Advertisement

ಸಂಸ್ಕೃತಿಯ ಪ್ರತೀಕ ಲುಂಗಿ

08:14 AM Sep 28, 2019 | Team Udayavani |

ತುಂಬಾ ಓದಿಕೊಂಡ ಯುವಕನೊಬ್ಬ ವಿದೇಶದಲ್ಲಿ ಕೆಲಸ ಸಿಕ್ಕರೂ ಹೋಗಲ್ಲ. ಅವನಿಗೆ ತನ್ನ ನೆಲದಲ್ಲೇ ಏನಾದರೊಂದು ಸ್ವಂತ ದುಡಿಮೆ ಮಾಡಬೇಕೆಂಬ ಹಂಬಲ. ಹಾಗೆ ಅಂದುಕೊಂಡು ಶುರು ಮಾಡುವ ಉದ್ಯಮ ಬೇರಾವುದೂ ಅಲ್ಲ. ಅದು “ಲುಂಗಿ’

Advertisement

ಹೌದು, ಇದು “ಲುಂಗಿ’ಯ ಒನ್‌ ಲೈನ್‌ ಸ್ಟೋರಿ. ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಚಿತ್ರ. ಯುವಕರನ್ನೇ ಟಾರ್ಗೆಟ್‌ ಮಾಡಿ ಮಾಡಿರುವ ಸಿನಿಮಾ ಇದು. ಒಂದೊಳ್ಳೆಯ ಸಂದೇಶ ಮತ್ತು ಸದುದ್ದೇಶದಿಂದ ಮಾಡಿರುವ “ಲುಂಗಿ’ ಪಕ್ಕಾ ಈಗಿನ ಹುಡುಗರಿಗೆ ಮೀಸಲು. ಹೀಗಂತ ಹೇಳುವ ಚಿತ್ರತಂಡ, ಇನ್ನೇನು ಅಕ್ಟೋಬರ್‌ 11 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ.

“ಲುಂಗಿ’ ಚಿತ್ರ ಸಂಪೂರ್ಣ ಮಂಗಳೂರು ಭಾಗದ ಪ್ರತಿಭೆಗಳು ಸೇರಿ ಮಾಡಿರುವ ಚಿತ್ರ. ಹಾಗಾಗಿಯೇ ಇಲ್ಲಿ ಮಂಗಳೂರು ಭಾಷೆ, ಅಲ್ಲಿನ ಸಂಸ್ಕೃತಿ, ಸೊಗಡು ಮತ್ತು ಸೊಬಗು ಹೇರಳವಾಗಿದೆ. ಹೊಸಬರೇ ಸೇರಿ ಮಾಡಿರುವ “ಲುಂಗಿ’ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಅರ್ಜುನ್‌ ಲೂಯಿಸ್‌ ಮತ್ತು ಅಕ್ಷಿತ್‌ ಶೆಟ್ಟಿ ಸೇರಿ ನಿರ್ದೇಶನ ಮಾಡಿದ್ದಾರೆ. ಈ ಪೈಕಿ ಅರ್ಜುನ್‌ ಲೂಯಿಸ್‌ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ತಮ್ಮ “ಲುಂಗಿ’ ಕುರಿತು ಹೇಳುವ ಅರ್ಜುನ್‌ ಲೂಯಿಸ್‌, “ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಚಿತ್ರ. ಇನ್ನೊಂದು ಮುಖ್ಯ ವಿಷಯವೆಂದರೆ, ಮೇಕ್‌ ಇನ್‌ ಇಂಡಿಯಾ ಎಂಬ ಕಾನ್ಸೆಪ್ಟ್ ಕೂಡ ಚಿತ್ರದ ಹೈಲೈಟ್‌ಗಳಲ್ಲೊಂದು. ಚಿತ್ರದ ಬಗ್ಗೆ ಹೇಳುವುದಾದರೆ, ಈಗಿನ ಜನರೇಷನ್‌ನ ಪ್ರತಿಯೊಬ್ಬರೂ ಡಿಗ್ರಿ ಮೇಲೆ ಡಿಗ್ರಿ ಮಾಡಿಕೊಂಡಿದ್ದಾರೆ. ಅಂಥವರು ಸಾಕಷ್ಟು ಉದ್ಯಮಿಗಳ ಕೆಳಗೆ ದುಡಿಮೆ ಮಾಡುತ್ತಿದ್ದಾರೆ. ಇನ್ನು ಕೆಲವರು ಕೆಲಸ ಅರಸಿ ವಿದೇಶಕ್ಕೂ ಹೋಗಿದ್ದಾರೆ. ಕೆಲಸ ದೊಡ್ಡದೇ ಇರಲಿ, ಚಿಕ್ಕದಾಗಿರಲಿ, ನಿಮ್ಮೂರಲ್ಲೇ ಮಾಡಿ ಎಂಬ ಸಂದೇಶದ ಜೊತೆಗೆ ನಾಡು, ನುಡಿ ಸಂಸ್ಕೃತಿ ಕುರಿತಾಗಿಯೂ ಹೇಳಲಾಗಿದೆ’ ಎಂದು ವಿವರ ಕೊಡುತ್ತಾರೆ ಅರ್ಜುನ್‌ ಲೂಯಿಸ್‌.

ನಿರ್ದೇಶಕ “ಸಿಂಪಲ್‌’ ಸುನಿ ಅವರ “ಚಮಕ್‌’ ಹಾಗು “ಬಜಾರ್‌’ ಚಿತ್ರದಲ್ಲಿ “ಲುಂಗಿ’ ಚಿತ್ರದ ನಿರ್ದೇಶಕ ಅರ್ಜುನ್‌ ಲೂಯಿಸ್‌, ಸಂಕಲನಕಾರ ಮನು, ಅಶ್ವಿ‌ನ್‌ ಕೆಲಸ ಮಾಡಿದ್ದರಂತೆ. ಅವರೆಲ್ಲರೂ ಈಗ “ಲುಂಗಿ’ಯಲ್ಲಿದ್ದಾರೆ. ಮೊದ ಮೊದಲು “ಲುಂಗಿ’ ಶೀರ್ಷಿಕೆ ನೋಡಿದಾಗ, ಯಾರಪ್ಪಾ ಇವರು, ಇಂತಹ ಟೈಟಲ್‌ ಇಟ್ಟಿದ್ದಾರೆ ಅಂತ ಸುನಿಗೆ ಅನಿಸಿತಂತೆ. ಅಷ್ಟೇ ಅಲ್ಲ, “ಬನ್ನಿ ಎತ್ತಿ ತೋರಿಸೋಣ’ ಎಂಬ ಟ್ಯಾಗ್‌ಲೈನ್‌ ಇಟ್ಟಿದ್ದರಂತೆ. ಈಗ “ಪ್ರೀತಿ ಸಂಸ್ಕೃತಿ ಸೌಂದರ್ಯ’ ಎಂಬ ಟ್ಯಾಗ್‌ಲೈನ್‌ ಇದ್ದುದ್ದನ್ನು ಕಂಡ ಸುನಿ, “ಲುಂಗಿ’ ನಮ್ಮ ಸಂಸ್ಕೃತಿಯ ಪ್ರತೀಕವಾಗಲಿ. ಇನ್ನು, ಅರ್ಜುನ್‌ ಒಳ್ಳೆಯ ವ್ಯಕ್ತಿ. ಅವರು ಫೇಸ್‌ಬುಕ್‌ನಲ್ಲಿ ಬರೆಯೋ ಕವನ, ಕವಿತೆ ನೋಡಿಯೇ ನಾನು ಹಾಡು ಬರೆಯಲು ಅವಕಾಶ ಕೊಟ್ಟೆ. ಇಲ್ಲೂ ಅದ್ಭುತ ಸಾಲುಗಳಿರುವ ಹಾಡು ಕೊಟ್ಟಿದ್ದಾರೆ. ಸಿನಿಮಾಗೆ ಒಳ್ಳೆಯದಾಗಲಿ’ ಎಂದರು ಸುನಿ. ಚಿತ್ರಕ್ಕೆ ಮುಖೇಶ್‌ ಹೆಗಡೆ ನಿರ್ಮಾಣವಿದೆ. ಈಗಾಗಲೇ ಚಿತ್ರದ ಹಾಡುಗಳು ಆನಂದ್‌ ಆಡಿಯೋ ಮೂಲಕ ಹೊರಬಂದಿವೆ. ಹಾಡುಗಳಿಗೆ ಒಳ್ಳೆಯ ಮೆಚ್ಚುಗೆಯೂ ಸಿಗುತ್ತಿದೆ. ಸಹಜವಾಗಿಯೇ ಚಿತ್ರತಂಡ ಖುಷಿಯಲ್ಲಿದೆ. ನಾಯಕ ಪ್ರಣವ್‌ ಹೆಗ್ಡೆ ಅವರಿಗೆ ಅಹಲ್ಯಾ ಸುರೇಶ್‌ ಮತ್ತು ರಾಧಿಕಾ ರಾವ್‌ ನಾಯಕಿಯರು. ಇನ್ನುಳಿದಂತೆ ಮಂಗಳೂರಿನ ಬಹುತೇಕ ರಂಗಭೂಮಿ ಕಲಾವಿ­ದರು ನಟಿಸಿದ್ದಾರೆ. ಪ್ರಸಾದ್‌ ಕೆ.ಶೆಟ್ಟಿ ಸಂಗೀತವಿದೆ ರಿಜ್ಜೊ ಪಿ.ಜಾನ್‌ ಛಾಯಾಗ್ರಹಣ ಮಾಡಿದ್ದಾರೆ. ಅ.11 ರಂದು ಜಯಣ್ಣ ಚಿತ್ರ ವಿತರಣೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next