ಹೊಸದಿಲ್ಲಿ : ಅಂತಾರಾಷ್ಟ್ರೀಯ ದರಗಳು ಏರಿರುವ ಹೊರತಾಗಿಯೂ ಸರಕಾರ ಎಲ್‌ಪಿಜಿ ದರವನ್ನು ಏರಿಸದಿರುವ ಕಾರಣ ಕಳೆದ ಎರಡು ತಿಂಗಳಲ್ಲಿ ಗ್ರಾಹಕರಿಗೆ ಪಾವತಿಯಾಗಿರುವ ಎಲ್‌ಪಿಜಿ ಸಹಾಯಧನದಲ್ಲಿ ಶೇ.60ರಷ್ಟು ಹೆಚ್ಚಳವಾಗಿದೆ ಎಂದು ಐಓಸಿ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.
ಎಲ್‌ಪಿಜಿ ಗ್ರಾಹಕರಿಗೆ ಸರಕಾರ ವರ್ಷಕ್ಕೆ 14.2 ಕೆಜಿ ತೂಕದ, ಮನೆ ಬಳಕೆಯ, 12 ಸಬ್ಸಿಡಿ ಸಿಲಿಂಡರ್‌ಗಳನ್ನು ಪೂರೈಸುತ್ತದೆ ಮತ್ತು ಇದರ ಸಹಾಯಧನದ ಹಣವನ್ನು ನೇರವಾಗಿ ಗ್ರಾಹಕರ ಖಾತೆಗೆ ಜಮೆ ಮಾಡುತ್ತದೆ. 12 ಮೀರಿದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಜನರು ಮಾರುಕಟ್ಟೆ ದರದಲ್ಲೇ ಖರೀದಿಸಬೇಕಾಗುತ್ತದೆ.
ಎಲ್‌ಪಿಜಿ ಗ್ರಾಹಕರ ಖಾತೆಗೆ ಕಳೆದ ಮೇ ತಿಂಗಳಲ್ಲಿ ಜಮೆಯಾದ ಸಹಾಯಧನದ ತಲಾ ಮೊತ್ತ 159.29. ಜೂನ್ ತಿಂಗಳಲ್ಲಿ ಇದು 204.95 ರೂ ಆಗಿದೆ ಮತ್ತು ಈ ಜುಲೈ ತಿಂಗಳಲ್ಲಿ ಅದು 257.74 ರೂ. ಆಗಿದೆ ಎಂದು ಸಿಂಗ್ ಹೇಳಿದರು.
ಗ್ರಾಹಕರಿಗೆ ನೆರವಾಗುವ ನಿಟ್ಟಿನಲ್ಲಿ ಸಹಾಯಧನದ ಎಲ್‌ಪಿಜಿ ದರ ಏರಿಕೆಯನ್ನು ಸರಕಾರ ತಡೆದಿರುವ ಕಾರಣ ಹೆಚ್ಚು ಸಬ್ಸಿಡಿ ಪಾವತಿ ಅನಿವಾರ್ಯವಾಗಿದೆ ಎಂದು ಸಿಂಗ್ ಹೇಳಿದರು.
ಕಳೆದ ಜೂನ್‌ನಿಂದ ಅಂತಾರಾಷ್ಟ್ರೀಯ ಎಲ್‌ಪಿಜಿ ದರ ಏರುತ್ತಲೇ ಇದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕಳೆದ ಮೇ ತಿಂಗಳಲ್ಲಿ ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 653.50 ಇತ್ತು. ಜೂನ್‌ನಲ್ಲಿ ಅದು 698.50 ರೂ.ಗೆ ಏರಿದೆ. ಈ ತಿಂಗಳಲ್ಲಿ ಅದು ಮತ್ತು 55.50 ರೂ. ಏರಿ 754 ರೂ.ಗೆ ತಲುಪಿದೆ.