ವ್ಯಕ್ತಿ ತನ್ನ ಬದುಕಿನ ಸಾರ್ಥಕತೆಯನ್ನು ಗುರುತಿಸಿಕೊಳ್ಳುವುದು ಯಾವ ರೀತಿಯಲ್ಲಿ? ಇದಕ್ಕೆ ಹಲವಾರು ಮಾರ್ಗಗಳಿವೆ- ಅಂತರಂಗದ ಮಿತ್ರರ ಮೌಲ್ಯಾಂಕನದ ಮೂಲಕ; ಊರ ಸಜ್ಜನರ ದೃಷ್ಟಿಕೋನದ ಮೂಲಕ; ಬಂಧುಬಾಂಧವರ “ವಸ್ತುನಿಷ್ಠ’ ಪಾತ್ರ ವಿಶ್ಲೇಷಣೆಯ ಪ್ರಕ್ರಿಯೆಯ ಮೂಲಕ ಇತ್ಯಾದಿ. ಆದರೆ, “ಪತ್ನಿಯರು ಕಂಡಂತೆ ಪ್ರಸಿದ್ಧರು’ ಕೃತಿಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರ ವ್ಯಕ್ತಿತ್ವದ ದರ್ಶನ ನಮಗೆ ಆಗುವುದು ಅವರೊಂದಿಗೆ ಸುದೀರ್ಘ ದಾಂಪತ್ಯ ಜೀವನ ನಡೆಸಿದ ಸದ್ಗƒಹಿಣಿಯರ ಮೂಲಕ. ಇಲ್ಲಿ ಪರಿಚಯಿಸಲ್ಪಟ್ಟಿರುವ ಎಲ್ಲರೂ ಖ್ಯಾತರೇ. ಕವಿ, ಕಲಾವಿದ, ರಾಜಕಾರಣಿ, ಇತಿಹಾಸಕಾರ, ಚಿತ್ರನಟ, ಛಾಯಾಗ್ರಾಹಕ, ವಿಜ್ಞಾನಿ, ಕ್ರೀಡಾಪಟು, ಚಿತ್ರನಿರ್ಮಾಪಕ, ಪತ್ರಿಕೋದ್ಯಮಿ - ಮುಂತಾದ ಪಾತ್ರಗಳ ಮೂಲಕ ತಮ್ಮ ಬದುಕಿನ ನಡೆಯನ್ನು ಚೆಲುವುಗೊಳಿಸಿಕೊಂಡವರು. ಈ 40 ಮಂದಿ ಮಹನೀಯರ ವ್ಯಕ್ತಿತ್ವದ ಅನಾವರಣ, ಅವರನ್ನು ನಿರಂತರವಾಗಿ “ಸಂಭಾಳಿಸಿಕೊಂಡು’ ಬಂದಿರುವ ಪತ್ನಿಯರ ಮೂಲಕ ಆಗಿರುವುದರಿಂದ ಈ ವ್ಯಕ್ತಿಚಿತ್ರಗಳು ಅತ್ಯಂತ ಆಪ್ತವಾಗಿವೆ; ಜತೆಗೇ ಈ ದಂಪತಿಗಳು ನಡೆದ ಕಲ್ಲುಮುಳ್ಳಿನ ಹಾದಿಗಳ ನಿಕಟ ದರ್ಶನವನ್ನೂ ಮಾಡಿಸುತ್ತವೆ. ಇವರಲ್ಲಿ ಅನೇಕರು ತಮ್ಮ ತಮ್ಮ ಕಾರ್ಯಕ್ಷೇತ್ರಗಳ ಶಿಖರಸ್ಥಾನಿಗಳು; ರಾಷ್ಟ್ರಮಟ್ಟದ ಶ್ರಮ-ಸಫಲ ಸಾಧಕರು; ಸರಳತೆ ಹಾಗೂ ಋಜು ನಡೆಯೆಂದರೇನೆಂದು ಸಮಾಜಕ್ಕೆ ತೋರಿಸಿಕೊಟ್ಟವರು.
ಇಂಥವರ ಸಹಧರ್ಮಿಣಿಯರು ತಮ್ಮ ಪತಿಯಂದಿರ ದೋಷಗಳಿಗೆ ಅಷ್ಟೊಂದು ಗಮನಕೊಡದೆ, ಅವರ ಗುಣಗಳನ್ನಷ್ಟೇ ಕಂಡವರು. ಮಾತೃಹೃದಯದಿಂದ, ಸ್ವಂತಿಕೆ ಮರೆಯದ ಹೊಂದಾಣಿಕೆ ಗುಣದಿಂದ, ಸಾಂಸಾರಿಕ ಸಾಂಗತ್ಯವೆಂದರೇನೆಂದು ಅರ್ಥಮಾಡಿಕೊಂಡವರು. ಇಂಥವರ ಬಾಯಿಂದ ಬಂದ ಇವು ಗದ್ಯರೂಪಿ ದಾಂಪತ್ಯಗೀತೆಗಳೂ ಹೌದು; ಬದುಕಿನ ಹೋರಾಟದ ಯಶೋಗಾಥೆಗಳೂ ಹೌದು. ಇಂಥ ಮಾಗಿದ ಹಿರಿಯ ಗೃಹಿಣಿಯರನ್ನು ನಿರ್ಭಿಡೆಯಿಂದ, ಆದರೆ ಅತ್ಯಂತ ಅಕ್ಕರೆಯಿಂದ ಮಾತಾಡುವಂತೆ ಮಾಡಿರುವ, ಆ ಮೂಲಕ ಕನ್ನಡಿಗರಿಗೆ ನಾಡು ಹೆಮ್ಮೆ ಪಡುವಂತೆ ಮಾಡಿರುವ ಸಾಧಕರನ್ನು ಆಡಂಬರರಹಿತ ನಿರೂಪಣೆಯ ಮೂಲಕ ಪರಿಚಯಿಸಿಕೊಟ್ಟ ಲೇಖಕಿ ಈಗ ನಮ್ಮ ನಡುವೆ ಇಲ್ಲ. ಈ ಹಿಂದೆ ಮಾಸಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಈ ಲೇಖನಗಳನ್ನು ಅವರ ಪತಿ ಎಚ್.ಎನ್. ಶ್ಯಾಮರಾವ್ ಅವರು ಪ್ರಕಟನೆಗಾಗಿ ಸಿದ್ಧಪಡಿಸಿಕೊಟ್ಟಿದ್ದಾರೆ. ಇದೀಗ ಈ ಬರಹಗಳೆಲ್ಲ ಒಂದು ಸಂಕಲನವಾಗಿ ಹೊರಬರುವುದರೊಂದಿಗೆ ಈ ಸಾಧಕರ ಚಿತ್ರಗಳಿಗೆ ದೀರ್ಘಾಯುಷ್ಯ ಲಭಿಸಿದೆ; ಜೊತೆಗೆ, ಲೇಖಕಿಯ ಆದ್ರì, ಭಾವಗೀತಾತ್ಮಕ ನಿರೂಪಣೆಗೆ ಕೂಡ.
ಪತ್ನಿಯರು ಕಂಡಂತೆ ಪ್ರಸಿದ್ಧರು (ವಿಶೇಷ ವ್ಯಕ್ತಿಚಿತ್ರಗಳು)
ಲೇ.: ಬಿ. ಎಸ್. ವೆಂಕಟಲಕ್ಷ್ಮಿ
ಪ್ರ.: ಅಹರ್ನಿಶಿ ಪ್ರಕಾಶನ, ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ-577203
(ಮೊಬೈಲ್: 9449174662)
ಮೊದಲ ಮುದ್ರಣ: 2018 ಬೆಲೆ : 300 ರೂ.
– ಜಯರಾಮ ಕಾರಂತ