ಧಾರವಾಡ: ಸೆಪ್ಟೆಂಬರ್ ತಿಂಗಳಲ್ಲಿ 168 ಗ್ರಾಮಗಳಲ್ಲಿ ಆತಂಕ ಮೂಡಿಸಿದ್ದ ಚರ್ಮ ಗಂಟು ರೋಗವು (ಲಂಪಿ ಸ್ಕಿನ್ ಡಿಸೀಸ್) ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಜಿಲ್ಲೆಯ ಐದು ತಾಲೂಕಿನ 291 ಗ್ರಾಮಗಳ 5168 ಜಾನುವಾರುಗಳಲ್ಲಿ ಪತ್ತೆಯಾಗಿದ್ದು, ಈ ಪೈಕಿ 114 ಎಮ್ಮೆ ಸೇರಿ ಉಳಿದಂತೆ ಆಕಳು, ಎತ್ತು, ಕರುಗಳಲ್ಲಿ ಕಾಣಿಸಿಕೊಂಡಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿನ 168 ಗ್ರಾಮಗಳ 1,789 ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿತ್ತು. ಆಗ ರೋಗ ಹತೋಟಿಗಾಗಿ ಜಿಲ್ಲಾದ್ಯಂತ ಜಾನುವಾರು ಸಂತೆ, ಜಾತ್ರೆ ಹಾಗೂ ಸಾಗಾಟ ನಿಷೇಧಿಸಿ ಸೆ. 28ರಂದು ಜಿಲ್ಲಾಡಳಿತ ಆದೇಶ ಹೊರಡಿಸಿದರೂ ಅಕ್ಟೋಬರ್ ಅಂತ್ಯಕ್ಕೆ ತೀವ್ರಗತಿಯಲ್ಲಿ ರೋಗ ಹರಡಿದೆ. ಆದರೆ ನಿಗದಿತ ಸಮಯಕ್ಕೆ ಜಿಲ್ಲೆಯ ಪಶುಪಾಲನಾಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಲಸಿಕಾ ಅಭಿಯಾನ ಕೈಗೊಂಡಿರುವ ಕಾರಣ ರೋಗ ಬಹುತೇಕ ಹತೋಟಿಗೆ ಬಂದಿದೆ. ಈ ರೋಗದಿಂದ ಈವರೆಗೆ 70 ಎಮ್ಮೆ ಸೇರಿದಂತೆ ಒಟ್ಟು 3443 ಜಾನುವಾರುಗಳು ಚೇತರಿಸಿಕೊಂಡಿದ್ದು, ರೋಗದಿಂದ ಯಾವುದೇ ಜಾನುವಾರು ಮೃತಪಟ್ಟಿಲ್ಲ.
ಇನ್ನೂ ರೋಗದ ನಿಯಂತ್ರಣಕ್ಕೆ 1524 ಎಮ್ಮೆ ಸೇರಿ ಒಟ್ಟು 33,252 ಜಾನುವಾರುಗಳಿಗೆ ಲಸಿಕೆ ಹಾಕಿದ್ದು, ಇನ್ನೂ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಮೇಕೆ ಸಿಡುಬು ರೋಗಕ್ಕೆ ಹಾಕುವ ಲಸಿಕೆ ಪರಿಣಾಮಕಾರಿ ಅನ್ನುವಂತೆ ಮೊದಲ ಹಂತದಲ್ಲಿ ರೋಗ ಹತೋಟಿಗೆ ಬಳಕೆ ಮಾಡಲಾಗಿತ್ತು. ಈಗ ಪರಿಣಾಮಕಾರಿಯಾಗಿರುವಲಸಿಕೆ ಲಭ್ಯತೆಯಿಂದ ಕಾಲುಬೇನೆಯ ಲಸಿಕೆಯ ಜೊತೆಗೆ ಈ ಲಸಿಕೆ ಹಾಕುವ ಕಾರ್ಯ ಸಾಗಿದೆ.
ಕೃಷಿ ಚಟುವಟಿಕೆಗೆ ಹಿನ್ನಡೆ: ಸದ್ಯ ನ.1ರಂದು ಹುಬ್ಬಳ್ಳಿ ತಾಲೂಕಿನ 4 ಗ್ರಾಮಗಳ 31 ಜಾನುವಾರು, ಕುಂದಗೋಳ ತಾಲೂಕಿನ 12 ಗ್ರಾಮಗಳ 71 ಜಾನುವಾರುಗಳಲ್ಲಿ ಅಷ್ಟೇ ರೋಗ ಪತ್ತೆಯಾಗಿದ್ದು, ಬಹುತೇಕ ರೋಗ ಹತೋಟಿಗೆ ಬಂದಂತಾಗಿದೆ. ಹೀಗಾಗಿ ನ. 10ರ ಬಳಿಕ ಜಾನುವಾರು ಸಂತೆ ಆದೇಶ ಹಿಂಪಡೆಯುವ ಲಕ್ಷಣವಿದ್ದು, ಆದರೆ ಈವರೆಗೂ ಅಧಿಕೃತವಾಗಿ ಜಿಲ್ಲಾಡಳಿತ ಹೇಳಿಲ್ಲ.ನಿಷೇಧ ಆದೇಶದನ್ವಯ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಜಾನುವಾರು ಸಂತೆ, ಜಾತ್ರೆ ಹಾಗೂ ಸಾಗಾಟ ನಡೆದಿಲ್ಲ. ಈಗ ನವೆಂಬರ್‌ನಿಂದ ಹಿಂಗಾರಿನ ಕೃಷಿ ಚಟುವಟಿಕೆ ಆರಂಭಗೊಂಡಿದೆ. ಕೃಷಿ ಚಟುವಟಿಕೆಗಳಲ್ಲಿ ಜಾನುವಾರುಗಳ ಪಾತ್ರ ಮುಖ್ಯವಾಗಿದ್ದು, ಅವುಗಳ ಖರೀದಿ, ಸಾಗಾಟಕ್ಕೆ ಈ ಆದೇಶದಿಂದ ತೊಂದರೆ ಉಂಟಾಗಿದೆ. ಹೀಗಾಗಿ ಆದಷ್ಟು ಬೇಗ ಜಾನುವಾರು ಸಂತೆ, ಜಾತ್ರೆ ಹಾಗೂ ಸಾಗಾಟಕ್ಕೆ ಜಿಲ್ಲಾಡಳಿತ ಅನುವು ನೀಡಿದರೆಹಿಂಗಾರಿನ ಕೃಷಿ ಚಟುವಟಿಕೆ ಕಾರ್ಯಗಳಿಗೆ ಪೂರಕ ಅನುಕೂಲ ಆಗಲಿದೆ.
ಚರ್ಮ ಗಂಟು ರೋಗ ಬಹುತೇಕ ಹತೋಟಿಗೆ ಬಂದಿದೆ. ನಿಗದಿತ ಸಮಯಕ್ಕೆ ಆರಂಭಿಸಿರುವ ಲಸಿಕಾ ಕಾರ್ಯದಿಂದ ಜಾನುವಾರುಗಳು ರೋಗದಿಂದ ಚೇತರಿಕೆಕಂಡಿವೆ. ಜಿಲ್ಲೆಗೆ ಬಂದಿದ್ದ 1.40 ಲಕ್ಷ ಲಸಿಕೆ ಹಂಚಿಕೆ ಮಾಡಿದ್ದು, ಶೇ.60 ಲಸಿಕೆ ಹಾಕುವ ಕಾರ್ಯ ಆಗಿದೆ. ಕಾಲುಬೇನೆ ಜೊತೆ ಜೊತೆಗೆ ಈ ರೋಗಕ್ಕೂ ಲಸಿಕೆ ಹಾಕುವ ಕಾರ್ಯ ಸಾಗಿದ್ದು, ರೋಗ ಪತ್ತೆಯಾಗುವ ಸಂಖ್ಯೆ ಸೊನ್ನೆಗೆ ಬಂದ ಬಳಿಕ ಜಾನುವಾರು ಸಂತೆ, ಜಾತ್ರೆ ಹಾಗೂ ಸಾಗಾಟಕ್ಕೆ ಹೇರಿರುವ ನಿಷೇಧ ಹಿಂಪಡೆಯಲಾಗುವುದು
. ಟಿ. ಪರಮೇಶ್ವರ ನಾಯಕ್, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
–ಶಶಿಧರ ಬುದ್ನಿ