ಪಣಜಿ: ಸಿಯೋಲಿಮ್‌ನ ಚರ್ಚ್‌ನ ಪಾದ್ರಿ ಡೊಮಿನಿಕ್ ಡಿಸೋಜಾ ಅವರನ್ನು ಗೋವಾ ಪೊಲೀಸರು ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್ , ಡೊಮಿನಿಕ್ ಡಿಸೋಜಾ ಅವರ ವಿರುದ್ಧ ಮತಾಂತರದ ಹಲವು ದೂರುಗಳ ನಂತರ ಅವರನ್ನು ಬಂಧಿಸಲಾಯಿತು. ಅವರಿಗೆ ಜಾಮೀನು ಸಿಕ್ಕಿದೆ. ಆದರೆ, ಈ ಚಟುವಟಿಕೆಗಳಲ್ಲಿ ಬಳಸಲಾದ ಅವರ ಮನೆ ಮತ್ತು ಸ್ಥಳಗಳನ್ನು ಸೀಲ್ ಮಾಡಲಾಗಿದೆ. ಇಂತಹ ಕೃತ್ಯವನ್ನು ನಾವು ಸಹಿಸುವುದಿಲ್ಲ ಎಂದರು.
ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಆಮಿಷ ಒಡ್ಡಿದ ಪಾದ್ರಿ ಡೊಮಿನಿಕ್ ಡಿಸೋಜಾ ಮತ್ತು ಪತ್ನಿ ಜೋನ್ ಅವರನ್ನು ಪೊಲೀಸರು ಬಂಧಿಸಿದ್ದರು. ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಕ್ಕಾಗಿ ಇಬ್ಬರ ಮೇಲೆ ಆರೋಪ ಹೊರಿಸಲಾಗಿತ್ತು.
ವರದಿಗಳ ಪ್ರಕಾರ, ಮಾಪುಸಾ ಪೊಲೀಸರು ಹಲವಾರು ಪ್ರತ್ಯೇಕ ದೂರುಗಳನ್ನು ಸ್ವೀಕರಿಸಿದ್ದು, ಪಾದ್ರಿ ಮತ್ತು ಅವರ ಪತ್ನಿ ಜನರಿಗೆ ನಗದು ನೀಡುವ ಮೂಲಕ ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರ ನೀಡುವ ಭರವಸೆ ನೀಡುವ ಮೂಲಕ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಪಣಜಿಯಿಂದ ಸುಮಾರು 20 ಕಿಮೀ ದೂರದಲ್ಲಿರುವ ಉತ್ತರ ಗೋವಾದ ಸಾಲಿಗಾವೊ ಗ್ರಾಮದಿಂದ ಕಾರ್ಯಾಚರಣೆ ನಡೆಸುತ್ತಿದ್ದರು ಎನ್ನಲಾಗಿದೆ.