Advertisement

ಮಾರ್ಚ್‌ಗೆ ಕೆಳ ಸೇತುವೆ ಸಂಚಾರಕ್ಕೆ ಮುಕ್ತ

03:13 PM Nov 27, 2022 | Team Udayavani |

ಪುತ್ತೂರು: ಎಪಿಎಂಸಿ ಸಂಪರ್ಕ ರಸ್ತೆಯಲ್ಲಿನ ಸಾಲ್ಮರ ರೈಲ್ವೇ ಲೆವೆಲ್‌ ಕ್ರಾಸಿಂಗ್‌ನಲ್ಲಿ ಕೆಳ ಸೇತುವೆ ನಿರ್ಮಾಣ ಕಾಮಗಾರಿಯು ಸುಮಾರು ಶೇ. 35 ರಷ್ಟು ಪೂರ್ಣಗೊಂಡಿದ್ದು 2023ರ ಮಾರ್ಚ್‌ ಮೊದಲ ವಾರದಲ್ಲಿ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

Advertisement

ಉಭಯ ದಿಕ್ಕಿನಲ್ಲಿ ಕಾಮಗಾರಿಯು ವೇಗ ಪಡೆದಿದ್ದು ಸೇತುವೆ ನಿರ್ಮಾಣ ಹಾಗೂ ಸಂಪರ್ಕ ರಸ್ತೆ ಕಾಮಗಾರಿಯು ಚುರುಕಾಗಿ ಸಾಗುತ್ತಿದೆ. ರೈಲ್ವೇ ಇಲಾಖೆ ನೇತೃತ್ವದಲ್ಲಿ ಕಾಮಗಾರಿ ಸಾಗುತ್ತಿದೆ.

ತಾತ್ಕಾಲಿಕ ಹಳಿ ಜೋಡಣೆ

ಅಂಡರ್‌ಪಾಸ್‌ ನಿರ್ಮಾಣಕ್ಕೆ ಸಂಬಂಧಿಸಿ ಭೂ ಸಮತಟ್ಟು, ಸಂಪರ್ಕ ರಸ್ತೆ ನಿರ್ಮಾಣಗೊಂಡ ಬಳಿಕ ಹಳೆಯ ಹಳಿಯನ್ನು ತೆಗೆದು ತಾತ್ಕಾಲಿಕ ಹಳಿ ನಿರ್ಮಿಸಿಲಾಯಿತು. ಹಳಿ ಜೋಡಣೆಗೆ ಸುಮಾರು 12 ತಾಸು ನಿರಂತರವಾಗಿ ಕಾಮಗಾರಿ ನಡೆಯಿತು. ಉಭಯ ಧಿಕ್ಕಿನಲ್ಲಿ ದ್ವಿಪಥ ರಸ್ತೆ ನಿರ್ಮಾಣ ಭರದಿಂದ ಆಗುತ್ತಿದ್ದು ಇಕ್ಕೆಡೆಗಳಲ್ಲಿ ಕಾಂಕ್ರೀಟ್‌ ಸ್ಲ್ಯಾಬ್‌ಗಳನ್ನು ಅಳವಡಿಸಲಾಗುತ್ತಿದೆ. ಹಳೆ ಗೇಟಿನಿಂದ 100 ಮೀಟರ್‌ ದೂರದಲ್ಲಿ ಅಂಡರ್‌ಪಾಸ್‌ ಕಾಮಗಾರಿ ಕಾರ್ಯಗತದಲ್ಲಿದೆ.

ಸೇತುವೆ ನಿರ್ಮಾಣದ ನೋಟ

Advertisement

ನಗರದ ಎಪಿಎಂಸಿ ರಸ್ತೆಯಾಗಿ ಉಪ್ಪಿನಂಗಡಿ ರಸ್ತೆಗೆ ನಿಕಟ ಸಂಪರ್ಕ ಇದೆ. ಇಲ್ಲಿ ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಇದ್ದು, ದಿನವೊಂದಕ್ಕೆ ಹದಿನಾರು ಬಾರಿ ರೈಲ್ವೇ ಗೇಟ್‌ ಹಾಕುತ್ತಿರುವುದರಿಂದ ಸಂಚಾರ ಸಮಸ್ಯೆ ನಿವಾರಿಸಲು ಕೆಳ ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆಗೆ ಪೂರಕವಾಗಿ 2014ರಲ್ಲಿ ರಾಜ್ಯ ಸರಕಾರಕ್ಕೆ ಮೇಲ್ಸೇತುವೆ ನಿರ್ಮಾಣದ ಅಂದಾಜು ಪಟ್ಟಿಯನ್ನು ಎಪಿಎಂಸಿ ಕಳಿಸಿತ್ತು. 25 ಕೋಟಿ ರೂ. ಅಂದಾಜು ವೆಚ್ಚ ನಿರೀಕ್ಷೆ ಮಾಡಲಾಗಿತ್ತು. ಇದರಲ್ಲಿ 12.5 ಕೋಟಿ ರಾಜ್ಯ ಭರಿಸಬೇಕು. ಉಳಿದ ಮೊತ್ತ ರೈಲ್ವೇ ಇಲಾಖೆ ಭರಿಸಬೇಕು. ಅಂದರೆ 2 ಕೋಟಿ ರೂ.ಗಳಿಗಿಂತ ಮಿಕ್ಕಿದ ಸಾರ್ವಜನಿಕ ಯೋಜನೆಯನ್ನು ರೈಲ್ವೇ ಅನುಷ್ಠಾನ ಮಾಡಬೇಕಾದರೆ ರಾಜ್ಯ ಸರಕಾರ ಮತ್ತು ಅದರ ಅಂಗ ಸಂಸ್ಥೆಗಳು ಸೇರಿ ಅರ್ಧ ಮೊತ್ತ ಭರಿಸಬೇಕೆಂಬುದು ನಿಯಮ. ಈ ಮೊತ್ತವನ್ನು ತಾನು ಭರಿಸುವುದಾಗಿ ಸರಕಾರ ಲಿಖೀತ ಭರವಸೆಯನ್ನು ರೈಲ್ವೇಗೆ ನೀಡಿ, ಶೇ. 50ರಷ್ಟು ಹಣ ರೈಲ್ವೇಗೆ ಠೇವಣಿ ಮಾಡಿದ ಮೇಲಷ್ಟೇ ಕಾಮಗಾರಿಯನ್ನು ರೈಲ್ವೇ ಕೈಗೆತ್ತಿಕೊಳ್ಳುತ್ತದೆ. ಆದರೆ 25 ಕೋ. ರೂ.ವೆಚ್ಚದ ಕಾಮಗಾರಿಯಲ್ಲಿ ಅರ್ಧ ಮೊತ್ತ ಪಾವತಿಗೆ ಸರಕಾರದ ಸಹಮತ ಸಿಗಲಿಲ್ಲ. ಹೀಗಾಗಿ ವೆಚ್ಚದ ಗಾತ್ರ ತಗ್ಗಿಸುವ ಸಲುವಾಗಿ ಕೆಳಸೇತುವೆ ನಿರ್ಮಾಣದ ಕುರಿತಂತೆ ಎಂಜಿನಿಯರ್‌ ಮೂಲಕ ಎರಡನೇ ಹಂತದಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ 13.40 ಕೋ. ರೂ. ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಾಣ ಸಾಧ್ಯ ಎಂಬ ಅಂದಾಜನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಇದಕ್ಕೆ ಸರಕಾರ ಕೂಡ ಸಮ್ಮತಿ ಸೂಚಿಸಿತು.

ಒಡಂಬಡಿಕೆ ಮಾಡಿಕೊಂಡು ಮೇ 21ರಂದು ಕಾಮಗಾರಿಗೆ ಚಾಲನೆ

ಅನುದಾನಕ್ಕೆ ಸಂಬಂಧಿಸಿ ಶೇ. 50 ರಷ್ಟು ಮೊತ್ತ ಭರಿಸಲು ರೈಲ್ವೇ ಇಲಾಖೆ ಕ್ಯಾಬಿನೆಟ್‌ ನಲ್ಲಿ ಒಪ್ಪಿಗೆ ಕೊಟ್ಟಿತ್ತು. ಉಳಿದ ಶೇ. 50ರ ಮೊತ್ತಕ್ಕೆ ರಾಜ್ಯ ಮೂಲ ಸೌಕರ್ಯ ಇಲಾಖೆ ಹಾಗೂ ಎಪಿಎಂಸಿ ಒಡಂಬಡಿಕೆ ಮಾಡಿಕೊಂಡು ಅನುದಾನವನ್ನು ರೈಲ್ವೇ ಇಲಾಖೆಗೆ ರಾಜ್ಯ ಸರಕಾರದ ಮೂಲಕ ನೀಡಿದೆ. ಕಾಮಗಾರಿ ನಿರ್ವಹಣೆ ವಿಚಾರದಲ್ಲಿನ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆ ನಿವಾರಣೆ ಮಾಡಿ ಮೇ 21ರಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಬೇಡಿಕೆಗೆ ಚಾಲನೆ ನೀಡಲಾಯಿತು.

ದಶಕಗಳ ಕನಸು: ಎಪಿಎಂಸಿ ರೈಲ್ವೇ ಕ್ರಾಸಿಂಗ್‌ನಲ್ಲಿ ಅಂಡರ್‌ಪಾಸ್‌ ನಿರ್ಮಾಣ ದಶಕಗಳ ಕನಸು. ನಮ್ಮ ಎಪಿಎಂಸಿ ಆಡಳಿತವು ಸಂಸದ ನಳಿನ್‌ ಕುಮಾರ್‌ ಕಟೀಲು, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಸಹಕಾರದಿಂದ ಈ ಯೋಜನೆ ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾದೆವು. ಕಾಮಗಾರಿಯು ತ್ವರಿತವಾಗಿ ಸಾಗುತ್ತಿದೆ.  –ದಿನೇಶ್‌ ಮೆದು, ಮಾಜಿ ಅಧ್ಯಕ್ಷರು, ಎಪಿಎಂಸಿ ಪುತ್ತೂರು

ಶೇ.35 ರಷ್ಟು ಕಾಮಗಾರಿ ಪೂರ್ಣ: ಈಗಾಗಲೇ ಶೇ.35 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಡಿಸೆಂಬರ್‌ನಲ್ಲಿ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ಮುಂದಿನ ಮಾರ್ಚ್‌ ಮೊದಲ ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.  –ಸತ್ಯನಾರಾಯಣ, ಪಿ. ವೇ ಇನ್‌ಸ್ಪೆಕ್ಟರ್‌ ಎಂಜಿನಿಯರಿಂಗ್‌ ವಿಭಾಗ, ರೈಲ್ವೇ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next