ಸುಳ್ಯ : ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು, ಆಲೆಟ್ಟಿ, ಕುಕ್ಕುಜಡ್ಕ, ಕನಕಮಜಲು, ಅಜ್ಜಾವರ ಗ್ರಾಮಗಳ ಒಂದೊಂದು ಜಾನುವಾರುಗಳಲ್ಲಿ ಶಂಕಿತ ಚರ್ಮಗಂಟು ರೋಗ ಪತ್ತೆಯಾಗಿದೆ.
ಈ ಜಾನುವಾರುಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಬಂದ ಬಳಿಕವಷ್ಟೇ ಚರ್ಮ ಗಂಟು ರೋಗವೇ ಎಂದು ಸ್ಪಷ್ಟವಾಗಲಿದೆ. ಸದ್ಯ ಕಂಡು ಬಂದಿರುವ ಪ್ರಕರಣಗಳು ಮೇಲ್ನೋಟಕ್ಕೆ ಚರ್ಮ ಗಂಟು ರೋಗದಂತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಾಗಾಟ ನಿರ್ಬಂಧ
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮುಂದಿನ ಆದೇಶದ ವರೆಗೆ ಜಾನವಾರುಗಳ ಸಾಗಾಟ ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಮತ್ತು ಸಾಕಣೆದಾರರು ಜಾನುವಾರುಗಳನ್ನು ಕಟ್ಟಿ ಹಾಕಿಯೇ ಸಾಕಬೇಕು, ಮೇಯಲು ಬಿಡಬಾರದು ಎಂದು ಪಶು ಸಂಗೋಪನ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಚರ್ಮ ಗಂಟು ರೋಗದ ಕುರಿತು ಸಂಶಯ ಇದ್ದರೆ ತತ್ಕ್ಷಣ ಸುಳ್ಯದ ಪಶುಸಂಗೋಪನ ಇಲಾಖೆಯನ್ನು ಸಂಪರ್ಕಿಸುವಂತೆ ಮಾಹಿತಿ ನೀಡಲಾಗಿದೆ.