ಉಡುಪಿ: ಅಮೃತ ಮಹೋತ್ಸವದ ಹೊಸ್ತಿಲಿ ನಲ್ಲಿರುವ ಎಂಜಿಎಂ ಕಾಲೇಜು ವಿಶ್ವಸ್ಥ ಮಂಡಳಿ ಹೊಸ ಸಂಸ್ಥೆ “ಟಿ. ಮೋಹನದಾಸ್ ಪೈ ಸ್ಕಿಲ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್’ ಅನ್ನು ಹುಟ್ಟು ಹಾಕಿದೆ.
ಅಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂಧ್ಯಾ ಕಾಲೇಜನ್ನು ಪ್ರಾರಂಭಿಸಿ, ಸುಪ್ರಭಾತ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಲಾಗದ ಹಾಗೂ ಅವಕಾಶ ವಂಚಿತರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಸಂಧ್ಯಾ ಕಾಲೇಜು ವಿಶ್ವಸ್ಥ ಮಂಡಳಿಯ ನೂತನ ಅಧ್ಯಕ್ಷ ಟಿ.ಸತೀಶ್ ಯು. ಪೈ ಅವರ ಕನಸಿನ ಕೂಸಾಗಿದೆ.
ಇಂದಿನ ಯುವಕರಿಗೆ ಕೌಶಲ ತರಬೇತಿಯ ಅಗತ್ಯತೆಯ ಮನಗಂಡು ಆ ದಿಶೆಯತ್ತ ಒಂದು ಹೆಜ್ಜೆಯನ್ನು ಮುಂದಿಟ್ಟಿದೆ. ಈ ಕಾಲೇಜಿನ ಪ್ರಥಮ ತಂಡದ ವಿದ್ಯಾರ್ಥಿ ಹಾಗೂ ವಿಶ್ವಸ್ಥ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ದಿ| ಟಿ. ಮೋಹನದಾಸ್ ಪೈ ಅವರ ಹೆಸರಿನಲ್ಲಿ ಒಂದು ಕೌಶಲ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ, ಈಗಾಗಲೇ ಕಾರ್ಯ ಚಟುವಟಿಕೆಯನ್ನು ಪ್ರಾರಂಭಿಸಿದೆ. ಈ ಸಂಸ್ಥೆಯೂ ಟಿ. ಸತೀಶ್ ಯು. ಪೈ ಅವರ ಕನಸಿನ ಕೂಸಾಗಿದ್ದು, ಅದನ್ನು ಬೆಳೆಸುವತ್ತ ಅವರು
ಭದ್ರ ಬುನಾದಿ ಹಾಕಿದ್ದಾರೆ. ಈಗಾಗಲೇ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮಣಿಪಾಲ ಡಿಜಿಟಲ್ ಸಿಸ್ಟಮ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಡಿಜಿಟಲ್ ಆಧಾರಿತ ತರಬೇತಿ ತರಗತಿಗಳು ಈಗಾಗಲೇ ಆರಂಭಗೊಂಡಿವೆ.
ನೂತನ ಸಂಸ್ಥೆಗೆ ಅಗತ್ಯವಿರುವ ಮೂಲನಿಧಿಯ ವ್ಯವಸ್ಥೆಯನ್ನು ನೂತನ ಅಧ್ಯಕ್ಷರು ಮಾಡಿದ್ದು, ಈ ಸಂಸ್ಥೆಯನ್ನು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಮಾಡಿ, ಮುಂದೆ ಎಲ್ಲ ಯುವಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಿ, ಅವರನ್ನು ಕೌಶಲಯುಕ್ತರನ್ನಾಗಿಸುವ ಸಂಕಲ್ಪ ಅವರು ಮಾಡಿದ್ದಾರೆ.
Related Articles
ಸಂಸ್ಥೆಯ ಉದ್ಘಾಟನ ಸಮಾರಂಭ ಜ.13ಕ್ಕೆ ಬೆಳಗ್ಗೆ 11ಕ್ಕೆ ನೆರವೇರಲಿದೆ. ಉದ್ಘಾಟನೆಯನ್ನು ಟಿ. ಸತೀಶ್ ಯು. ಪೈ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಶ್ವಸ್ಥ ಮಂಡಳಿ ನೂತನ ಅಧ್ಯಕ್ಷರಿಗೆ ಅಭಿನಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅತಿಥಿಗಳಾಗಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ರಿಜಿಸ್ಟ್ರಾರ್ ಡಾ| ರಂಜನ್ ಆರ್. ಪೈ ಅವರು ಭಾಗವಹಿಸಲಿದ್ದು, ಅಕಾಡೆಮಿ ಅಧ್ಯಕ್ಷ ಡಾ| ಎಚ್. ಎಸ್. ಬಲ್ಲಾಳ್ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಅಭಿನಂದನೆ ನುಡಿಯನ್ನು ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರು ಸಲ್ಲಿಸಲಿದ್ದಾರೆ. ವಿಶ್ವಸ್ಥ ಮಂಡಳಿ ಸದಸ್ಯರಾದ ವಸಂತಿ ಆರ್. ಪೈ, ಟಿ.ಅಶೋಕ್ ಪೈ, ಅಕಾಡೆಮಿಯ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮ ಪೂರ್ವದಲ್ಲಿ ವಿದ್ಯಾರ್ಥಿನಿ ಸಮನ್ವಿ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.