Advertisement
ಹೊಸನಗರ ತಾಲೂಕಿನ ಯಡೂರು ಗ್ರಾಪಂವ್ಯಾಪ್ತಿಯಲ್ಲಿರುವ ವಾರಾಹಿ ಯೋಜನೆಯ ಮಹತ್ವದಮಾಣಿ ಜಲಾಶಯದಲ್ಲಿ ಶೇ. 70 ರಷ್ಟು ನೀರಿನ ಸಾಂಧ್ರತೆ ಕಂಡು ಬಂದಿದೆ. ಇನ್ನು ಶೇ.30 ರಷ್ಟು ನೀರು ಬೇಕಿದೆ. ಆದರೆ ಮಳೆ ಕಡಿಮೆಯಾಗಿರುವ ಕಾರಣ ಆ ನಿರೀಕ್ಷೆ ಕಷ್ಟಸಾಧ್ಯ ಎನ್ನಬಹುದು. 32 ವರ್ಷದಲ್ಲಿ 4 ಬಾರಿ: 1978 ಆರಂಭಗೊಂಡ ವಾರಾಹಿ ಯೋಜನೆಯ ಮಾಣಿ ಜಲಾಶಯದಲ್ಲಿ ನೀರು ನಿಲ್ಲಿಸಿದ್ದು 1989ರಲ್ಲಿ. ಆ ವರ್ಷ 584.5 ಮೀ.ಮಟ್ಟದಷ್ಟು ನೀರು ಸಂಗ್ರಹವಾಗಿತ್ತು. 32 ವರ್ಷದಲ್ಲಿ1994, 2006, 2007 ಮತ್ತು 2018 ಸೇರಿ ಈವರೆಗೆನಾಲ್ಕು ಬಾರಿ ಮಾತ್ರ ತುಂಬಿದೆ. ಈ ಬಾರಿ ಆರಂಭದ ಮಳೆ ನೋಡಿ ಮಾಣಿ ಡ್ಯಾಂ ತುಂಬುವ ನಿರೀಕ್ಷೆಹೊಂದಲಾಗಿತ್ತು. ಕ್ರಮೇಣ ಮಳೆ ಕಡಿಮೆಯಾದಕಾರಣ ಜಲಾಶಯ ತುಂಬುವ ಸಾದ್ಯತೆ ಕ್ಷೀಣಿಸಿದೆ.
Related Articles
Advertisement
ತೀರ್ಥಹಳ್ಳಿ, ಹೊಸನಗರ ಮಳೆಯ ಆಸರೆ:
ಮಾಣಿ ಡ್ಯಾಂನ ಹಿನ್ನೀರು ಪ್ರದೇಶ ಬಹುತೇಕ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕನ್ನು ಆಶ್ರಯಿಸಿಕೊಂಡಿದೆ. ಮಾಣಿ ಜಲಾನಯನ ಪ್ರದೇಶದಲ್ಲಿ 2000 ಮಿ.ಮೀ.ನಿಂದ 12500 ಮಿಮೀ ಮಳೆಯಾಗುತ್ತದೆ.163.16 ಚದರ ಕಿಮೀ ವ್ಯಾಪ್ತಿ ಹೊಂದಿರುವ ಜಲಾಶಯದ ಪ್ರದೇಶದಲ್ಲಿವಾರ್ಷಿಕ ಸರಾಸರಿ ಮಳೆಯನ್ನು 6350 ಮಿಮೀ ಎಂದು ಅಂದಾಜಿಸಲಾಗಿದೆ. ಈ ವರ್ಷ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಕೇವಲ 4267 ಮಿಮೀ ಮಾತ್ರ ಬಿದ್ದಿದ್ದು ಡ್ಯಾಂ ತುಂಬುವುದು ಕಷ್ಟ ಸಾಧ್ಯ.
ಮಳೆ ಮಾಪಕಗಳು ಎಲ್ಲೆಲ್ಲಿವೆ?: ಯಡೂರು, ಮತ್ತಿಗ, ಸುಣ್ಣದಮನೆ, ಮೇಗರವಳ್ಳಿ, ಹೆಬ್ಟಾಗಿಲು ಮೇಲುಸುಂಕ, ಗಿಣಿಕಲ್, ಮಾಣಿ ಸೇರಿದಂತೆ 8 ಮಳೆ ಮಾಪಕಗಳು ಇದ್ದು ಸೆಪ್ಟೆಂಬರ್ ಅಂತ್ಯದವರೆಗೆ 4267 ಮಿಮೀ ಮಳೆಯಾಗಿದೆ ಎಂದು ದಾಖಲಿಸಲಾಗಿದೆ.ಅಕ್ಟೋಬರ್ ತಿಂಗಳಲ್ಲಿ ಸುಮಾರು 800 ಮಿಮೀ ಮಳೆಯಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಜನ್ಮಸ್ಥಳ ಮುಳುಗಿದರೇ.. ಮಾಣಿ ತುಂಬೀತು..!
ಹೌದು, ವಾರಾಹಿ ನದಿ ಜನ್ಮ ತಾಳಿದ ಹೆಬ್ಟಾಗಿಲು ಪ್ರದೇಶ ಬಹುತೇಕ ಮುಳುಗಿದರೆ ಮಾತ್ರ ಮಾಣಿ ಜಲಾಶಯ ತುಂಬುತ್ತದೆ. ಇಂತಹ ವಿಶಿಷ್ಟತೆ ಅಪರೂಪ. ಅಲ್ಲದೆ ಕೇವಲ ಮಳೆಯನ್ನೇ ಆಶ್ರಯಿಸಿಕೊಂಡಿರುವ ಮಾಣಿ ಡ್ಯಾಂ ತುಂಬಿತೆಂದರೆ ಅದೊಂದು ಸಾಹಸ.
ಒಟ್ಟಾರೆ ಜಲವಿದ್ಯುತ್ ಯೋಜನೆ ಮತ್ತು ಭೂಗರ್ಭ ವಿದ್ಯುದಾಗಾರದ ಜೀವದಾತು ಆಗಿರುವ ಮಾಣಿ ಅಪರೂಪ ಜಲಾಶಯ. ಅತೀ ಹೆಚ್ಚು ಮಳೆಬೀಳುವ ಹೊಸನಗರ ಮತ್ತು ತೀರ್ಥಹಳ್ಳಿಯ ಪರಿಸರದಲ್ಲಿದ್ದು ಕೂಡ ನಾಲ್ಕು ಬಾರಿ ಮಾತ್ರ ಜಲಾಶಯದ ಭರ್ತಿಯಾಗಿದೆ ಎಂದರೆ ಮಾಣಿ ತುಂಬೋದು ಅಷ್ಟು ಸುಲಭವಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.
ಇನ್ನು 10 ಟಿಎಂಸಿ ನೀರು ಬೇಕು : 32 ವರ್ಷದಲ್ಲಿ ಮಾಣಿ 4 ಬಾರಿ ಮಾತ್ರ ತುಂಬಿದೆ. ಪ್ರಸ್ತುತ ಸೆಪ್ಟೆಂಬರ್ ವೇಳೆಗೆ 4267 ಸರಾಸರಿ ಮಳೆಯಾಗಿದೆ. ಇನ್ನು 10 ಟಿಎಂಸಿ ನೀರು ಬೇಕು. ಆದರೆ ಮಳೆಯನ್ನು ಆಧರಿಸಿ ನೋಡಿದರೆ ಕಷ್ಟ. ಇನ್ನು ವಾಯುಭಾರ ಕುಸಿತ, ಇನ್ನಿತರ ಕಾರಣಗಳಿಗೆ ಮಳೆ ಬರಬೇಕಷ್ಟೆ. –ಸುದೀಪ್ ಎನ್, ಎಇಇ ಮಾಸ್ತಿಕಟ್ಟೆ
ಮಾಣಿ ತುಂಬೋದು ಪ್ರತಿವರ್ಷದ ಸಾಹಸ : ಉಗಮ ಸ್ಥಾನವನ್ನೇ ಮುಳುಗಿಸುವ ಏಕೈಕ ಡ್ಯಾಂ ಮಾಣಿ ಜಲಾಶಯ. ಅಲ್ಲದೆ ಯಾವುದೇ ಉಪನದಿ, ಹಳ್ಳಕೊಳ್ಳದ ಆಶ್ರಯವಿಲ್ಲದೆ ಜಲಾಶಯದ ವ್ಯಾಪ್ತಿಯಲ್ಲಿ ಬೀಳುವ ಮಳೆಯೇ ಆಧಾರ. ಹಾಗಾಗಿ ಮಾಣಿ ತುಂಬಿದರೆ ಅದೊಂದು ಸಾಹಸ ಎಂಬಂತಾಗಿದೆ.ವೈ.ಕೆ. ವೆಂಕಟೇಶ ಹೆಗ್ಡೆ, ಎಇ, ಜೋಗ
–ಕುಮುದಾ ನಗರ