Advertisement

ಭಾಷೆಯೊಂದಿಗೆ ಬದುಕಿನ ಭಾವಗೀತೆ

12:30 AM Jun 16, 2018 | |

ಅಬ್ಬರದ ಸಂಗೀತ, ಗ್ಲಾಮರ್‌ ಮುಂತಾದ ಆಧುನಿಕ ಸೋಗಿಗೆ ಒಳಗಾಗದೆ ತನ್ನತನವನ್ನು ಉಳಿಸಿಕೊಂಡು ಬಂದಿರುವ ಅಪ್ಪಟ ಕನ್ನಡ ಕಾರ್ಯಕ್ರಮವೇನಾದರೂ ಇದ್ದರೆ ಅದು “ಥಟ್‌ ಅಂತ ಹೇಳಿ’. ಈ ಕಾರ್ಯಕ್ರಮದ ರೂವಾರಿ ಡಾ. ನಾ. ಸೋಮೇಶ್ವರ ಅವರದ್ದು ಕನ್ನಡ ಮನೆಮನಗಳಲ್ಲಿ ಚಿರಪರಿಚಿತ ಹೆಸರು. ಸೋಮೇಶ್ವರ ತಮ್ಮ ಬದುಕಿನ ಹೆಜ್ಜೆಗಳ ಬಗ್ಗೆ ಉದಯವಾಣಿಯೊಂದಿಗೆ ಥಟ್‌ ಅಂತ ಹಂಚಿಕೊಂಡಿದ್ದಿಷ್ಟು…

Advertisement

ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನ ಮಲ್ಲೇಶ್ವರ ದಲ್ಲಿ. ಮೆಜೆಸ್ಟಿಕ್‌, ಮಾರ್ಕೆಟ್‌, ಬಸವನಗುಡಿ ಮುಂತಾದ ಜಾಗ ಗಳು ಈಗ ವಾಹನ, ಜನದಟ್ಟಣೆಯಿಂದ ಕಿಕ್ಕಿರಿದಿರಬಹುದು. ಆದರೆ, ಹಿಂದೆ ಹಾಗಿರಲಿಲ್ಲ. ಚಿಕ್ಕಂದಿನಲ್ಲಿ ಅವೆಲ್ಲಾ ಜಾಗಗಳಿಗೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದೆವು. ಬಸ್‌ ಅಪರೂಪವಾಗಿತ್ತು. ಅದು ಬಿಟ್ಟರೆ ಜಟಕಾ ಗಾಡಿಗಳಿರುತ್ತಿದ್ದವು. ಆಗಿನ ಕಾಲವೇ ಬೇರೆ. ವಿಪರೀತ ಎನ್ನುವಷ್ಟು ಮರಗಳಿದ್ದವು. ಈಗ ಸದಾಶಿವನಗರ ಇರುವ ಸ್ಥಳದಲ್ಲಿ ಅಂದು ರಾಜರಿಗೆ ಸೇರಿದ್ದ ಹಣ್ಣಿನ ತೋಟ ಗಳಿದ್ದವು. ಮಾವು, ಸೀಬೆ, ನೇರಳೆ, ಗೇರು ಮುಂತಾದವನ್ನು ಅಲ್ಲಿ ಬೆಳೆಯುತ್ತಿದ್ದರು. ನಾವು ಮರಗಳಿಗೆ ಕಲ್ಲು ಹೊಡೆದು ಹಣ್ಣು ತಿನ್ನುತ್ತಿದ್ದೆವು. ನನ್ನ ಇನ್ನೊಂದು ಮೆಚ್ಚಿನ ಸ್ಥಳ ಅಂದರೆ, ಸ್ಯಾಂಕಿ ಟ್ಯಾಂಕಿ ಕೆರೆ. ಅಲ್ಲಿ ನನ್ನ ಬಾಲ್ಯದ ಅವಿಸ್ಮರಣೀಯ ಕ್ಷಣಗಳನ್ನು ಕಳೆದಿದ್ದೇನೆ. ವಾಯುವಿಹಾರ, ವಾಟರ್‌ ಪೋಲೋ ನ್ಪೋರ್ಟ್ಸ್ ಸೇರಿದಂತೆ ಅಲ್ಲಿ ನಡೆಯುತ್ತಿದ್ದ ಇನ್ನೂ ಹಲವು ಚಟುವಟಿಕೆಗಳಿಗೆ ಸಾಕ್ಷಿಯಾಗಿದ್ದೇನೆ. ಇವಿಷ್ಟನ್ನೂ ಈಗಿನ ಬೆಂಗಳೂರಿಗರಿಗೆ ಊಹಿಸಿಕೊಳ್ಳಲೂ ಕಷ್ಟವಾಗಬಹುದು. ನಾವು ಅಂಥಾ ಪರಿಸ್ಥಿತಿ ತಂದುಕೊಂಡಿರುವುದು ವಿಪರ್ಯಾಸ.

ಚಿಕ್ಕಂದಿನಲ್ಲೇ ದುಡಿಮೆ
ನಮ್ಮ ಮನೆಯಲ್ಲಿ ನಾನು, ಅಣ್ಣ ಮತ್ತು ಅಮ್ಮ ಮೂರೇ ಮಂದಿ. ನನಗೆ ಒಂದು ವರ್ಷವಿರುವಾಗಲೇ ತಂದೆ ತೀರಿಕೊಂಡಿದ್ದರು. ಮನೆಯಲ್ಲಿ ಕಷ್ಟವಿತ್ತು. ಹೀಗಾಗಿ, ಪುಸ್ತಕಕೊಳ್ಳಲು ಅಥವಾ ಸ್ವಂತಕ್ಕೆ ಖರ್ಚು ಮಾಡಲು ಮನೆಯಲ್ಲಿ ದುಡ್ಡು ಕೇಳಲಾಗುತ್ತಿರಲಿಲ್ಲ. ಈ ಕಾರಣಕ್ಕೆ ಚಿಕ್ಕಂದಿನಲ್ಲೇ ಸಂಪಾದನೆಗೆ ಇಳಿಯಬೇಕಾದ ಅನಿವಾರ್ಯತೆ ಇತ್ತು. ಅಣ್ಣನಿಗೆ ಪೈಪೋಟಿ ಕೊಡಲೆಂದು ಕಲಿತಿದ್ದ ಚಿತ್ರಕಲೆ ಉಪಯೋಗಕ್ಕೆ ಬಂತು. ಸುದ್ದಿ ಪತ್ರಿಕೆಗಳಿಗೆ ಪಾಕೆಟ್‌ ಕಾಟೂìನುಗಳನ್ನು ಬಿಡಿಸಿ ಕಳಿಸು ತ್ತಿದ್ದೆ. 3 ರೂ. ಸಿಗುತ್ತಿತ್ತು. ಶಾಲೆ ಸೇರಿದ ಮೇಲೆ ಇಂಗ್ಲೀಷ್‌ ಪತ್ರಿಕೆಗಳಿಂದ ವಿಜ್ಞಾನ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದೆ. ಅದರಿಂದ ದೊರೆಯುತ್ತಿದ್ದ ಸಂಭಾವನೆ 10 ರೂ. ಅದು ಈಗಿನ ಸಾವಿರಾರು ರೂಪಾಯಿಗಳಿಗೆ ಸಮ. ಎಷ್ಟೋ ಸಲ ನನ್ನ ಬಳಿಯಿರುತ್ತಿದ್ದ ಹಣವನ್ನು ಖರ್ಚು ಮಾಡಿಯೂ ಮನೆಗೆ ಕೊಡುವಷ್ಟು ಮಿಗುತ್ತಿತ್ತು. ಇದರಿಂದ ಅಮ್ಮನೂ ಸಂತಸಗೊಳ್ಳುತ್ತಿದ್ದಳು.

ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು
ಶಾಲೆಯಲ್ಲಿ ನನ್ನನ್ನು ಪ್ರಭಾವಿಸಿದ ಗುರುಗಳು ಇಬ್ಬರು. ಸಂಪಟೂರು ವಿಶ್ವನಾಥ್‌ ಮತ್ತು ತ್ಯಾಗಲಿ ಮೇಷ್ಟ್ರು. ಪುಸ್ತಕಗಳ ಗೀಳು ಹತ್ತಿದ್ದು, ನಾಟಕದ ಬಗ್ಗೆ ಆಸಕ್ತಿ ಮೂಡಿದ್ದು, ಬರವಣಿಗೆ- ಮಾತುಗಾರಿಕೆ ಬಗ್ಗೆ ತಿಳಿವಳಿಕೆ ಮೂಡಿದ್ದು ಎಲ್ಲವೂ ಅವರಿಂದಲೇ. ಶಾಲೆಯಲ್ಲಿ ನಾನು ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದೆ. ಬಹುಮಾನಗಳೂ ಅಷ್ಟೆ, ದಂಡಿಯಾಗಿ ಸಿಗುತ್ತಿದ್ದವು. ಒಂದು ಸಲ ನಾನು ರಂಗೋಲಿ ಸ್ಪರ್ಧೆಗೆ ಹೆಸರು ನೋಂದಾಯಿಸಿದ್ದೆ. ಗಲಾಟೆ ಶುರುವಾಯಿತು. ರಂಗೋಲಿ ಸ್ಪರ್ಧೆ ಇಟ್ಟಿರುವುದು ಹುಡುಗಿಯರಿಗಾಗಿ, ಗಂಡು ಮಕ್ಕಳಿಗಲ್ಲ ಅಂತ. ಕಡೆಗೆ ವಾದ ವಿವಾದಗಳು ನಡೆದು, ಚರ್ಚೆ ಏರ್ಪಟ್ಟು ರಂಗೋಲಿ ಸ್ಪರ್ಧೆಯಲ್ಲಿ ಹುಡುಗಿಯರು ಮಾತ್ರವೇ ಪಾಲ್ಗೊಳ್ಳಬೇಕೆಂಬ ಲಿಖೀತ ನಿಯಮ ಎಲ್ಲೂ ಇಲ್ಲ. ಹೀಗಾಗಿ ಹುಡುಗರು ಪಾಲ್ಗೊಳ್ಳು ವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ತೀರ್ಪು ಹೊರಬಿತ್ತು. ನಾನು ಯಾವುದೇ ತಕರಾರಿಲ್ಲದೆ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಬಹುಮಾನವೂ ಬಂತು! ಶಿವರಾಜಕುಮಾರ್‌ ಅವರ “ರಥಸಪ್ತಮಿ’ ಸಿನಿಮಾದಲ್ಲೂ ಇದೇ ಥರದ ಒಂದು ದೃಶ್ಯ ಇದೆ. ಅದು ನನ್ನ ಜೀವನದಲ್ಲೂ ನಡೆದಿದ್ದು ಕಾಕತಾಳೀಯ!

ರೇಡಿಯೊ ತಂದಿತ್ತ ಸಂಕಷ್ಟ
ವಿಜ್ಞಾನ ನಿಯತಕಾಲಿಕೆಯೊಂದರಲ್ಲಿ “ಹೌ ಟು ಡೂ ಇಟ್‌’ ಎಂಬ ಅಂಕಣ ಪ್ರಕಟಗೊಳ್ಳುತ್ತಿತ್ತು. ಒಮ್ಮೆ ಅದರಲ್ಲಿ ರೇಡಿಯೊ ತಯಾರಿಸುವುದು ಹೇಗೆಂಬುದನ್ನು ಚಿತ್ರ ಸಹಿತ ವಿವರಿಸಿದ್ದರು. ಅದನ್ನು ಓದಿ ನಾನು ಪ್ರಭಾವಿತನಾದೆ. ನನಗೂ ರೇಡಿಯೊ ತಯಾರಿಸಬೇಕೆಂದು ಆಸೆಯಾಯಿತು. ಇದು ಮುಂದೆ ನಾನಾ ಸಂಕಷ್ಟಗಳಿಗೆ ನನ್ನನ್ನು ದೂಡುತ್ತದೆ ಎನ್ನುವುದು ಆ ಸಂದರ್ಭದಲ್ಲಿ ನನಗೆ ತಿಳಿಯಲಿಲ್ಲ. ಶಿವಾಜಿನಗರದ ಗುಜರಿ ಅಂಗಡಿಗಳಿಗೆಲ್ಲಾ ನುಗ್ಗಿ ಡಯೋಡ್‌, ಟ್ರಾನ್ಸಿಸ್ಟರ್‌ ಮುಂತಾದ ಎಲೆಕ್ಟ್ರಾನಿಕ್‌ ತುಣುಕುಗಳನ್ನು ಹೆಕ್ಕಿಕೊಂಡು ಬಂದೆ. ಅಂಕಣದಲ್ಲಿ ವಿವರಿಸಿದ್ದಂತೆ ಆ ತುಣುಕುಗಳನ್ನು ಜೋಡಿಸುತ್ತಾ, ಸೋಲ್ಡರ್‌ ಮಾಡಿ ವಯರುಗಳನ್ನು ಸೇರಿಸುತ್ತಾ ಹೋದೆ. ತುಂಡು ತಂತಿಯ ಒಂದು ತುದಿಯನ್ನು ರೇಡಿಯೋಗೆ ಸಿಗಿಸಿ ಇನ್ನೊಂದು ತುದಿಯನ್ನು ಗೋಡೆಗೆ ನೇತುಹಾಕಿದೆ. ನನ್ನ ರೇಡಿಯೋಗೆ ಅದೇ ಏರಿಯಲ್‌ ಆ್ಯಂಟೆನಾ. ರೇಡಿಯೊ ಸಿದ್ಧಗೊಂಡಿತು. ಆನ್‌ ಮಾಡಿದರೆ ಗೊಗ್ಗರು ದನಿಯಲ್ಲಿ ಆಕಾಶವಾಣಿ ಕೇಳಿತು. ತುಂಬಾ ಖುಷಿಯಾಯಿತು. 

Advertisement

ಇಲ್ಲೊಂದು ವಿಚಾರ ಹೇಳಬೇಕು. ಆಗಿನ ಕಾಲದಲ್ಲಿ ಮನೆಯಲ್ಲಿ ಯಾರು ಬೇಕಾದರೂ ರೇಡಿಯೋ ಇಟ್ಟುಕೊಳ್ಳುವ ಹಾಗಿರಲಿಲ್ಲ. ರೇಡಿಯೊ ಬಳಸಲು ಲೈಸೆನ್ಸ್‌ ಪಡೆದಿರಬೇಕಿತ್ತು. ಸರ್ಕಾರದಲ್ಲಿ, ರೇಡಿಯೊ ತಪಾಸಣೆಗೆಂದೇ ಒಂದು ಪ್ರತ್ಯೇಕ ವಿಭಾಗವಿತ್ತು. ಅವರು ನಮ್ಮ ಮನೆಗೆ ಬಂದು ರೇಡಿಯೊ ಜಪ್ತಿ ಮಾಡಿಕೊಂಡು ಹೋದರು. ದಂಡ ಕಟ್ಟಿ ಬಿಡಿಸಿಕೊಂಡು ಬರಲು ನನ್ನ ಬಳಿ ದುಡ್ಡಿರಲಿಲ್ಲ. ಹೀಗಾಗಿ ತುಂಬಾ ಸಮಯ ನನ್ನ ರೇಡಿಯೊ ಅವರ ಬಳಿಯೇ ಇತ್ತು. ಬಂದು ಬಿಡಿಸಿಕೊಂಡು ಹೋಗಿ ಎಂದು ಇಲಾಖೆಯಿಂದ ಪತ್ರಗಳು ಒಂದೇ ಸಮನೆ ಬರುತ್ತಿದ್ದವು. ಇವೆಲ್ಲಾ ಪಡಿಪಾಟಲುಗಳು ಬೇಕಿತ್ತಾ ಎಂದು ಅಮ್ಮನಿಂದ ಬೈಸಿಕೊಂಡಿದ್ದೂ ಆಯ್ತು. ಕೊನೆಗೊಂದು ದಿನ ಹೇಗೋ ಹಣ ಹೊಂದಿಸಿ ರೇಡಿಯೊ ಬಿಡಿಸಿಕೊಂಡು ಬಂದೆ. 

ರಾಜಕುಮಾರ್‌ ಮತ್ತು ಜಿ.ಪಿ ರಾಜರತ್ನಂ 
ನಾನು ಕನ್ನಡ ಮಾತಾಡುವ ಶೈಲಿಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಆ ಶ್ರೇಯ ಸಲ್ಲಬೇಕಾಗಿರುವುದು ಈ ಇಬ್ಬರು ದ್ರೋಣಾಚಾರ್ಯರಿಗೆ. ಡಾ. ರಾಜಕುಮಾರ್‌ ಮತ್ತು ಜಿ.ಪಿ ರಾಜರತ್ನಂ. ಬೆಂಗಳೂರಿನಲ್ಲಿ ಗಾಂಧಿ ಸಾಹಿತ್ಯ ಸಂಘ ಅಂತ ಇತ್ತು. ಜಿ.ಪಿ. ರಾಜರತ್ನಂ ಅವರ ಮಾತು ಕೇಳಲೆಂದೇ ನಾನು ಅಲ್ಲಿಗೆ ಹೋಗುತ್ತಿದ್ದೆ. ಕಂಚಿನ ಕಂಠ ಅವರದು. ಕನ್ನಡವನ್ನು ಎಷ್ಟು ಸ್ಪುಟವಾಗಿ, ಅಸ್ಖಲಿತವಾಗಿ ಮಾತಾಡುತ್ತಿದ್ದರು ಎಂದರೆ ನಾನು ಪ್ರಪಂಚವನ್ನೇ ಮರೆಯುತ್ತಿದ್ದೆ. 

ನಾನು ರಾಜಕುಮಾರ್‌ ಅವರ ಅಭಿಮಾನಿ. ಅವರಾಡುತ್ತಿದ್ದ ಪ್ರತಿ ಶಬ್ದದಲ್ಲೂ ಜೀವವಿರುತ್ತಿತ್ತು, ಸೌಂದರ್ಯವಿರುತ್ತಿತ್ತು. ಅವರ ಬಾಯಲ್ಲಿ ಕನ್ನಡ ಬಹಳ ಚೆನ್ನಾಗಿ ಕೇಳುತ್ತಿತ್ತು. ನಿಜವಾದ ಕನ್ನಡ ಕಲಿಯಬೇಕು ಅಂದರೆ ಈ ಇಬ್ಬರು ಮಹನೀಯರ ಮಾತುಗಳನ್ನು ಕೇಳಿದರೆ ಸಾಕು. ಜಿ.ಪಿ. ರಾಜರತ್ನಂ ಅವರ ಮಾತುಗಳ ಆಡಿಯೋ ಬೆಂಗಳೂರು ಆಕಾಶವಾಣಿಯ ಸಂಗ್ರಹದಲ್ಲಿದೆ.

ಥಟ್‌ ಅಂತ ಹೇಳಿ
“ರಾತ್ರಿ 9 ಆಗುತ್ತಿದ್ದಂತೆ ಚಂದನ ವಾಹಿನಿಯಲ್ಲಿ ಕನ್ನಡ ಶಾಲೆಯೊಂದು ಶುರುವಾಗುತ್ತದೆ’ - ಈ ಮಾತನ್ನು ಹೇಳಿದವರು ವಿಮರ್ಶಕ ಕೆ.ವಿ. ತಿರುಮಲೇಶ್‌ ಅವರು. ಮೆಡಿಕಲ್‌ನಲ್ಲಿ ನಾನು ಆರಿಸಿಕೊಂಡಿದ್ದು ಇಂಡಸ್ಟ್ರಿಯಲ್‌ ಮೆಡಿಸಿನ್‌ ವಿಭಾಗ. ಓದು ಮುಗಿದ ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸವೂ ಸಿಕ್ಕಿತು. ಆರೋಗ್ಯ ಸಂಬಂಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದುದರಿಂದ ಕಾಲೇಜು ದಿನಗಳಿಂದಲೂ ಬೆಂಗಳೂರು ದೂರದರ್ಶನದ ಸಂಪರ್ಕವಿತ್ತು. ದೂರದರ್ಶನದ ಚಂದ್ರಕುಮಾರ್‌ ಅವರು ಯಾವುದಾದರೂ ಕಾರ್ಯಕ್ರಮ ನಡೆಸಿಕೊಡಿ ಅಂತ ಕೇಳಿದ್ದರು. ಕೆಲಸದ ಕಾರಣ ವಾರದ ದಿನಗಳಲ್ಲಿ ದೂರದರ್ಶನಕ್ಕೆ ಹೋಗಲಾಗುತ್ತಿರಲಿಲ್ಲ. ನನಗೆ ಉಳಿದದ್ದು ಭಾನುವಾರ ಚಿತ್ರೀಕರಣಗೊಳ್ಳುತ್ತಿದ್ದ ಕ್ವಿಜ್‌ ಕಾರ್ಯಕ್ರಮ ಒಂದೇ. 3500ನೇ ಸಂಚಿಕೆಯತ್ತ ಸಾಗುತ್ತಿರುವ “ಥಟ್‌ ಅಂತ ಹೇಳಿ’ ಕಾರ್ಯಕ್ರಮ ರೂಪುಗೊಂಡಿದ್ದು ಹೀಗೆ. ಅಲ್ಲಿಯವರೆಗೆ ಕ್ವಿಝ್ ಎಂದರೆ ಹಾಳೆಯಲ್ಲಿ ಬರೆದಿಟ್ಟುಕೊಂಡಿದ್ದ ಪ್ರಶ್ನೆಗಳನ್ನು ಓದುವುದು ಎಂದಿತ್ತು. “ಥಟ್‌ ಅಂತ ಹೇಳಿ’ ಮಾಡುವಾಗ ಶ್ರವಣ ಮತ್ತು ದೃಶ್ಯ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಚಿತ್ರ ಪ್ರಶ್ನೆ, ಆಡಿಯೋ ಕೇಳಿಸುವುದು ಮುಂತಾದ ಸಾಧ್ಯತೆಗಳನ್ನು ನಾವು ಪ್ರಯತ್ನಿಸಿದೆವು. ಅದು ಜನರಿಗೆ ಇಷ್ಟವಾಯಿತು. 

ನಾನು ನಿರಂತರ ಓದುಗ. “ನಿನ್ನ ಸಂಪರ್ಕಕ್ಕೆ ಬಂದ ಯಾವ ಪುಸ್ತಕವನ್ನೂ ನಿರ್ಲಕ್ಷಿಸಬೇಡ, ಓದು’ ಅಂದಿದ್ದರು ಸಂಪಟೂರು ವಿಶ್ವನಾಥ್‌. ಗುರುಗಳ ಮಾತನ್ನು ಇಲ್ಲಿಯ ತನಕ ಪಾಲಿಸಿಕೊಂಡು ಬಂದಿದ್ದೇನೆ. ಕಾರ್ಯಕ್ರಮದಲ್ಲಿ ದುಡ್ಡು ಅಥವಾ ಇನ್ಯಾವುದೋ ವಸ್ತುವನ್ನು ಬಹುಮಾನವಾಗಿ ಕೊಡುವುದಕ್ಕೆ ಬದಲಾಗಿ ಪುಸ್ತಕ ಕೊಡುವ ಯೋಚನೆ ಹುಟ್ಟಿದ್ದೇ ಈ ಹಿನ್ನೆಲೆಯಲ್ಲಿ. ನವಕರ್ನಾಟಕ, ಸಾವಣ್ಣ, ಸಪ್ನಾ ಬುಕ್ಸ್‌, ಸ್ನೇಹಾ ಮುಂತಾದ ಮುದ್ರಕರು, ಪುಸ್ತಕ ಮಾರಾಟಗಾರರು ಬಹುಮಾನ ವಿತರಣೆಗಾಗಿ ಪುಸ್ತಕಗಳನ್ನು ನೀಡಿದ್ದಾರೆ. ಅಲ್ಲದೆ ಕರ್ನಾಟಕದಾದ್ಯಂತ ಲೇಖಕರು ತಮ್ಮ ಪುಸ್ತಕಗಳನ್ನು ಕಳಿಸಿಕೊಟ್ಟಿದ್ದಾರೆ. ಕಾರ್ಯಕ್ರಮ ವೀಕ್ಷಿಸಿ “ಸರ್‌ ಆ ದಿನ ನೀವು ಇಂತಿಂಥಾ ಪುಸ್ತಕ ಪರಿಚಯಿಸಿದ್ದಿರಿ. ಅದೆಲ್ಲಿ ಸಿಗುತ್ತೆ?’ ಅಂತ ಕೇಳುವವರೂ ಇದ್ದಾರೆ. ಜನರಲ್ಲಿ ಪುಸ್ತಕ ಪ್ರೀತಿ ಬೆಳೆಯಲಿ ಎಂಬ ನಮ್ಮ ಉದ್ದೇಶ ಸಫ‌ಲವಾಗುತ್ತಿದೆ ಎನ್ನುವುದು ಖುಷಿಯ ವಿಚಾರ.

ಮನಸ್ಸಿನಲ್ಲುಳಿದ ಸ್ಪರ್ಧಿ
ಒಂದು ಬಾರಿ ಏಡ್ಸ್‌ ಜಾಗೃತಿಗಾಗಿ ವಿಶೇಷ ಸಂಚಿಕೆ ಮಾಡಿದ್ದೆವು. ಕಾರ್ಯಕ್ರಮಕ್ಕೆ ಏಡ್ಸ್‌ ರೋಗಿಗಳನ್ನೇ ಸ್ಪರ್ಧಿಗಳಾಗಿ ಆಹ್ವಾನಿಸಿದ್ದೆವು. ಅವರಲ್ಲಿ ಇಬ್ಬರು ಪುರುಷರು, ಒಬ್ಬಳು ಮಹಿಳೆ. ವೀಕ್ಷಕರಿಗೆ ತಿಳಿದಿರುತ್ತದೆ, ಕಾರ್ಯಕ್ರಮದ ಕೊನೆಯಲ್ಲಿ ನಾನು ಸ್ಪರ್ಧಿಗಳಿಗೆ ಹಸ್ತಲಾಘವ ಕೊಟ್ಟು ಬೀಳ್ಕೊಡುತ್ತೇನೆ. ಮಹಿಳಾ ಸ್ಪರ್ಧಿಗಳಿಗೆ ಹಸ್ತಲಾಘವಕ್ಕೆ ಬದಲಾಗಿ ಕೈ ಮುಗಿದು ವಂದಿಸುತ್ತೇನೆ. ಇದು ನಾನು ಶುರುವಿನಿಂದಲೂ ರೂಢಿಸಿಕೊಂಡು ಬಂದ ಪರಿಪಾಠ. ಏಡ್ಸ್‌ ಜಾಗೃತಿ ವಿಶೇಷ ಕಾರ್ಯಕ್ರಮದಲ್ಲೂ ಹಾಗೆಯೇ ಮಾಡಿದ್ದೆ. ಅದನ್ನು ಕಂಡು ಆ ಹೆಣ್ಣುಮಗಳು “ಸಾರ್‌ ನಾನು ಏಡ್ಸ್‌ ಪೀಡಿತೆ ಅಂತ ನೀವು ನನಗೆ ಶೇಕ್‌ ಹ್ಯಾಂಡ್‌ ಕೊಡಲಿಲ್ಲ, ಅಲ್ವಾ?’ ಅಂತ ಕೇಳಿಬಿಟ್ಟಿದ್ದಳು. ನನಗೆ ತುಂಬಾ ವೇದನೆಯಾಯಿತು.

 “ಇಲ್ಲಮ್ಮಾ… ಖಂಡಿತವಾಗಿ ಅದಕ್ಕಲ್ಲ. ಒಬ್ಬ ಡಾಕ್ಟರ್‌ ಆಗಿ ನಾನು ಹಾಗೆ ಮಾಡುತ್ತೇನೆಯೇ? ನಾನು ಮುಂಚಿನಿಂದಲೂ ರೂಢಿಸಿಕೊಂಡು ಬಂದಿರುವ ಪರಿಪಾಠವಿದು’ ಎಂದು ಸಮಾಧಾನಿಸಿದೆ. ಆಕೆಗಾಗಿ ಅದೊಂದು ದಿನ ನನ್ನ ಶಿಷ್ಟಾಚಾರವನ್ನು ಬದಿಗಿಟ್ಟು ಅವಳಿಗೆ ಶೇಕ್‌ ಹ್ಯಾಂಡ್‌ ನೀಡಿದೆ! ಆ ಹೆಣ್ಣುಮಗಳ ಮೊಗದಲ್ಲಿ ನಗು ಕಂಡು ಮನಸ್ಸು ನಿರುಮ್ಮಳವಾಯ್ತು. 

 ನಿರೂಪಣೆ: ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next