ಧಾರವಾಡ: “ನಮ್ಮ ತಂದೆ ಡಾ| ಎಂ.ಎಂ. ಕಲಬುರ್ಗಿ ಸಾವಿಗೆ ನ್ಯಾಯ ಸಿಗುತ್ತದೆ ಎಂಬ ಆಸೆಯನ್ನೇ ಕೈಬಿಟ್ಟು ಕುಳಿತಿದ್ದೆವು. ಆದರೆ, ಕಳೆದ ಮೂರು ತಿಂಗಳಿನಿಂದ ಪ್ರಕರಣದಲ್ಲಿ ಪ್ರಗತಿ ಕಾಣುತ್ತಿದ್ದು, ನ್ಯಾಯಕ್ಕಾಗಿ ಎದುರು
ನೋಡುತ್ತಿದ್ದೇವೆ’ ಎಂದು ಶ್ರೀವಿಜಯ ಕಲಬುರ್ಗಿ ಹೇಳಿದರು.
ಕಲ್ಯಾಣನಗರದ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂದೆ ಕಲಬುರ್ಗಿ ಅವರ ಹತ್ಯೆಯಾದಾಗಿನಿಂದ ಯಾವ ರೀತಿ ತನಿಖೆ ನಡೆಯುತ್ತಿದೆ? ಏನಾಗುತ್ತಿದೆ ಎಂಬುದೇ ನಮಗೆ ಗೊತ್ತಾಗುತ್ತಿರಲಿಲ್ಲ. ಕಳೆದ ಎರಡೂವರೆ ವರ್ಷಗಳಿಂದಲೂ ಪ್ರಕರಣದ ತನಿಖೆ ಬಗ್ಗೆ ನಮಗೆ ಏನೂ ಗೊತ್ತಿರಲಿಲ್ಲ. ಆದರೆ, ಈಗ ಮೂರು ತಿಂಗಳಿನಿಂದ ನಡೆಯುತ್ತಿರುವ ತನಿಖೆಯಲ್ಲಿ ಪ್ರಗತಿ ಕಾಣುತ್ತಿದೆ ಎಂದರು.
ನಮ್ಮ ತಂದೆ ಸಾವಿಗೆ ನ್ಯಾಯ ಸಿಗುತ್ತದೆ ಎಂಬ ಆಸೆಯನ್ನು ಎರಡೂವರೆ ವರ್ಷಗಳಿಂದ ನಾವು ಬಿಟ್ಟಿದ್ದೆವು.ಆದರೆ, ಈಗ ಸಿಐಡಿ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುವುದು ಮಾಧ್ಯಮಗಳ ಮುಖಾಂತರ ಗೊತ್ತಾಗಿದೆ. ಸದ್ಯ ಸಿಐಡಿ ಪೊಲೀಸರು ವಶಕ್ಕೆ ಪಡೆದಿರುವ ಇಬ್ಬರು ಆರೋಪಿತರ ಮುಖವನ್ನು ನಾವು ನೋಡಿಲ್ಲ.
ತನಿಖೆ ನಂತರ ಪೊಲೀಸರು ಅವರನ್ನು ನಮಗೆ ತೋರಿಸಬಹುದು. ಈ ಬಗ್ಗೆ ಸಿಐಡಿ ಅಧಿಕಾರಿಗಳು ಏನೂ ಮಾಹಿತಿ ನೀಡಿಲ್ಲ. ನಮಗೆ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದರು.