Advertisement

ನಿಮ್ಮ ಧಾವಂತಕ್ಕೆ ಕಾಡು ಪ್ರಾಣಿಗಳು ಬಲಿಯಾಗದಿರಲಿ

12:15 AM Dec 15, 2022 | Team Udayavani |

ಹೆದ್ದಾರಿಗಳಲ್ಲಿ ವಾಹನಗಳಿಗೆ ಸಿಲುಕಿ ಸಣ್ಣಪುಟ್ಟ ಪ್ರಾಣಿಗಳು ಬಲಿಯಾಗುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಿಯಂತಾಗಿದೆ. ಆದರೆ ಆನೆಯಂಥ ಬೃಹತ್‌ ಪ್ರಾಣಿಯೂ ವಾಹನಗಳಿಗೆ ಸಿಲುಕಿ ಸಾವನ್ನಪ್ಪುವುದು ಎಂದರೆ ವ್ಯವಸ್ಥೆಯಲ್ಲಿ ಎಲ್ಲೋ ಒಂದು ಕಡೆ ಲೋಪವಾಗಿದೆ ಎಂದೇ ಅರ್ಥ.

Advertisement

ಇತ್ತೀಚೆಗಷ್ಟೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಢಿಕ್ಕಿಯಾಗಿ ಚಿರತೆಯೊಂದು ಮೃತಪಟ್ಟಿತ್ತು. ಮಂಗಳವಾರ ರಾತ್ರಿ ಬಂಡಿಪುರ ಹುಲಿ ಅಭಯಾರಣ್ಯದಲ್ಲಿಯೇ ಲಾರಿ ಢಿಕ್ಕಿ ಹೊಡೆದು ಆನೆ ಮೃತಪಟ್ಟಿದೆ. ಇಪ್ಪತ್ತು ವರ್ಷಗಳ ಹಿಂದೆ ಬಂಡೀಪುರ ವ್ಯಾಪ್ತಿಯಲ್ಲಿಯೇ ಬಸ್‌ ಢಿಕ್ಕಿಯಾಗಿ ಆನೆ ಮರಿಯೊಂದು ಸಾವನ್ನಪ್ಪಿತ್ತು. ಬಳಿಕ 2018ರಲ್ಲಿ  ಹುಣಸೂರು-ವಿರಾಜಪೇಟೆ ಹೆದ್ದಾರಿ ಬಳಿಯಿರುವ ಮತ್ತಿಗೋಡು ಸಾಕಾನೆ ಶಿಬಿರದ ರಂಗ ಎಂಬ ಸಾಕಾನೆ ಖಾಸಗಿ ಬಸ್‌ಗೆ ಸಿಲುಕಿಮೃತಪಟ್ಟಿತ್ತು. ಈ ಎರಡು ಘಟನೆಗಳನ್ನು ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಇಂಥ ಘಟನೆ ನಡೆದಿರುವ ಉದಾಹರಣೆಯೇ ಇಲ್ಲ.

ಈಶಾನ್ಯ ರಾಜ್ಯಗಳಲ್ಲಿ ರೈಲು ಢಿಕ್ಕಿಯಾಗಿ ಆನೆಗಳನ್ನು ಸಾವನ್ನಪ್ಪಿರುವುದನ್ನು ನಾವು ಕೇಳಿದ್ದೇವೆೆ. ಆದರೆ ವಾಹನಗಳಿಗೆ ಸಿಲುಕಿ ಆನೆ ಸಾವನ್ನಪ್ಪಿದ ವಿಚಾರ ಕೇಳಿದ್ದು ಕಡಿಮೆ. ಅದರಲ್ಲೂ ಆನೆಯಂಥ ಪ್ರಾಣಿ ಸಾವನ್ನಪ್ಪುವುದು ಎಂದರೆ ದೊಡ್ಡ ನಷ್ಟವೇ ಸರಿ.

ಈಗಿರುವ ಕಾನೂನಿನ ಪ್ರಕಾರ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯದಲ್ಲಿ ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ಯಾವುದೇ ವಾಹನ­ಗಳಿಗೆ ಪ್ರವೇಶವಿಲ್ಲ. ಕಾಡು ಪ್ರಾಣಿಗಳ ಹಿತದೃಷ್ಟಿಯಿಂದ ಮಾಡಲಾಗಿರುವ ಈ ನಿಯಮವೇ ಕೆಲವೊಮ್ಮೆ ಪ್ರಾಣಿಗಳ ಪ್ರಾಣಕ್ಕೂ ಎರವಾಗುತ್ತದೆ ಎಂಬುದೂ ಕೆಲವೊಮ್ಮೆ ಸಾಬೀತಾಗುತ್ತದೆ. ಈಗ ಆನೆಯ ಸಾವಿಗೂ ಇದೇ ಕಾರಣ ಎಂದು ಅಂದಾಜಿಸಲಾಗುತ್ತಿದೆ. ರಾತ್ರಿ 9 ಗಂಟೆ ಮೀರುವ ಮುನ್ನ ಕಾಡು ದಾಟಬೇಕು ಎಂಬ ಧಾವಂತದಲ್ಲಿ ಲಾರಿ ಚಾಲಕ ವೇಗವಾಗಿ ಹೋಗಿ ಆನೆಗೆ ಢಿಕ್ಕಿ ಹೊಡೆದಿರುವ ಸಂಭವವೇ ಹೆಚ್ಚಾಗಿದೆ. ಈ ಢಿಕ್ಕಿಯ ರಭಸಕ್ಕೆ 35 ವರ್ಷದ ಹೆಣ್ಣಾನೆಯೇ ಸಾವನ್ನಪ್ಪಿದೆ.

ಹುಲಿ ಸಂರಕ್ಷಿತಾರಣ್ಯದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಪ್ರವೇಶ ಪಡೆದ (ಚೆಕ್‌ಪೋಸ್ಟ್‌) ಸಮಯದಿಂದ ಹಿಡಿದು ನಿರ್ಗಮನದ ಚೆಕ್‌ಪೋಸ್ಟ್‌ವರೆಗೆ ನಿಗದಿಪಡಿಸಿರುವ ಸಮಯವನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಈಗಿರುವ 20 ನಿಮಿಷದ ಅವಧಿಯನ್ನು 30 ನಿಮಿಷಕ್ಕೆ ಏರಿಸಿದರೆ ಚಾಲಕರು ನಿಧಾನವಾಗಿ ಯಾವುದೇ ಧಾವಂತವಿಲ್ಲದೆ ಅರಣ್ಯ ಪ್ರದೇಶದಿಂದ ನಿರ್ಗಮಿಸಲು ಸಾಧ್ಯವಾಗಲಿದೆ ಎಂಬುದು ವನ್ಯಜೀವಿ ತಜ್ಞರ ಅಭಿಪ್ರಾಯವಾಗಿದೆ.

Advertisement

ಅಂದರೆ ಅಭಯಾರಣ್ಯಗಳಲ್ಲಿ ಹಾದು ಹೋಗಿರುವ ಹೆದ್ದಾರಿ ಮತ್ತು ರಸ್ತೆಗಳಲ್ಲಿ ಕೆಲವು ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುವುದರಿಂದ ಪ್ರತೀ 200 ಮೀಟರ್‌ಗೆ ಒಂದರಂತೆ ಸ್ಪೀಡ್‌ ಬ್ರೇಕ್‌ ನಿರ್ಮಾಣ ಮಾಡಬೇಕಿದೆ. ಜತೆಗೆ ರಸ್ತೆಯ ಇಕ್ಕೆಲಗಳಲ್ಲಿ ಪ್ರಾಣಿಗಳು ರಸ್ತೆ ದಾಟುವ ಬಗ್ಗೆ ಮಾಹಿತಿ ಇರುವ ಎಚ್ಚರಿಕೆ ಫ‌ಲಕ ಹಾಕಬೇಕು ಎಂಬುದು ತಜ್ಞರ ಸಲಹೆಯಾಗಿದೆ.

ಇಂಥ ಘಟನೆಗಳು ಆತಂಕ ಸೃಷ್ಟಿಸಿರುವ ಹೊತ್ತಿನಲ್ಲೇ ಕೇರಳ ಸರಕಾರ ಹೆದ್ದಾರಿಗಳ ರಾತ್ರಿ ನಿರ್ಬಂಧದ ತೆರವಿಗೆ ಒತ್ತಡ ಹೇರುತ್ತಲೇ ಇದೆ. ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌ ಇದೇ ವಿಚಾರವನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರಲ್ಲಿ ಪ್ರಸ್ತಾವಿಸಿದ್ದರು. ಆದರೆ ಇದಕ್ಕೆ ರಾಜ್ಯ ಸೊಪ್ಪು ಹಾಕಿಲ್ಲ ಎಂಬುದು ಉತ್ತಮ ವಿಚಾರ.

Advertisement

Udayavani is now on Telegram. Click here to join our channel and stay updated with the latest news.

Next