ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ವೆಬ್‌ಸೈಟ್‌ನಲ್ಲಿ “ಮಾ’ ಎಂಬ ಹೆಸರಿನ ಮೈಕ್ರೋಸೈಟ್ ಪ್ರಾರಂಭಿಸಲಾಗಿದ್ದು, ಅದರ ಮೂಲಕ ಮೋದಿ ಅವರ ತಾಯಿ ಹೀರಾಬಾರನ್ನು ಸ್ಮರಿಸಿ ಗೌರವ ಸಲ್ಲಿಸುವುದರ ಜೊತೆಗೆ, ತಾಯ್ತನದ ಸ್ಫೂರ್ತಿಯನ್ನು ಆಚರಿಸಲಾಗುತ್ತದೆ.
ಹೀರಾಬಾ ಅವರು ಕಳೆದ ವರ್ಷದ ಡಿ.30ರಂದು ಅಸುನೀಗಿದ್ದರು. ಹೀರಾಬಾ ಅವರಿಗೆಂದೇ ಮಾ ಎಂಬ ಮೈಕ್ರೋಸೈಟ್ ಅನ್ನು ಸಮರ್ಪಿಸಲಾಗಿದೆ. ಈ ವೆಬ್‌ಸೈಟ್‌ನಲ್ಲಿ ತಾಯಿ ಮತ್ತು ಮಗನ ನಡುವಿನ ಪ್ರೀತಿ ಮತ್ತು ಬಂಧದ ಫೋಟೋಗಳು, ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಜತೆಗೆ, ಹೀರಾಬಾ ಅವರ ವಿಡಿಯೋಗಳು, ತಮ್ಮ ಮಕ್ಕಳಿಗೆ ಅವರು ನೀಡಿದ್ದ ಬೋಧನೆಗಳು, ತಾಯಿಗೆ 100 ವರ್ಷ ತುಂಬಿದ ವೇಳೆ ಅಮ್ಮನ ಕುರಿತು ಮೋದಿಯವರು ಬರೆದಿದ್ದ ವಿಶೇಷ ಬ್ಲಾಗ್ ಕೂಡ ಸೇರ್ಪಡೆ ಮಾಡಲಾಗಿದೆ. ಈ ಬ್ಲಾಗ್‌ನ ಆಡಿಯೋ ಆವೃತ್ತಿಯನ್ನೂ ಹಿಂದಿಯಲ್ಲಿ ನೀಡಲಾಗಿದೆ.
ಹೀರಾಬಾ ಅವರ ಬದುಕಿನ ಪಯಣವನ್ನು 4 ವಿಭಾಗಗಳಾಗಿ ಅಪ್‌ಲೋಡ್ ಮಾಡಲಾಗಿದೆ. ಅವೆಂದರೆ, ಸಾರ್ವಜನಿಕ ಬದುಕು, ದೇಶದ ಸ್ಮರಣೆಯಲ್ಲಿ ಉಳಿಯುವಂಥದ್ದು, ಜಾಗತಿಕ ಸಂತಾಪ ಮತ್ತು ತಾಯ್ತನದ ಸಂಭ್ರಮ. ತಮ್ಮ ತಾಯಿಯ ಪ್ರತಿ ಬೋಧನೆಗಳ ಕೆಳಗೆ ಪ್ರಧಾನಿ ಮೋದಿಯವರ ಸಹಿ ಇರುವಂಥ ಕಾರ್ಡ್‌ಗಳನ್ನೂ ಮೈಕ್ರೋಸೈಟ್‌ನಲ್ಲಿ ಹಾಕಲಾಗಿದೆ. ಜನರು ತಮಗಿಷ್ಟವಾದ ಟೆಂಪ್ಲೇಟ್ ಆಯ್ಕೆ ಮಾಡಿಕೊಂಡು, ಆ ಕಾರ್ಡ್‌ಗಳಲ್ಲಿ ಸಂದೇಶಗಳನ್ನು ಸೇರಿಸಬಹುದು.
ಮೋದಿಯವರ ಅಧಿಕೃತ ವೆಬ್‌ಸೈಟ್ https://www.narendramodi.in/ ನಲ್ಲಿ ಮತ್ತು ಅವರ ವೈಯಕ್ತಿಕ ಆ್ಯಪ್‌ನಲ್ಲಿ ಈ ಮೈಕ್ರೋಸೈಟ್ ಕಾಣಸಿಗುತ್ತದೆ.