Advertisement

ಮಳಖೇಡದಲ್ಲಿ ಮಾ. 4-5ರಂದು ರಾಷ್ಟ್ರಕೂಟ ಉತ್ಸವ

11:02 AM Feb 25, 2018 | |

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಮಾರ್ಚ್‌ 4 ಮತ್ತು 5ರಂದು ನಡೆಯಲಿರುವ ರಾಷ್ಟ್ರಕೂಟ
ಉತ್ಸವಕ್ಕೆ ಸಿದ್ಧತೆಗಳು ನಡೆದಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಹಾಗೂ ಪದ್ಮಶ್ರೀ ಪುರಸ್ಕೃತ ಆಧ್ಯಾತ್ಮಿಕ ಚಿಂತಕ ಇಬ್ರಾಹಿಂ ಸುತ್ತಾರ ಅವರು ಉತ್ಸವ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ರಾಷ್ಟ್ರಕೂಟ ಉತ್ಸವದ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರಕೂಟ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 30 ಲಕ್ಷ ರೂ. ಬಿಡುಗಡೆ ಮಾಡಿದೆ. ಅದೇ ರೀತಿ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದಲೂ ಹಣ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಯೋಗವಿದ್ದು, ಎರಡು ದಿನಗಳ ಉತ್ಸವಕ್ಕೆ ರಾಷ್ಟ್ರದ ವಿವಿಧ ಭಾಗಗಳಿಂದ ಖ್ಯಾತ ಸಾಹಿತಿಗಳು- ಕಲಾವಿದರರು, ಇತಿಹಾಸಕಾರರು ಪಾಲ್ಗೊಳ್ಳಲಿದ್ದಾರೆ. ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸೇರಿದಂತೆ ಇತರರ ವಿದ್ವಾಂಸರು ಭಾಗವಹಿಸಿ ವಿಷಯ ಮಂಡಿಸಲಿದ್ದಾರೆ. ಮಾ. 4ರಂದು ಸಂಜೆ ನಡೆಯುವ ಸಾಂಸ್ಕೃತಿಕ ಉತ್ಸವಕ್ಕೆ ಖ್ಯಾತ ಕಲಾವಿದರಾದ ನವೀನ್‌ ಸಂಜು ಮೆರಗು ನೀಡಿದರೆ, 5ರಂದು ಸರಿಗಮಪ ಖ್ಯಾತಿಯ ಅರ್ಜುನ್‌ ಜನ್ಯ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.

ಬಹಮನಿ ಉತ್ಸವ ಇಲ್ಲ: ರಾಷ್ಟ್ರಕೂಟ ಉತ್ಸವ ನಿರ್ಧಾರದ ಸಂದರ್ಭದಲ್ಲೇ ಬಹಮನಿ ಉತ್ಸವ ಬಗ್ಗೆ ಸಲಹೆ ಕೇಳಿ ಬಂದಿತ್ತು. ಹಾಗಾಗಿ ಬಹಮನಿ ಉತ್ಸವ ಬಗ್ಗೆ ಒಲವು ತೋರಲಾಗಿತ್ತು. ಆದರೆ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ ಈಗ ಬಹಮನಿ ಉತ್ಸವ ಕೈ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಹಾಜರಿದ್ದರು. ಸಾಹಿತಿಗಳು- ಕಲಾವಿದರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next