ಹಾಗೂ ಪಂಚಿಂಗ್‌ ಡೈಲಾಗ್‌ಗಳು ಸಿನಿಮಾದುದ್ದಕ್ಕೂ ಕೇಳುವ ಮೂಲಕ ಮಾಸ್‌ ಪ್ರಿಯರ ಶಿಳ್ಳೆಗೆ ಕಾರಣ ವಾಗುತ್ತದೆ.

Advertisement

ನಾಯಕ ಶ್ರೀಮುರಳಿ ರಫ್ ಅಂಡ್‌ ಟಫ್ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆ್ಯಕ್ಷನ್‌ನಲ್ಲಿ ಮುರಳಿ ಮಿಂಚಿದ್ದಾರೆ. ನಾಯಕಿ ಆಶಿಕಾ ಹಳ್ಳಿ ಹುಡುಗಿಯಾಗಿ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಉಳಿದಂತೆ ಜಗಪತಿ ಬಾಬು ಈ ಸಿನಿಮಾದ ಮತ್ತೂಂದು ಹೈಲೈಟ್‌. ಕಣ್ಣಲ್ಲೇ ಬೆಂಕಿಯುಗುಳುವ ಭೈರವನಾಗಿ ಇಷ್ಟವಾಗುತ್ತಾರೆ. ಉಳಿದಂತೆ ರಂಗಾಯಣ ರಘು, ಚಿಕ್ಕಣ್ಣ ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ, ನವೀನ್‌ ಛಾಯಾಗ್ರಹಣ ಮದಗಜ ಖದರ್‌ ಹೆಚ್ಚಿಸಿದೆ. ಒಂದು ರಗಡ್‌ ಆಗಿರುವ ಮಾಸ್‌ ಎಂಟರ್‌ಟೈನರ್‌ನ ಇಷ್ಟಪಡುವವರಿಗೆ “ಮದಗಜ’ ಖಂಡಿತಾ ಇಷ್ಟವಾಗುತ್ತದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next