Advertisement

ಆರೋಪಿ ಪತ್ತೆಗೆ ತೆರಳಿದ್ದ ಬಿಹಾರ್ ಎಸ್ ಐ ಬಂಗಾಳದಲ್ಲಿ ಹತ್ಯೆ, ಆಘಾತದಿಂದ ತಾಯಿ ಸಾವು!

12:57 PM Apr 12, 2021 | Team Udayavani |

ಲಕ್ನೋ: ಆರೋಪಿ ಪತ್ತೆಗಾಗಿ ಪಶ್ಚಿಮಬಂಗಾಳದ ಉತ್ತರ್ ದಿನಾಜ್ ಪುರ್ ಗೆ ತೆರಳಿದ್ದ ಬಿಹಾರ ಪೊಲೀಸ್ ಅಧಿಕಾರಿಯನ್ನು ಗುಂಪೊಂದು ಮಾರಣಾಂತಿಕವಾಗಿ ಥಳಿಸಿ ಹತ್ಯೆಗೈದಿದ್ದು, ಮಗನ ದಾರುಣ ಸಾವಿನ ವಿಷಯ ಕೇಳಿ ತಾಯಿಯೂ ಆಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

Advertisement

ಏಪ್ರಿಲ್ 10ರಂದು ಪಶ್ಚಿಮಬಂಗಾಳದ ಉತ್ತರ್ ದಿನಾಜ್ ಪುರ್ ಗ್ರಾಮಕ್ಕೆ ತೆರಳಿದ್ದ ಕಿಶನ್ ಗಂಜ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಅಶ್ವಿನಿ ಕುಮಾರ್ ಅವರನ್ನು ಸ್ಥಳೀಯರು ಥಳಿಸಿ ಹತ್ಯೆಗೈದಿದ್ದರು. ಮಗ ಅಶ್ವಿನಿ ಕುಮಾರ್ ಸಾವಿನ ಸುದ್ದಿ ಕೇಳಿ ತಾಯಿಯೂ ಆಘಾತದಿಂದ ಸಾವನ್ನಪ್ಪಿದ್ದು, ಬಿಹಾರದ ಪುರ್ನಿಯಾ ಜಿಲ್ಲೆಯ ಹುಟ್ಟೂರಿನಲ್ಲಿ ಇಬ್ಬರ ಅಂತ್ಯಕ್ರಿಯೆ ಒಟ್ಟಿಗೆ ನೆರವೇರಿಸಲಾಗಿದೆ ಎಂದು ವರದಿ ವಿವರಿಸಿದೆ.

ಪಿಟಿಐ ವರದಿ ಪ್ರಕಾರ, ಮೋಟಾರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಎಸ್ ಎಚ್ ಒ ಅಶ್ವಿನಿ ಕುಮಾರ್ ಅವರ ಜತೆ ಏಳು ಮಂದಿ ಪೊಲೀಸ್ ಕಾನ್ಸ್ ಟೇಬಲ್ ಪಶ್ಚಿಮಬಂಗಾಳಕ್ಕೆ ತೆರಳುವಂತೆ ಪುರ್ನಿಯಾ ವಲಯ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಸುರೇಶ್ ಚೌಧರಿ ನಿರ್ದೇಶನ ನೀಡಿದ್ದರು. ಆದರೆ ಗುಂಪು ಹಲ್ಲೆ ನಡೆಸುತ್ತಿದ್ದಂತೆಯೇ ಪೊಲೀಸರು ಓಡಿಹೋಗಿದ್ದು, ಕರ್ತವ್ಯಲೋಪ ಎಸಗಿದ ಏಳು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಏನಿದು ಘಟನೆ:

ಮೋಟಾರ್ ಸೈಕಲ್ ಕಳ್ಳತನ ಪ್ರಕರಣದ ಆರೋಪಿಗಳ ಪತ್ತೆಗಾಗಿ ಅಶ್ವಿನಿ ಕುಮಾರ್ ಅವರು ತಮ್ಮ ಸಹೋದ್ಯೋಗಿಗಳ ಜತೆ ಬಂಗಾಳದ ಪಂಜಿಪಾರಾ ಪೊಲೀಸ್ ಠಾಣೆ ಪ್ರದೇಶಕ್ಕೆ ತೆರಳಿದ್ದರು. ನಂತರ ಗೋಲಾಪೋಖಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಪಂಟಪಾಡಾ ಗ್ರಾಮದಲ್ಲಿ ಅಶ್ವಿನಿ ಕುಮಾರ್ ತಂಡ ಮಧ್ಯರಾತ್ರಿ ದಾಳಿ ನಡೆಸಿತ್ತು. ಬಳಿಕ ಉತ್ತರ್ ದಿನಾಜ್ ಪುರ್ ಗ್ರಾಮ ತಲುಪಿದಾಗ ಗ್ರಾಮಸ್ಥರು ಅಶ್ವಿನಿ ಕುಮಾರ್ ಅವರ ಮೇಲೆ ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದರು.

Advertisement

ಗಂಭೀರವಾಗಿ ಗಾಯಗೊಂಡಿದ್ದ ಠಾಣಾಧಿಕಾರಿ ಅಶ್ವಿನಿ ಕುಮಾರ್ ಅವರನ್ನು ಇಸ್ಲಾಮ್ ಪುರ್ ಸದಾರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದಾರಿಮಧ್ಯೆಯೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.

ಬಂಗಾಳದ ಸ್ಥಳೀಯ ಪೊಲೀಸರು ನೆರವು ನೀಡದ ಪರಿಣಾಮದಿಂದಲೇ ಅಶ್ವಿನಿ ಕುಮಾರ್ ಅವರು ಸಾವನ್ನಪ್ಪುವಂತಾಗಿದೆ ಎಂದು ಬಿಹಾರ್ ಪೊಲೀಸ್ ಅಸೋಸಿಯೇಶನ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಆರೋಪಿಸಿದೆ. ಆರೋಪಿಗಳ ಪತ್ತೆಯ ವೇಳೆ ಸ್ಥಳೀಯ ಪೊಲೀಸರು ನೆರವು ನೀಡುವಂತೆ ಅಶ್ವಿನಿ ಕುಮಾರ್ ಅವರು ಬಂಗಾಳ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಅಶ್ವಿನಿ ಕುಮಾರ್ ಮತ್ತು ಸಹೋದ್ಯೋಗಿಗಳು ತೆರಳಿದ ವೇಳೆ ಸ್ಥಳೀಯ ಪೊಲೀಸರ ನೆರವು ದೊರಕಿಲ್ಲವಾಗಿತ್ತು ಎಂದು ಬಿಹಾರ ಪೊಲೀಸ್ ಅಧಿಕಾರಿಗಳು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next