ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಜನಸಾಮಾನ್ಯರ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರುತ್ತಿವೆ. ಸಾಮಾಜಿಕ ಜಾಲತಾಣಗಳಿಂದ ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಅನಾಹುತಗಳ ಬಗ್ಗೆ ಇಲ್ಲೊಂದು ಸಿನಿಮಾ ತಯಾರಾಗಿದೆ. ಆ ಸಿನಿಮಾದ ಹೆಸರೇ “ಮಾಯೆ ಆ್ಯಂಡ್ ಕಂಪೆನಿ’. ಸೋಶಿಯಲ್ ಮೀಡಿಯಾದ ದುರ್ಬಳಕೆಯಿಂದ ಏನೇನೆಲ್ಲ ಅನಾಹುತಗಳು ನಡೆಯುತ್ತಿವೆ, ಅದರಲ್ಲಿ ಜನ ಯಾವ ರೀತಿ ಮೋಸ ಹೋಗುತ್ತಿದ್ದಾರೆ ಎಂಬುದರ ಕುರಿತಾಗಿರುವ “ಮಾಯೆ ಆ್ಯಂಡ್ ಕಂಪೆನಿ’ ಸಿನಿಮಾಕ್ಕೆ ಸಂದೀಪ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ, ಸೆನ್ಸಾರ್‌ನಿಂದಲೂ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ “ಮಾಯೆ ಆ್ಯಂಡ್ ಕಂಪೆನಿ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ, ಗಾಯಕ ಶಂಕರ್ ಶ್ಯಾನುಭೋಗ್, ನಟಿ ಮಾನಸ ಜೋಷಿ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದು, “ಮಾಯೆ ಆ್ಯಂಡ್ ಕಂಪೆನಿ’ ಸಿನಿಮಾದ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸುಮಾರು ಮೂರುವರೆ ದಶಕಗಳ ಕಾಲ ದೂರ ದರ್ಶನ ಕೇಂದ್ರದಲ್ಲಿ ಸಂಕಲನಕಾರರಾಗಿ ಕೆಲಸ ಮಾಡಿದ ಅನುಭವವಿರುವ ಎಂ. ಎನ್. ರವೀಂದ್ರ ರಾವ್ “ಮಾತೃಶ್ರೀ ವಿಷನ್’ ಬ್ಯಾನರ್ ಮೂಲಕ “ಮಾಯೆ ಆ್ಯಂಡ್ ಕಂಪೆನಿ’ ಸಿನಿಮಾವನ್ನು ನಿರ್ಮಿಸಿದ್ದಾರೆ.
ಇದೇ ವೇಳೆ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಸಂದೀಪ್ ಕುಮಾರ್, “ಕಳೆದ ಮಾರ್ಚ್ ನಲ್ಲಿ ಈ ಸಿನಿಮಾ ಶುರುವಾಗಿತ್ತು. ಸೋಶಿಯಲ್ ಮೀಡಿಯಾ ಅನ್ನೋದು ಒಂದು “ಮಾಯೆ’ ಅದರ ಸುತ್ತ ಒಂದಷ್ಟು ಪಾತ್ರಗಳು ಸುತ್ತುತ್ತವೆ. ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಅಪರಾಧಗಳ ಬಗ್ಗೆ ಹೇಳುವ ಈ ಸಿನಿಮಾ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಲಿದೆ’ ಎಂದು ವಿವರಿಸಿದರು.
“ಇವತ್ತಿನ ದಿನಗಳಲ್ಲಿ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಂನಿಂದ ಏನೇನೆಲ್ಲ ಅವಘಡ ಗಳಾಗುತ್ತವೆ, ಅದರಿಂದ ಹೇಗೆ ಹೊರಬರಬಹುದು ಎನ್ನುವುದೇ ಈ ಸಿನಿಮಾ. ಎರಡು ವರ್ಷದಿಂದಲೂ ಒಂದು ಸಿನಿಮಾ ಮೂಲಕ ಸಂದೇಶ ನೀಡಬೇಕೆಂದು ಯೋಚಿಸಿದ್ದೆ. ಅದು ಈ ಸಿನಿಮಾದ ಮೂಲಕ ಸಾಕಾರವಾಗಿದೆ’ ಎಂಬುದು ನಿರ್ಮಾಪಕ ರವೀಂದ್ರರಾವ್ ಮಾತು.