ದೇಶದಲ್ಲಿ ಚುನಾವಣೆಗೆ ಸ್ಪರ್ಧಿಸುವವರ ವಯೋಮಿತಿಯನ್ನು 25ರಿಂದ 18ಕ್ಕೆ ಇಳಿಸಬೇಕೆಂದು ಈಚೆಗೆ ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ. ಇದರ ಸಾಧಕ-ಬಾಧಕಗಳೇನು? ಈ ಬಗ್ಗೆ ಚಾವಡಿಯಲ್ಲೊಂದು ಚರ್ಚೆ.
ಸಂಸದೀಯ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸುವ ವಯಸ್ಸಿನ ಮಿತಿಯನ್ನು 25 ರಿಂದ 18ಕ್ಕೆ ಇಳಿಸಬೇಕು ಎಂದು ಶಿಫಾರಸು ಮಾಡಿರು ವುದು ಅಷ್ಟೊಂದು ಸೂಕ್ತವಾದ ನಿರ್ಧಾರವಲ್ಲ. ಕೆನಡಾ, ಯುಕೆ, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಲ್ಲಿನ ವಯೋಮಿತಿಯನ್ನು ಗಮನಿಸಿ ಈ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ. ಆದರೆ ಆ ದೇಶಗಳ ಯುವಜನತೆಗೂ ನಮ್ಮ ದೇಶದ ಯುವಜನತೆಗೂ ಅಜಗಜಾಂತರವಿದೆ.
ಅಲ್ಲಿ ಹದಿಹರೆ ಯದಲ್ಲೇ ಮಕ್ಕಳು ಕಲಿಕೆಯ ಜತೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಸಂಪಾದನೆ ಮಾಡುತ್ತಾರೆ. ಅಲ್ಲಿನ ಯುವ ಜನರಲ್ಲಿ ಸ್ವಾವಲಂಬನೆ ಇದೆ. ಶ್ರಮ ಗೌರವವಿದೆ. ತಮ್ಮ ಹೆತ್ತವರ ಪ್ರತಿಷ್ಠೆ, ಸ್ಥಾನಮಾನಗಳ ಗತ್ತಿನಲ್ಲಿ ತಾವು ತಿರುಗಾಡದೇ, ತಮ್ಮದೇ ಅಸ್ತಿತ್ವ ಕಂಡು ಕೊಳ್ಳಲು, ತಮ್ಮ ಕಾಲ ಮೇಲೆ ನಿಲ್ಲಲು ಅವರು ಕಲಿತಿರುತ್ತಾರೆ. ನಮ್ಮ ದೇಶದ ಸದ್ಯದ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಸ್ವಂತ ಕಾಲ ಮೇಲೆ ನಿಲ್ಲುವುದು ಹೆಚ್ಚು ಕಮ್ಮಿ 25 ವರ್ಷದ ಬಳಿಕವೇ. 18 ವರ್ಷ ಪ್ರಾಯ ದಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಅಭ್ಯರ್ಥಿಯ ಪರಿಚಯವೇ ಬಹಳ ಜನರಿಗೆ ಇರುವುದಿಲ್ಲ. ಆತ ಗೆಲ್ಲುವ ಸಾಧ್ಯತೆಯೂ ಬಹಳ ಕಡಿಮೆ.
ಒಬ್ಬ ವ್ಯಕ್ತಿಯನ್ನು ಜನ ಗುರುತಿಸಿ ಮತ ಹಾಕಬೇಕಾದರೆ ಯಾವುದಾದರೂ ರೀತಿಯ ಸಮಾಜ ಸೇವೆ ಅಥವಾ ಇತರ ಕ್ಷೇತ್ರಗಳಲ್ಲಿ ಅವನು ಗುರುತಿಸಲ್ಪಟ್ಟಿರಬೇಕು. 18 ವರ್ಷ ಪ್ರಾಯದಲ್ಲಿ ವ್ಯಕ್ತಿಗೆ ಸ್ವಂತವಾದುದೊಂದು ಐಡೆಂಟಿಟಿ ಇರುವ ಸಾಧ್ಯತೆ ಬಹಳ ಕಡಿಮೆ. 18 ವರ್ಷದಿಂದಲೇ ಅಥವಾ ಅದಕ್ಕೂ ಮೊದಲು ಬಿಡುವಿನ ವೇಳೆಯಲ್ಲಿ ರಾಜಕೀಯವನ್ನು ಕಂಡು ಕೇಳಿ ಅವರು ಬೆಳೆಯಲಿ ಆದರೆ ಸ್ವಾವಲಂಬನೆ ಪಡೆದು ನಾಲ್ಕು ಜನರಿಂದ ಗುರುತಿಸಲ್ಪಡಲು ಸಾಧ್ಯವಾದಾಗ ಅಂದರೆ 25 ವರ್ಷ ತುಂಬಿದ ಅನಂತರವಷ್ಟೇ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಅವರಿಗೆ ನೀಡುವುದು ಒಳಿತು. ದೈಹಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆಗಳು ಇನ್ನೂ ಪೂರ್ಣ ವಾಗಿಲ್ಲದ ಚಂಚಲ ಪ್ರಕೃ ತಿಯ, ಪ್ರೀತಿ ಪ್ರೇಮಗಳ ಹಿಂದೆ ಬೀಳುವ, ದುಡುಕುತನ ತುಂಬಿದ 18 ವರ್ಷ ಪ್ರಾಯ ಚುನಾವಣೆಗೆ ಸ್ಪರ್ಧಿಸಲು ಖಂಡಿತಾ ಸೂಕ್ತವಲ್ಲ.
ನಮ್ಮ ದೇಶದ ರಾಜಕೀಯಕ್ಕೆ ಖಂಡಿತವಾಗಿಯೂ ಯುವಕರು ಬೇಕು. ಆದರೆ ಅವರು ಪ್ರಬುದ್ಧರಾದ ಉನ್ನತ ಶಿಕ್ಷಣ ಪಡೆದ ಯುವಕರಾಗಿದ್ದಾಗ ಮಾತ್ರ ಉತ್ತಮ ಆಡಳಿ ತವನ್ನು ನಿರೀಕ್ಷಿಸಲು ಸಾಧ್ಯ. ಹಿರಿಯರ ಅನುಭವ ಸಂಪತ್ತನ್ನಂತೂ ನಾವು ಅಲ್ಲಗಳೆಯುವಂತೆಯೇ ಇಲ್ಲ. ಹಾಗೆಯೇ ಚುನಾವಣೆಗೆ ಸ್ಪರ್ಧಿಸಲು ಒಂದು ಗರಿಷ್ಠ ಪ್ರಾಯಮಿತಿಯನ್ನು ನಿಗದಿಪಡಿಸುವುದೂ ಉಳಿತು. ಗರಿಷ್ಠ ಎಂದರೆ 65 ರಿಂದ 70ರ ಒಳಗೆ ರಾಜಕೀಯಕ್ಕೂ ಒಂದು ನಿವೃತ್ತಿ ವಯಸ್ಸನ್ನು ನಿಗದಿ ಪಡಿಸುವುದು ಒಳಿತು. ಆಗ ಯುವಕರ ಪ್ರಾತಿನಿಧ್ಯ ಹೆಚ್ಚಿಸಬಹುದು. ಹಾಗೆಯೇ ಗರಿಷ್ಠ ಐದು ಬಾರಿ ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ನಿಯಮವನ್ನು ತರಬೇಕು.
ಜೆಸ್ಸಿ ಪಿ.ವಿ., ಪುತ್ತೂರು