ಹೊಸದಿಲ್ಲಿ : ಐದು ದಶಕಗಳ ಕಾಲ ಒಂದೂ ರಜೆಯನ್ನು ತೆಗೆದುಕೊಳ್ಳದೆ ಸಂಸ್ಥೆಯನ್ನು ಮುನ್ನಡೆಸಿದ ಲಾರ್ಸನ್ ಆ್ಯಂಡ್ ಟೋಬ್ರೋ (ಎಲ್ ಆ್ಯಂಡ್ ಟಿ) ಸಮೂಹದ ಕಾರ್ಯನಿರ್ವಾಹಕ ಅಧ್ಯಕ್ಷ ಅನಿಲ್ ಮಣಿಭಾಯಿ ನಾಯಕ್ ಅವರಿಗೆ 19.381 ಕೋಟಿ ರೂ. ಲೀವ್ ಎನ್‌ಕ್ಯಾಶ್‌ಮೆಂಟ್ ಸಿಕ್ಕಿದೆ; ಜತೆಗೆ 55.038 ಕೋಟಿ ರೂ. ಗ್ರಾಚ್ಯುಯಿಟಿ ಹಾಗೂ 1.50 ಕೋಟಿ ರೂ. ಪೆನ್‌ಶನ್ ಸಿಕ್ಕಿದೆ.
ನಾಯಕ್ ಅವರ ಸುದೀರ್ಘ ಅಧಿಕಾರಾವಧಿಯಲ್ಲಿ ಕಂಪೆನಿಯು ಹೊಸ ಎತ್ತರಗಳನ್ನು ಏರಿದೆ; ಸಾಗರೋತ್ತರ ಅಸ್ತಿತ್ವವನ್ನು ತೋರಿದೆ; ನೌಕರ ವರ್ಗದಲ್ಲಿ ಅತೀವವಾದ ಹುಮ್ಮಸ್ಸು , ಕಾರ್ಯ ತತ್ಪರತೆಯನ್ನು ಅವರು ತುಂಬಿದ್ದಾರೆ ಮತ್ತು ಕಂಪೆನಿಯ ಶೇರುದಾರರಿಗೆ ಅತ್ಯಧಿಕ ಮೌಲ್ಯ ದೊರಕುವಂತೆ ಮಾಡಿದ್ದಾರೆ.
ನಾಯಕ್ ಅವರ ಕಾರ್ಯನಿರ್ವಾಹಕ ಅಧ್ಯಕ್ಷ ಪದವು 2017ರ ಸೆ.30ರಂದು ಕೊನೆಗೊಂಡಿತ್ತು. ಅನಂತರ ಅವರನ್ನು ಕಾರ್ಯನಿರ್ವಾಹಕೇತರ ಅಧ್ಯಕ್ಷರನ್ನಾಗಿ 2017ರ ಅಕ್ಟೋಬರ್ 1ರಿಂದ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ನಾಯಕ್ ಅವರಿಗೆ 2009ರಲ್ಲಿ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.