Advertisement

ಚರ್ಮಗಂಟು; ಬಿಡಾಡಿ ದನಗಳಿಗಿಲ್ವೆ ಚಿಕಿತ್ಸೆ?

06:34 PM Nov 22, 2022 | Team Udayavani |

ರಾಯಚೂರು: ಜಾನುವಾರುಗಳಿಗೆ ಚರ್ಮಗಂಟು ರೋಗ ಹಾವಳಿ ಎಲ್ಲೆಡೆ ಹೆಚ್ಚಾಗಿದೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಬಿಡಾಡಿ ದನಗಳು ಕೂಡ ಈ ಕಾಯಿಲೆಗೆ ತುತ್ತಾಗುತ್ತಿರುವುದು ಮತ್ತಷ್ಟು ಆತಂಕಕ್ಕೆಡೆ ಮಾಡಿದೆ.

Advertisement

ಈ ಕಾಯಿಲೆಗೆ ಸೂಕ್ತ ಚಿಕಿತ್ಸೆ ಲಭ್ಯವಿದ್ದು, ಜಾನುವಾರು ಮಾಲೀಕರು ವ್ಯಾಕ್ಸಿನ್‌ ಕೊಡಿಸುತ್ತಿದ್ದಾರೆ. ಆದರೆ, ಬಿಡಾಡಿ ದನಗಳು ಕೂಡ ಈ ಕಾಯಿಲೆಗೆ ತುತ್ತಾಗುತ್ತಿರುವ ಸಂಗತಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ಜಾನುವಾರುಗಳಿಗೆ ಚಿಕಿತ್ಸೆ ಯಾರು ನೀಡಬೇಕೆಂಬ ಪ್ರಶ್ನೆ ಮೂಡಿದೆ. ಇಲಾಖೆ ಸಿಬ್ಬಂದಿ ಎಲ್ಲೆಡೆ ಚಿಕಿತ್ಸೆ ನೀಡುತ್ತಿದ್ದು, ಜಿಲ್ಲೆಯಲ್ಲಿ ಇನ್ನೂ 70 ಸಾವಿರಕ್ಕೂ ಅಧಿಕ ಮಕ್ಕಳಿಗೆ ವ್ಯಾಕ್ಸಿನ್‌ ನೀಡಬೇಕಿದೆ. ಆದರೆ ಜಾನುವಾರು ಮಾಲೀಕರು ಚಿಕಿತ್ಸೆ ಕೊಡಿಸಲು
ಮುಂದಾಗುತ್ತಿದ್ದರೆ, ಬಿಡಾಡಿ ದನಗಳ ಆರೋಗ್ಯ ಕಾಳಜಿ ಮಾಡುವವರಿಲ್ಲದಂತಾಗಿದೆ.

ಇದೊಂದು ಸಾಂಕ್ರಾಮಿಕ ರೋಗವಾಗಿರುವ ಕಾರಣಕ್ಕೂ ಬೇರೆ ಜಾನುವಾರುಗಳಿಗೆ ಸೋಂಕು ಹರಡಿದರೆ ಏನು ಮಾಡೋದು ಎಂಬ ಆತಂಕ ಕಾಡುತ್ತಿದೆ. ಚರ್ಮಗಂಟು ಸೋಂಕು ಕೆಲವೆಡೆ ಚಿಕಿತ್ಸೆ ನೀಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ.

ಮಿತಿ ಮೀರಿದ ಹಾವಳಿ: ನಗರದಲ್ಲಿ ಬಿಡಾಡಿ ದನಗಳ ಹಾವಳಿ ಮಿತಿ ಮೀರಿದೆ. ಯಾವುದೇ ಪ್ರಮುಖ ರಸ್ತೆಗಳಿಗೆ ಹೋದರೂ ರಸ್ತೆ ಅಡ್ಡವಾಗಿ ಹತ್ತಾರು ಜಾನುವಾರು ನಿಂತಿರುವ ದೃಶ್ಯ ಸಾಮಾನ್ಯವಾಗಿರುತ್ತದೆ. ಈ ಹಿಂದಿದ್ದ ಎಸ್‌ಪಿ ವೇದಮೂರ್ತಿಯವರು ಜಾನುವಾರು ಹಿಡಿದು ಕೂಡಿ ಹಾಕಿದ್ದರು. ಮಾಲೀಕರು
ಬಂದು ಬಿಡಿಸಿಕೊಂಡು ಹೋಗುವಂತೆ ಎಚ್ಚರಿಕೆ ಕೊಟ್ಟಿದ್ದರು. ಅಲ್ಲದೇ ದಂಡವನ್ನೂ ವಿ ಧಿಸಿದ್ದರು. ಕೆಲ ದಿನ ಈ ಸಮಸ್ಯೆಗೆ ವಿರಾಮ ಸಿಕ್ಕಿತ್ತು. ಅವರು ವರ್ಗಾವಣೆ ಆಗುತ್ತಿದ್ದಂತೆ ಮತ್ತದೇ ಹಳೇ ಪದ್ಧತಿ ಮುಂದುವರಿದಿದೆ. ಈಗ ಎಲ್ಲ ಕಡೆ ಮತ್ತೆ ಬಿಡಾಡಿ ದನಗಳ ಹಾವಳಿ ಎಂದಿನಂತೆ ಕಾಡುತ್ತಿದೆ. ಅಂಥ ಜಾನುವಾರುಗಳು ಕೂಡ ರೋಗಕ್ಕೆ ತುತ್ತಾಗುತ್ತಿವೆ.

1.70 ಲಕ್ಷ ಜಾನುವಾರುಗಳಿಗೆ ವ್ಯಾಕ್ಸಿನ್‌
ರಾಯಚೂರು ಜಿಲ್ಲೆಯಲ್ಲಿ ಎಮ್ಮೆಗಳನ್ನು ಹೊರತಾಗಿಸಿ ಸುಮಾರು 2.45 ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ. ಅದರಲ್ಲಿ ಈಗ ಸರಿ ಸುಮಾರು 1.70 ಲಕ್ಷ ಜಾನುವಾರುಗಳಿಗೆ ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ ವ್ಯಾಕ್ಸಿನ್‌ ನೀಡಲಾಗಿದೆ. ಹೆಚ್ಚುವರಿ ಲಸಿಕೆಗೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಆದರೆ ಪಶು ಇಲಾಖೆಯಲ್ಲಿ ಶೆ.65 ಸಿಬ್ಬಂದಿ ಕೊರತೆಯಿದ್ದು, ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ನೀಡಲಾಗಿಲ್ಲ. ಜಿಲ್ಲೆಯಲ್ಲಿ ಈವರೆಗೆ ಚರ್ಮಗಂಟು ಕಾಯಿಲೆಯಿಂದ 80
ಜಾನುವಾರು ಸತ್ತಿವೆ ಎಂದು ಗುರುತಿಸಲಾಗಿದೆ. ಆದರೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಈಗಾಗಲೇ ಚರ್ಮಗಂಟು ರೋಗಕ್ಕೆ ಸಾವಿರಾರು ಜಾನುವಾರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

Advertisement

ಚರ್ಮಗಂಟು ಕಾಯಿಲೆ ಕೊರೊನಾ ರೀತಿಯ ಸಾಂಕ್ರಾಮಿಕ ರೋಗವಾಗಿದೆ. ಯಾವ ಜಾನುವಾರು ಸದೃಢವಾಗಿರುವುದೋ ಅವುಗಳಿಗೆ ಏನು ಆಗಲ್ಲ. ದುರ್ಬಲ ಜನುವಾರುಗಳು ಮಾತ್ರ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ವ್ಯಾಕ್ಸಿನ್‌ ನೀಡುವ ಕಾರ್ಯ ನಡೆಯುತ್ತಿದೆ. ಸಿಬ್ಬಂದಿ ಕೊರತೆಯಿಂದ ಎಲ್ಲ ಜಾನುವಾರುಗಳಿಗೆ ಲಸಿಕೆ ನೀಡಲಾಗಿಲ್ಲ. ಬಿಡಾಡಿ ದನಗಳಿಗೆ ಲಸಿಕೆ ನೀಡಬೇಕಾದರೆ ಸ್ಥಳೀಯರ ಸಹಕಾರ ಬೇಕಿದೆ. ನಮ್ಮ ಸಿಬ್ಬಂದಿ ಒಬ್ಬರೇ ಇರುವ ಕಾರಣ ಲಸಿಕೆ ನೀಡಲು ಆಗಲ್ಲ. ಸ್ಥಳೀಯರು ಜಾನುವಾರು ಹಿಡಿದುಕೊಂಡಲ್ಲಿ ವ್ಯಾಕ್ಸಿನ್‌ ನೀಡಲು ಸುಲಭವಾಗಲಿದೆ.
ಡಾ|ಅಶೋಕ ಕೊಲ್ಲಾ, ಉಪನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ರಾಯಚೂರು

ಸಿದ್ಧಯ್ಯಸ್ವಾಮಿ ಕುಕನೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next