Advertisement

ಲಂಚಾರೋಪಕ್ಕೆ ಸದನ ಗದ್ದಲ

08:55 AM Aug 05, 2017 | Team Udayavani |

ಕಾಂಗ್ರೆಸ್‌ ಸೇರಿದ 4 ಕೋಟಿ ಹವಾಲಾ: ಕಿರಿಟ್‌ ಸೋಮಯ್ಯ

Advertisement

ಹೊಸದಿಲ್ಲಿ: ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ಕಾರಣವು ಕಲಾಪವನ್ನು ಗದ್ದಲದಲ್ಲೇ ಕೊಚ್ಚಿಹೋಗುವಂತೆ ಮಾಡಿದೆ. ಶುಕ್ರವಾರ ಬಿಜೆಪಿ ಸಂಸದ ಕಿರಿಟ್‌ ಸೋಮಯ್ಯ ಅವರು ನೀಡಿರುವ ಒಂದು ಹೇಳಿಕೆಯು ಇಡೀ ಕಲಾಪವನ್ನೇ ನುಂಗಿ ಹಾಕಿತು. ಪ್ರತಿಪಕ್ಷಗಳ ಗದ್ದಲ ಮಿತಿಮೀರಿದ ಹಿನ್ನೆಲೆಯಲ್ಲಿ ಕಲಾಪವು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು.

ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ, ಬಿಜೆಪಿ ಸಂಸದ ಕಿರಿಟ್‌ ಸೋಮಯ್ಯ ಅವರು ಮಾತನಾಡಿ, ಕಾಂಗ್ರೆಸ್‌ ವಿರುದ್ಧ ಗಂಭೀರ ಆರೋಪವನ್ನು ಮಾಡಿದರು. ‘ಹವಾಲಾ ಆಪರೇಟರ್‌ವೊಬ್ಬ ಪಾವತಿಸಿದ 4 ಕೋಟಿ ರೂ.ಗಳು ಕಾಂಗ್ರೆಸ್‌ನ ಕೈ ಸೇರಿದೆ,’ ಎನ್ನುವ ಮೂಲಕ ಕಾಂಗ್ರೆಸ್‌ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದರು. ಈ ಮಾತು ಹೊರಬೀಳುತ್ತಿದ್ದಂತೆಯೇ ಸದನದಲ್ಲಿ ಕೋಲಾಹಲ ಆರಂಭವಾಯಿತು. ಪ್ರತಿಪಕ್ಷಗಳ ಗದ್ದಲ, ಘೋಷಣೆ, ಪ್ರತಿಭಟನೆಯ ನಡುವೆ ಕಿರಿಟ್‌ ಸೋಮಯ್ಯ ಅವರ ಮುಂದಿನ ಮಾತುಗಳು ಕೇಳಲೇ ಇಲ್ಲ. ಗದ್ದಲ ನಿಯಂತ್ರಣಕ್ಕೆ ಸಿಗದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಬೇಕಾಯಿತು.

ವಿಧೇಯಕ ಆಯ್ಕೆ ಸಮಿತಿಗೆ: ಈ ನಡುವೆ, ಸಾರಿಗೆ ವಲಯದಲ್ಲಿ ಸುಧಾರಣೆಗೆ ಕಾರಣವಾಗುತ್ತದೆ ಎನ್ನಲಾದ ಮೋಟಾರು ವಾಹನ ವಿಧೇಯಕವನ್ನು ರಾಜ್ಯ ಸಭೆಯ ಆಯ್ಕೆ ಸಮಿತಿಗೆ ಕಳುಹಿಸಲು ಎಲ್ಲ ಪಕ್ಷಗಳು ನಿರ್ಧರಿಸಿವೆ ಎಂದು ಸಚಿವ ಗಡ್ಕರಿ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ 4 ತಿಂಗಳಲ್ಲಿ 855 ರೈತರ ಆತ್ಮಹತ್ಯೆ: ಪ್ರಸಕ್ತ ವರ್ಷ ಮಹಾರಾಷ್ಟ್ರದಲ್ಲಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ 855 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದರಲ್ಲಿ ಸ್ವಲ್ಪಮಟ್ಟಿನ ಇಳಿಕೆ ಕಂಡುಬಂದಿದೆ ಎಂದು ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಸರ್ಕಾರ ರೈತರ ಕಲ್ಯಾಣ, ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತಿದೆ ಎಂದೂ ಹೇಳಿದ್ದಾರೆ.

Advertisement

ಸುಷ್ಮಾ ವಿರುದ್ಧ ಹಕ್ಕುಚ್ಯುತಿ ನಿರ್ಣಯ
ಭಾರತದ ವಿದೇಶಾಂಗ ನೀತಿ ಹಾಗೂ ಪಾಲುದಾರ ರಾಷ್ಟ್ರಗಳೊಂದಿಗಿನ ಸಂಬಂಧ ಕುರಿತ ಚರ್ಚೆಯಲ್ಲಿ ಉತ್ತರಿಸುವ ವೇಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಸದನದ ಹಾದಿತಪ್ಪಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಶುಕ್ರವಾರ ಸುಷ್ಮಾ ವಿರುದ್ಧ ಹಕ್ಕುಚ್ಯುತಿ ನಿರ್ಣಯಕ್ಕೆ ನೋಟಿಸ್‌ ನೀಡಿದೆ. ಗುರುವಾರ ಸದನದಲ್ಲಿ ಮಾತನಾಡುತ್ತಾ ಸುಷ್ಮಾ ಅವರು, ‘ಬಾಂಗ್‌ದಂಗ್‌ ಸಮಾವೇಶದಲ್ಲಿ ಭಾರತದ ಯಾವುದೇ ಪ್ರತಿನಿಧಿಗೆ ಮಾತನಾಡಲು ಅವಕಾಶ ಕೊಟ್ಟಿರಲಿಲ್ಲ,’ ಎಂದು ಹೇಳಿದ್ದರು. ಆದರೆ, ಅಂದು ವಿದೇಶಾಂಗ ಇಲಾಖೆ ಸಹಾಯಕ ಸಚಿವ ವಿ.ಕೆ.ಸಿಂಗ್‌ ಅವರು ಭಾಷಣ ಮಾಡಿದ್ದರು ಎಂದು ಕಾಂಗ್ರೆಸ್‌ ವಾದಿಸಿತ್ತಾದರೂ, ಅದನ್ನು ಸುಷ್ಮಾ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ, ಹಕ್ಕುಚ್ಯುತಿಗೆ ನೋಟಿಸ್‌ ನೀಡಿರುವ ಕಾಂಗ್ರೆಸ್‌, ‘ಸುಷ್ಮಾ ಅವರು ಸುಳ್ಳು ಮಾಹಿತಿ ನೀಡುವ ಮೂಲಕ ಸದನದ ಹಾದಿ ತಪ್ಪಿಸಿದ್ದಾರೆ’ ಎಂದು ಆರೋಪಿಸಿದೆ.

ರಾಜ್ಯಸಭೆಯಲ್ಲಿ ಮುಘಲ್‌ಸರಾಯಿ ಸದ್ದು
ಉತ್ತರಪ್ರದೇಶದ ಐತಿಹಾಸಿಕ ಮುಘಲ್‌ಸರಾಯಿ ರೈಲು ನಿಲ್ದಾಣದ ಹೆಸರನ್ನು ಬದಲಿಸಿ, ಅದಕ್ಕೆ ದೀನ್‌ ದಯಾಳ್‌ ಉಪಾಧ್ಯಾಯ್‌ ನಾಮಕರಣ ಮಾಡುವುದಕ್ಕೆ ಎಸ್ಪಿ ಹಾಗೂ ಬಿಎಸ್‌ಪಿ ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದೇ ವಿಚಾರವಾಗಿ ಶುಕ್ರವಾರ ರಾಜ್ಯಸಭೆಯಲ್ಲಿ ಎರಡೂ ಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೂ ಸ್ವಲ್ಪ ಹೊತ್ತಿಗೆ ಮುಂಚೆ, ಮುಘಲ್‌ಸರಾಯಿ ಹೆಸರನ್ನು ದೀನ್‌ ದಯಾಳ್‌ ಉಪಾಧ್ಯಾಯ ರೈಲು ನಿಲ್ದಾಣ ಎಂದು ಬದಲಿಸುವ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಗೆ ನೀಡಿತ್ತು. 

ತಮ್ಮದೇ ಪಕ್ಷದ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದರೂ ಬಿಜೆಪಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಸಿಬಿಐ, ಇ.ಡಿ. ಐಟಿ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು, ಪ್ರತಿಪಕ್ಷಗಳ ನಾಯಕರು ಭ್ರಷ್ಟರು ಎಂದು ತೋರಿಸಲು ಯತ್ನಿಸುತ್ತಿದೆ. ಇದೇನೂ ಮೋದಿ ಅವರ ಭ್ರಷ್ಟಾಚಾರ ವಿರೋಧಿ ನೀತಿ?
– ಮಾಯಾವತಿ, ಬಿಎಸ್ಪಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next