Advertisement

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

05:53 PM Mar 29, 2024 | Team Udayavani |

ವಿಜಯಪುರ : ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪ್ರಹ್ಲಾದ್ ಜೋಶಿ ಬದಲಾಗಿ ಬೇರೆಯವರಿಗೆ ಟಿಕೆಟ್ ನೀಡಬೇಕೆಂಬ ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಲಾರೆ. ಇಂಥ ಹೇಳಿಕೆಗಳು ನನಗೆ ಆಶೀರ್ವಾದ ಇದ್ದಂತೆ ಎಂದು ಧಾರವಾಡ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಮನೆ ದೇವರು ವಿಜಯಪುರದ ತೊರವಿ ನರಸಿಂಹ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಶ್ರೀಗಳ ಹೇಳಿಕೆಗಳು ನನಗೆ ಆಶೀರ್ವಾದವಿದ್ದಂತೆ, ಶ್ರೀಗಳ ಆಶೀರ್ವಾದದಿಂದಲೇ ನಾನು ಚುನಾವಣೆಯಲ್ಲಿ ಗೆಲ್ಲುವೆ. ಇದರ ಹೊರತಾಗಿ ಹೆಚ್ಚೇನೂ ಹೇಳಲಾರೆ ಎಂದರು.

15 ರಂದು ನಾಮಪತ್ರ

ಏ.15 ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದರು. ಚುನಾವಣೆಗೂ ಮುನ್ನ ಹಾಗೂ ಬಳಿಕ ಮಾತ್ರವಲ್ಲ ನಮ್ಮ ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಕುಟುಂಬ ಸಮೇತವಾಗಿ ಮನೆ ದೇವರ ದರ್ಶನ ಪಡೆಯುವುದು ನಮ್ಮ ಕುಟುಂಬದ ಸಂಪ್ರದಾಯ ಎಂದರು.

ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಮಂತ್ರಿ ಆಗಲೇಬೇಕು. ಎನ್‍ಡಿಎ ತಂಡಕ್ಕೆ ಬಹುಮತ ಬೇಕಿದ್ದು, ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾಗಲು ಹೆಚ್ಚಿನ ಎಂಪಿಗಳ ಪಟ್ಟಿಯಲ್ಲಿ ನಾನೂ ಒಬ್ಬನಾಗಿರಬೇಕು ಎಂದರು.

Advertisement

ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ರಮೇಶ ಜಿಗಜಿಣಗಿ ಬಂಜಾರರ ವೋಟ್ ಬೇಕಿಲ್ಲ ಎಂದು ಹೇಳಿರಲು ಸಾಧ್ಯವಿಲ್ಲ. ಹೇಳಿದ್ದರೆ ಸರಿಪಡಿಸಲಾಗುತ್ತದೆ. ಎಲ್ಲ ವರ್ಗದ ಮತಗಳು ನಮಗೆ ಬೇಕು ಎಂದರು.

ವಿಶ್ವಗುರು ಮಾಡುವುದೇ ಮೋದಿ ಗ್ಯಾರಂಟಿ

ದುರ್ಬಲ ಆರ್ಥಿಕತೆಯಿಂದ ಭಾರತವನ್ನು ಮೇಲೆತ್ತಿ, ವಿಶ್ವದ ಐದನೇ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಭಾರತ ರಾರಾಜಿಸುವಂತೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ಮೂಲಕ ವಿಶ್ವದ ಮೂರನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಿ ಭಾರತವನ್ನು ಕೊಂಡೊಯ್ಯುವುದೇ ಮೋದಿ ಗ್ಯಾರಂಟಿ ಎಂದರು.

ಕಾಶ್ಮೀರದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಿದ್ದು, ದೇಶದಲ್ಲಿ ಉಗ್ರವಾದ ನಿಗ್ರಹಕ್ಕೆ ಬರುವಲ್ಲಿ ಪ್ರಧಾನಿ ಮೋದಿ ಅವರ ಆಡಳಿತವೇ ಕಾರಣ. ವಿಕಸಿತ ಭಾರತಕ್ಕಾಗಿ ನರೇಂದ್ರಿ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕು ಎಂಬುದು ದೇಶದನ ಜನರ ಆಶಯ ಎಂದರು.
ಇಂಥ ಸಂದರ್ಭದಲ್ಲಿ ಪಕ್ಷದಲ್ಲಿ ಒಡಕಿನ ಮಾತು, ತಪ್ಪು ತಿಳುವಳಿಗಳು ಬರಬಾರದು. ಎಲ್ಲವನ್ನು ಸರಿ ಮಾಡಿಕೊಂಡು ಹೋಗಬೇಕು. ರಾಜ್ಯದ 28ಕ್ಕೆ 28 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದರು.

ಹತಾಶತನದಿಂದ ಅಮಿತ್ ಶಾ ನಿಂದನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರೌಡಿ ಎಂದು ಟೀಕಿಸಿರುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯ ಭಾಷೆಯಲ್ಲೇ ನಿಮಗೆ ಅರ್ಥವಾಗುತ್ತದೆ. ಹತಾಶರಾಗಿ ಸರ್ಟಿಫಿಕೇಟ್ ಕೊಡುವ ಮಟ್ಟಕ್ಕೆ ಬಾಯಿಗೆ ಬಂದಂತೆ ಏಕ ವಚನದಲ್ಲಿ ಮಾತನಾಡುತ್ತಿದ್ದಾರೆ ಎಂದರು.

ತಮ್ಮ ಎಲ್ಲ ದೋಷಗಳಿಗೂ ಸಿದ್ಧರಾಮಯ್ಯ ಕೇಂದ್ರವನ್ನು ದೂರುವುದೊಂದೆ ಮಾಡುತ್ತಾರೆ. ಇದೀಗ ಅವರ ಮಗ ಸರ್ಟಿಫಿಕೇಟ್ ಕೊಡುವ ಹಂತಕ್ಕೆ ಹೋಗಿದ್ದಾರೆ. ಈ ಚುನವಣೆಯಲ್ಲಿ ಇದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದರು.

ಅಮಿತ್ ಹಾಗೂ ಮೋದಿ ಅವರ ನೇತೃತ್ವದಲ್ಲಿ ನಾವು ಎರಡು ಬಾರಿ ಚುನಾವಣೆಗಳನ್ನ ಗೆದ್ದಿದ್ದೇವೆ. ಕರ್ನಾಟಕದಲ್ಲಿ ಚುನಾವಣೆ ಗೆದ್ದಿದ್ದೇವೆ ಎಂಬ ದುರಹಂಕಾರದಲ್ಲಿ ಮೆರೆಯಬೇಡಿ. ಸಿದ್ದರಾಮಯ್ಯ ಅವರ ಮೈಸೂರು ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಲಕ್ಷ್ಮಣ ಅವರಿಗೆ ಡಿಪಾಸಿಟ್ ಬಂದರೆ ಸಾಕು ಎನ್ನುವಂತಾಗಿದೆ ಎಂದರು.

ದೇಶದಲ್ಲಿ ಇದೀಗ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರವಿದೆ. ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ಅಲುಗಾಡುತ್ತಿದ್ದು, ಸೋಲುವ ಭೀತಿ ಹಾಗೂ ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ ಎಂದರು

ಯತ್ನಾಳ ಜತೆ ಪಯಣ

ಜೋಶಿ ಅವರು ದೇವರ ದರ್ಶನಕ್ಕೆ ಬಂದಾಗ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೇಟಿಯಾಗಿ ಮಾತುಕತೆ ನಡೆಸಿದರು. ದೇವಸ್ಥಾನದ ಆವರಣದಲ್ಲೇ ಭೇಟಿಯಾದ ಯತ್ನಾಳ, ಬಳಿಕ ಜೋಶಿ ಅವರ ಕಾರಿನಲ್ಲೇ ಕುಳಿತು ಇಬ್ಬರೂ ನಾಯಕರು ಖಾಸಗಿ ಹೋಟೆಲಿಗೆ ತೆರಳಿದರು.

ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಾಸಕ ಯತ್ನಾಳ, ಈ ಮುಂಚೆ ಹೇಳಿದ್ದೇನೆ ಪಾರ್ಟಿ ಯಾರನ್ನು ಕ್ಯಾಂಡಿಡೇಟ್ ಮಾಡಿದರೂ ಪಕ್ಷದ ಅಭ್ಯರ್ಥಿ ಪರ ಚುನಾವಣೆ ಮಾಡುತ್ತೇನೆ.ನಮ್ಮದು ಯಾವುದೇ ಬೇಡಿಕೆಯ ಬಂಡಾಯ ಇಲ್ಲ. ವಿಜಯಪುರ ಲೋಕಸಭಾ ಕ್ಷೇತ್ರದ ವಿಚಾರದಲ್ಲಿ ಯಾವುದೇ ಬಂಡಾಯವೂ ಇಲ್ಲ, ಭಿನ್ನಮತವೂ ಇಲ್ಲ. ಎಲ್ಲರೂ ಸೇರಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವುದೇ ಏಕೈಕ ಗುರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next