Advertisement
ವೇಣೂರು: ಮಳೆಗಾಲದಲ್ಲಿ ಬಡಕೋಡಿ ಗ್ರಾಮದ ಸಮಸ್ಯೆ ಗೋಚರವಾಗುವುದಿಲ್ಲ. ಆದರೆ ಬೇಸಗೆ ಬಂತೆಂದರೆ ಸಾಕು ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆ ಎದುರಾಗುತ್ತದೆ. ಇದು ಇಂದಿನ ಸಮಸ್ಯೆಯಲ್ಲ. ದಶಕಗಳಿಂದಲೂ ಇಲ್ಲಿನ ಕೃಷಿಕರು ಹೈ ವೋಲ್ಟೇಜ್ ವಿದ್ಯುತ್‌ಗಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಆದರೆ ಸಮಸ್ಯೆ ಮಾತ್ರ ನಿವಾರಣೆ ಆಗಿಲ್ಲ ಎನ್ನುವುದು ಗ್ರಾಮಸ್ಥರ ಗೋಳು.
Related Articles
Advertisement
ಜೋತುಬಿದ್ದಿರುವ ತಂತಿ :
ಬಡಕೋಡಿಯ ಕಾಜೊಟ್ಟು ಪಾದೆ ಬಳಿಯ ಗದ್ದೆಯಲ್ಲಿ, ನೂಯಿ, ದೇವಸ ನಡ್ತಿಕಲ್ಲುವಿನ ಎಮೂcರು ಬಳಿಯ ಗುಡ್ಡಗಳಲ್ಲಿ ತಂತಿಗಳು ಕೈಗೆಟಕುವ ಸ್ಥಿತಿಯಲ್ಲಿವೆ. ಹಳೆಯದಾದ ತಂತಿಗಳು ಇಂದೋ ನಾಳೆಯೋ ತುಂಡಾಗುವ ಸ್ಥಿತಿಯಲ್ಲಿವೆ. ಹಲವು ಮನೆಗಳು, ತೋಟ, ಗದ್ದೆಗಳ ಮಧ್ಯೆ ಎಚ್.ಟಿ. ಲೈನ್‌ಗಳು ಹಾದುಹೋಗಿವೆ. 250ಕ್ಕೂ ಅ ಧಿಕ ಕುಟುಂಬಗಳು ಕೆರೆ, ಕೊಳವೆಬಾವಿ ಹಾಗೂ ನದಿಗಳಿಂದ ಕೃಷಿ ಚಟುವಟಿಕೆಗಳಿಗೆ ಮಾಡುತ್ತವೆ.
ವಾಹನ ಸೌಲಭ್ಯ ಇಲ್ಲ :
ಗ್ರಾಮದಲ್ಲಿ ಎಸ್‌ಸಿ-ಎಸ್‌ಟಿ ಕಾಲನಿಗಳೇ ಹೆಚ್ಚು. ತೀರಾ ಗ್ರಾಮೀಣ ಭಾಗವಾಗಿರುವ ಬಡಕೋಡಿಗೆ ವಾಹನ ಸೌಲಭ್ಯ ಇಲ್ಲ. ಈ ಬಡ ಕುಟುಂಬಗಳು ಪಡಿತರ ಸಾಮಗ್ರಿಗಳನ್ನು ಬಾಡಿಗೆ ವಾಹನದಲ್ಲಿ 2.5 ಕಿ.ಮೀ. ದೂರದ ಪೆರಿಂಜೆಯಿಂದ ತರಬೇಕು. ನಡ್ತಿಕಲ್ಲು ಪರಿಸರದಲ್ಲಿ ರೇಶನ್ ವಿತರಣೆಗೆ ಕ್ರಮ ಕೈಗೊಂಡರೆ ಗ್ರಾಮಸ್ಥರಿಗೆ ಅನುಕೂಲವಾಗಬಹುದು. ಆದರೆ ಅದಕ್ಕೂ ನೆಟ್‌ವರ್ಕ್ ಎಂಬ ವಿಘ್ನವನ್ನು ನಿವಾರಿಸಬೇಕಿದೆ.
ಕುಡಿಯುವ ನೀರಿಗೂ ಹಾಹಾಕಾರ :
1,276 ಮಂದಿ ಜನಸಂಖ್ಯೆ ಇರುವ ಬಡಕೋಡಿಯಲ್ಲಿ 3 ಓವರ್‌ಹೆಡ್ ಟ್ಯಾಂಕ್‌ಗಳಿವೆ. ಬೇಸಗೆ ಕೊನೆಯಲ್ಲಿ ಬಡಕೋಡಿ ಗ್ರಾಮಸ್ಥರ ನೀರಿನ ಭವನೆಯನ್ನು ನೀಗಿಸುವಲ್ಲಿ ಇವು ವಿಫಲವಾಗುತ್ತಿವೆ. ಗ್ರಾಮದಲ್ಲಿ ಗ್ರಾಮ ಪಂಚಾಯತ್‌ನ 3 ಕೊಳವೆ ಬಾವಿಗಳಿದ್ದು, ದಾಹ ನೀಗಿಸುತ್ತಿವೆ. ಆದರೆ ಎಪ್ರಿಲ್, ಮೇ ಅಂತ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗುತ್ತದೆ.
ನೆಟ್ಟಗಿಲ್ಲದ ನೆಟ್‌ವರ್ಕ್ :
ಬಡಕೋಡಿಯಲ್ಲಿ ಟವರ್ ಇಲ್ಲ. ಪಕ್ಕದ ಹೊಸಂಗಡಿ ಹಾಗೂ ಪೆರಿಂಜೆಯಲ್ಲಿ ಮುಗಿಲೆತ್ತರದ ಎರಡು ಟವರ್‌ಗಳಿದ್ದರೂ ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಬಡಕೋಡಿಗೆ ಸಿಗ್ನಲ್ ನೀಡುವಲ್ಲಿ ವಿಫಲವಾಗಿವೆ. ಮುಖ್ಯವಾಗಿ ಹೇಡ್ಮೆ ನಡ್ತಿಕಲ್ಲು, ನೀರೊಳ್ಬೆ ಹಾಗೂ ಎರ್ಮೋಡಿ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. 12ಕ್ಕೂ ಅಧಿಕ ಮನೆಗಳಿಗೆ ಹೊರಜಗತ್ತಿನ ಸಂಪರ್ಕವೇ ಇಲ್ಲ. ಈಗಾಗಿ ಇಲ್ಲಿನ ಮಕ್ಕಳು ಆನ್‌ಲೈನ್ ತರಗತಿಗಾಗಿ ಪರದಾಡುವ ಸ್ಥಿತಿ ಇಲ್ಲಿದೆ. ಅಲ್ಲದೆ ಕೋವಿಡ್ ಲಸಿಕೆ ಕ್ಯಾಂಪ್, ಆಧಾರ್ ಕ್ಯಾಂಪ್ ಮುಂತಾದ ಆನ್‌ಲೈನ್ ಸೇವೆಗಳನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲು ತೊಡಕಾಗಿದೆ.
ಆರೋಗ್ಯ ಕೇಂದ್ರವಿಲ್ಲ : ಬಡಕೋಡಿಯ ಜನತೆ ಆರೋಗ್ಯ ತಪಾಸಣೆಗೆ ಬರಬೇಕಾದರೆ 15 ಕಿ.ಮೀ. ಸಮನಾಂತರದ ದೂರದ ಮೂಡುಬಿದಿರೆ ಅಥವಾ ವೇಣೂರಿಗೆ ಬರಬೇಕು. ಇಲ್ಲಿ ಒಂದು ಸರಕಾರಿ ಆರೋಗ್ಯ ಉಪಕೇಂದ್ರ ಸ್ಥಾಪನೆಯಾದರೆ ಬಹಳಷ್ಟು ಪ್ರಯೋಜನ ಆಗುತ್ತದೆ ಎನ್ನುವುದು ಇಲ್ಲಿನ ಬಡ ಜನತೆಯ ಅಭಿಪ್ರಾಯ. 150ಕ್ಕೂ ಅಧಿ ಕ ಪ.ಜಾತಿ, ಪ.ಪಂಗಡ ಕುಟುಂಬಗಳಿದ್ದು, ಒಂದಾದರೂ ಸಮುದಾಯ ಭವನ ನಿರ್ಮಿಸಿಕೊಡಬೇಕೆಂಬ ಬೇಡಿಕೆ ಇವರದ್ದು. 75 ವರ್ಷ ಇತಿಹಾಸ ಇದ್ದು, ನಾದುರಸ್ತಿಯಲ್ಲಿರುವ ಸ.ಹಿ.ಪ್ರಾ. ಶಾಲೆಯ ಕಟ್ಟಡವನ್ನು ಹೆಚ್ಚುವರಿ ಕೊಠಡಿಗಳೊಂದಿಗೆ ಪುನರ್ ನಿರ್ಮಿಸಬೇಕು ಎನ್ನುತ್ತಾರೆ. ಇಡೀ ಗ್ರಾಮಕ್ಕೆ ಶಾಲೆಯ ಬಳಿಯಲ್ಲಿ ಒಂದೇಒಂದು ಅಂಗನವಾಡಿ ಇದ್ದು, ನೀಳೊಳ್ಬೆಯಲ್ಲಿ ಇನ್ನೊಂದು ಅಂಗನವಾಡಿ ಕೇಂದ್ರ ನಿರ್ಮಿಸುವ ಬೇಡಿಕೆ ಇದೆ.
ಇತರ ಸಮಸ್ಯೆ ಗಳೇನು? :
- ಡಾಮರು, ಕಾಂಕ್ರಿಟ್ ಕಾಣದ ಕಚ್ಚಾರಸ್ತೆ
- ಏರಿಳಿತ ಮಣ್ಣಿನ ರಸ್ತೆ
- ಕುಡಿಯುವ ನೀರಿಗೆ ಹಾಹಾಕಾರ
- ದಾರಿದೀಪವಿಲ್ಲದ ಸಾರ್ವಜನಿಕ ರಸ್ತೆ
- ಗ್ರಾಮೀಣ ರಸ್ತೆಯಲ್ಲಿ ವಾಹನ ಸೌಕರ್ಯ ಇಲ್ಲದಿರುವುದು
- ಖಾಸಗಿ ಜಾಗದಲ್ಲಿನ ಸಂಪರ್ಕ ರಸ್ತೆಗಳು