‘ಕೃಷ್ಣ ನೀ ಬೇಗನೆ ಬಾರೋ…’ ಈ ಹಾಡು ಕೇಳಿದರೆ ಸಾಕು ತೊಟ್ಟಿಲಲ್ಲಿ ಮಲಗಿದ್ದ ಕಂದನಿಂದ, ಬದುಕಿನ ಕೊನೆಯಲ್ಲಿರುವ ಜೀವಗಳ ತನಕ ಎಲ್ಲರ ಮನಸ್ಸಿನಲ್ಲೂ ಒಂದು ರೀತಿಯ ಪ್ರಪುಲ್ಲತೆ ಅರಳಿಕೊಳ್ಳುತ್ತದೆ. ಈ ಸಾಲುಗಳನ್ನು ಕೇಳಿ ಆನಂದಿಸದಿರಲು ಯಾರಿಂದ ತಾನೆ ಸಾಧ್ಯ? ಇದೇ ಸಾಲುಗಳನ್ನೀಗ ‘ರಂಗನಾಯಕಿ’ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ವ್ಯಾಸತೀರ್ಥರ ರಚನೆಯ ಈ ಹಾಡಿಗೆ ಮಣಿಕಾಂತ್ ಕದ್ರಿ ಹೃದಯಕ್ಕೆ ತಾಕುವಂತಾ ಸ್ವರ ಸಂಯೋಜಿಸಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಮಹೋನ್ನತ ನಿರ್ದೇಶಕ ಕಣಗಾಲ್ ಪುಟ್ಟಣ್ಣನವರ ‘ರಂಗನಾಯಕಿ’ಯಂತೆಯೇ ದಯಾಳ್ ಅವರ ‘ರಂಗನಾಯಕಿ’ ಕೂಡ ಮಹಿಳೆಯೊಬ್ಬಳ ಕುರಿತಾದ ಕಥಾಹಂದರ ಹೊಂದಿದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳೊಬ್ಬಳು ಈ ಸಮಾಜದಲ್ಲಿ ಹೇಗೆ ತಲೆಯೆತ್ತಿ ನಿಲ್ಲುತ್ತಾಳೆ, ತನಗಾದ ದೌರ್ಜನ್ಯದ ವಿರುದ್ಧ ಹೇಗೆ ದನಿಯೆತ್ತುತ್ತಾಳೆ ಎಂಬುದು ಚಿತ್ರದ ತಿರುಳು.
ಈಗ ಬಿಡುಗಡೆಯಾಗಿರುವ ಕೃಷ್ಣ ನೀ ಬೇಗನೆ ಬಾರೋ ಹಾಡು ಪ್ರೇಮಗೀತೆಯಂತೆ ಮೂಡಿಬಂದಿದೆ. ಬಿಡುಗಡೆಯಾದ ಅಲ್ಪ ಕಾಲಾವಧಿಯಲ್ಲೇ ಹೆಚ್ಚು ಜನರನ್ನು ತಲುಪಿರುವ ಈ ಹಾಡು ಸಂಗೀತ ಪ್ರಿಯರನ್ನು ಆರ್ಕಸಿದೆ. ಲಿರಿಕಲ್ ವಿಡಿಯೋ ಕೂಡಾ ಅಷ್ಟೇ ಕ್ರಿಯಾಶೀಲತೆಯಿಂದದ ಕೂಡಿದೆ.
ಶ್ರೀಮತಿ ಮಂಜುಳಾ ಮತ್ತು ಎಸ್.ವಿ. ಕೃಷ್ಣಮೂರ್ತಿ ಅರ್ಪಿಸಿರುವ ಎಸ್.ವಿ. ಎಸ್.ವೀ. ಎಂಟರ್‌ಟೈನ್ಮೆಂಟ್ ಲಾಂಛನದಲ್ಲಿ ತಯಾರಾಗಿರುವ, ಎಸ್.ವಿ ನಾರಾಯಣ್ ನಿರ್ಮಾಣದ ಚಿತ್ರಕ್ಕೆ ಬಿ. ರಾಕೇಶ್ ಛಾಯಾಗ್ರಹಣ, ಸುನಿಲ್ ಕಶ್ಯಪ್ ಸಂಕಲನ, ಕದ್ರಿ ಮಣಿಕಾಂತ್ ಸಂಗೀತ, ನವೀನ್ ಕೃಷ್ಣ ಸಂಭಾಷಣೆ, ವೆಂಕಟ್ ದೇವ್ ಸಹನಿರ್ದೇಶನವಿದೆ. ಶ್ರೀನಿ, ಅದಿತಿ ಪ್ರಭುದೇವ ಮತ್ತು ತ್ರಿವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅತಿ ಶೀಘ್ರದಲ್ಲೇ ಈ ಚಿತ್ರ ತೆರೆಗೆ ಬರುವ ತಯಾರಿ ನಡೆಸುತ್ತಿರುವುದಾಗಿ ನಿರ್ಮಾಪಕ ಎಸ್.ವಿ. ನಾರಾಯಣ್ ತಿಳಿಸಿದ್ದಾರೆ.
ದಯಾಳ್ ಪದ್ಮನಾಭನ್ ಒಂದರ ಹಿಂದೊಂದು ಮೌಲಿಕವಾದ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಅದರಲ್ಲೂ ಸಮಾಜದ ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ ಮೂಡಿಬರುತ್ತಿರುವ ದಯಾಳ್ ಅವರ ಸಿನಿಮಾಗಳು ಎಲ್ಲ ಬಗೆಯ ಪ್ರೇಕ್ಷಕರ ಗಮನ ಸೆಳೆದಿದೆ. ಈಗ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಅಮಾನವೀಯ ಘಟನೆಯೊಂದರ ಸುತ್ತ ‘ರಂಗನಾಯಕಿ’ಯನ್ನು ರೂಪಿಸಿದ್ದಾರೆ ನಿರ್ದೇಶಕ ದಯಾಳ್.