Advertisement

ಎಂ.ಟಿ.ಬಿ. ನಾಗರಾಜ್‌ ಬಂಡಾಯಕ್ಕೆ ಬಲಿ

11:18 PM Dec 09, 2019 | Team Udayavani |

ಬೆಂಗಳೂರು: ಎಂ.ಟಿ.ಬಿ. ನಾಗರಾಜ್‌ ಅವರು ಕಾಂಗ್ರೆಸ್‌ ತೊರೆದು ಕಮಲ ಹಿಡಿದು ರಾಜಕೀಯ ಭವಿಷ್ಯ ಕಂಡುಕೊಳ್ಳುವ ಪ್ರಯತ್ನದಲ್ಲಿ ಎಡವಿದ್ದಾರೆ. ಹೊಸಕೋಟೆಯಲ್ಲಿ ಬಿ.ಎನ್‌.ಬಚ್ಚೇಗೌಡರ ವಿರುದ್ಧ ಹೋರಾಟ ನಡೆಸಿ ರಾಜಕೀಯವಾಗಿ ಮೇಲೆ ಬಂದಿದ್ದ ಎಂ.ಟಿ.ಬಿ. ನಾಗರಾಜ್‌ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಚ್ಚೇಗೌಡರಿದ್ದ ಪಕ್ಷವನ್ನೇ ಸೇರಿದ್ದರು.

Advertisement

ಆದರೆ ತಾವು ಬಿಜೆಪಿ ಸೇರಿದ ರೀತಿಯಲ್ಲೇ ತಮ್ಮ ಬೆಂಬಲಿಗರು, ಹಿರಿಯ ನಾಯಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಸುವಲ್ಲಿ ಯಶಸ್ಸು ಕಾಣದಿದ್ದುದು ಸ್ವಲ್ಪ ಹಿನ್ನಡೆಗೆ ಕಾರಣವಾದಂತಿದೆ. ಮತ್ತೂಂದೆಡೆ ಬಿಜೆಪಿ ಬಂಡಾಯ ಅಭ್ಯರ್ಥಿ ಕಣದಲ್ಲಿ ಉಳಿಯುವ ನಿರೀಕ್ಷೆಯೂ ಅವರಿಗಿದ್ದಂತಿಲ್ಲ. ಆದರೆ ಈ ಸೂಕ್ಷ್ಮವನ್ನು ಮೊದಲೇ ಅರಿತಂತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪರಾಜಿತ ಅಭ್ಯರ್ಥಿ ಶರತ್‌ ಬಚ್ಚೇಗೌಡ ಅವರನ್ನು ಗೃಹ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದರು.

ಆದರೆ ಇದನ್ನು ತಿರಸ್ಕರಿಸಿದ ಶರತ್‌ ತಮಗೆ ಪಕ್ಷದ ಟಿಕೆಟ್‌ ನೀಡುವಂತೆ ಪಟ್ಟು ಹಿಡಿದರು. ಇದರಿಂದ ಸಂಕಷ್ಟಕ್ಕೆ ಸಿಲುಕಿದಂತಾದ ಎಂ.ಟಿ.ಬಿ., ಯಡಿಯೂರಪ್ಪ ಅವರ ಬಳಿ ಸಾಕಷ್ಟು ಬಾರಿ ಅಳಲು ತೋಡಿಕೊಂಡರು. ಯಡಿಯೂರಪ್ಪ ಮನವೊಲಿಕೆ ನಂತರವೂ ಶರತ್‌ ಬಚ್ಚೇಗೌಡ ಕಣದಿಂದ ಹಿಂದೆ ಸರಿಯದ ಕಾರಣ ಉಚ್ಚಾಟಿಸಲಾಯಿತು. ಸ್ವಾಭಿಮಾನದಡಿ ಶರತ್‌ ಬಚ್ಚೇಗೌಡ ಮತ ಯಾಚಿಸಲಾರಂಭಿಸಿದರು.

ಜೆಡಿಎಸ್‌ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬೆಂಬಲ ನೀಡಿದ್ದರಿಂದ ಒಕ್ಕಲಿಗ ಮತಗಳು ಒಗ್ಗೂಡಲು ನೆರವಾದಂತಾಯಿತು. ಇನ್ನೊಂದೆಡೆ ಬಿಜೆಪಿ ಸಂಸದ ಬಿ.ಎನ್‌.ಬಚ್ಚೇಗೌಡ ಅವರು ಎಲ್ಲಿಯೂ ಎಂಟಿಬಿ ಪರ ಪ್ರಚಾರ ನಡೆಸಲೇ ಇಲ್ಲ. ಬದಲಿಗೆ ತಮ್ಮ ಬೆಂಬಲಿಗರು, ಆಪ್ತರಿಗೆ ದೂರವಾಣಿ ಮೂಲಕವೇ ಮಗನನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಎಂಬ ಆರೋಪಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next