Advertisement

ಬೆಂಗಳೂರಿನಲ್ಲಿ ಸ್ನೈಡರ್‌ ಎಲೆಕ್ಟ್ರಿಕ್‌ನ ಹೊಸ ಪಿಸಿಬಿ ತಯಾರಿಕಾ ಘಟಕ: ಎಂ.ಬಿ.ಪಾಟೀಲ್

10:06 PM Dec 10, 2024 | Team Udayavani |

ಪ್ಯಾರಿಸ್‌: ‘ಸ್ನೈಡರ್‌ ಎಲೆಕ್ಟ್ರಿಕ್‌ ಬೆಂಗಳೂರಿನಲ್ಲಿ ತನ್ನ ಹೊಸ ಪ್ರಿಂಟೆಡ್‌ ಸರ್ಕ್ಯೂಟ್‌ ಬೋರ್ಡ್‌ (ಪಿಸಿಬಿ) ತಯಾರಿಕಾ ಘಟಕ ಸ್ಥಾಪಿಸಲು ಉದ್ದೇಶಿಸಿದ್ದು, ಇದರಿಂದ 5,000 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ’ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದ್ದಾರೆ.

Advertisement

ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ  ʼಇನ್ವೆಸ್ಟ್‌ ಕರ್ನಾಟಕʼಕ್ಕೆ ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಲು ಫ್ರಾನ್ಸ್‌ ಪ್ರವಾಸದಲ್ಲಿ ಇರುವ  ಸಚಿವರು ಪ್ಯಾರಿಸ್‌ನಲ್ಲಿ ಸ್ನೈಡರ್‌ ಎಲೆಕ್ಟ್ರಿಕ್‌ನ ಉಪಾಧ್ಯಕ್ಷ ಬ್ರುನೊ ಟರ್ಚೆಟ್‌ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿನ ಕಂಪನಿಯ ಹೂಡಿಕೆ ಬಗ್ಗೆ ಚರ್ಚೆ ನಡೆಸಿದರು.

ಬೆಂಗಳೂರಿನಲ್ಲಿ ಈಗಾಗಲೇ 11,000 ಉದ್ಯೋಗಿಗಳನ್ನು ಹೊಂದಿರುವ ಕಂಪನಿಯು ಮುಂಬರುವ ವರ್ಷಗಳಲ್ಲಿ ಹೊಸ ತಯಾರಿಕಾ ಘಟಕವನ್ನೂ ಇಲ್ಲಿ ಆರಂಭಿಸಲು ಉದ್ದೇಶಿಸಿರುವುದನ್ನು ಬ್ರುನೊ ಅವರು ಸಚಿವರ ಗಮನಕ್ಕೆ ತಂದಿದ್ದಾರೆ.

ವಾಹನ ಬಿಡಿಭಾಗ ತಯಾರಿಕೆಯ ವಿಶ್ವದ 7ನೇ ಅತಿದೊಡ್ಡ ಕಂಪನಿಯಾಗಿರುವ  ಫೋರ್ವಿಯಾ, ಕರ್ನಾಟಕದಲ್ಲಿನ ತನ್ನ  ತಯಾರಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಉದ್ದೇಶಿಸಿರುವುದಾಗಿ ಕರ್ನಾಟಕದ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಸಚಿವ ಪಾಟೀಲರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಫೋರ್ವಿಯಾದ ಉನ್ನತಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ ವೇಳೆಯಲ್ಲಿ ಈ ಭರವಸೆ ದೊರೆತಿದೆ. ಭವಿಷ್ಯದ ಬಂಡವಾಳ ಹೂಡಿಕೆಗಳಿಗೆ ರಾಜ್ಯ ಸರ್ಕಾರವು ಸಂಪೂರ್ಣ ಬೆಂಬಲ ನೀಡುವುದಾಗಿ ಸಚಿವರು ಕಂಪನಿಗೆ ವಾಗ್ದಾನ ನೀಡಿದ್ದಾರೆ.

ಫ್ರಾನ್ಸ್‌ನ ಅತಿದೊಡ್ಡ ಕೈಗಾರಿಕಾ ಒಕ್ಕೂಟವಾಗಿರುವ ಮೆಡೆಫ್‌ನ ಪದಾಧಿಕಾರಿಗಳನ್ನು ಭೇಟಿಯಾದ ಸಚಿವರು,  ನಾವೀನ್ಯತೆ, ಸಂಶೋಧನೆ ಹಾಗೂ ಅಭಿವೃದ್ಧಿ, ವೈಮಾಂತರಿಕ್ಷ, ರಕ್ಷಣೆ ಮತ್ತಿತರ ಪ್ರಮುಖ ಕ್ಷೇತ್ರಗಳಲ್ಲಿನ ಕರ್ನಾಟಕದ ಸಾಮರ್ಥ್ಯಗಳನ್ನು ಮನದಟ್ಟು ಮಾಡಿಕೊಟ್ಟರು. ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆಯ ಅವಕಾಶಗಳನ್ನು ತನ್ನ ಸದಸ್ಯ ಕಂಪನಿಗಳಿಗೆ ವಿವರಿಸಿ  ವಾಣಿಜ್ಯ ಬಾಂಧವ್ಯ ವೃದ್ಧಿಸಲು  ಪ್ರಯತ್ನಿಸುವುದಾಗಿ ಮೆಡೆಫ್‌ ಭರವಸೆ ನೀಡಿದೆ. ಮೆಡೆಫ್‌, ಫ್ರಾನ್ಸ್‌ನ 2 ಲಕ್ಷಕ್ಕೂ ಹೆಚ್ಚು ಕಂಪನಿಗಳ ಪ್ರಾತಿನಿಧಿಕ ಸಂಸ್ಥೆಯಾಗಿದೆ.

Advertisement

ಫ್ರಾನ್ಸ್‌ನಲ್ಲಿ ನಡೆದ ರೋಡ್‌ ಷೋದಲ್ಲಿ, ಬಂಡವಾಳ ಹೂಡಿಕೆ ಆಕರ್ಷಿಸಲು ಕರ್ನಾಟಕ ಅನುಸರಿಸುತ್ತಿರುವ ಪೂರ್ವಭಾವಿ ಸಿದ್ಧತೆ ಹಾಗೂ ಧೋರಣೆಗಳನ್ನು ಅಲ್ಲಿನ ಉದ್ಯಮಗಳಿಗೆ ಪರಿಚಯಿಸಲಾಯಿತು.

ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ  ಅವರು ರಾಜ್ಯದ ನಿಯೋಗದಲ್ಲಿ ಇದ್ದಾರೆ.

ಇದನ್ನೂ ಓದಿ: Gundlupete: ಬೈಕ್- ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next