Advertisement

ಲೋ ವೋಲ್ಟೇಜ್‌: ಕೃಷಿಗೆ ನೀರುಣಿಸಲು ರೈತರ ಪರದಾಟ

12:32 AM Mar 07, 2020 | mahesh |

ಆಲಂಕಾರು: ಆಲಂಕಾರು ಗ್ರಾಮ ಪಂಚಾಯತ್‌ನ ಗ್ರಾಮ ಸಭೆ ಗ್ರಾ.ಪಂ. ಅಧ್ಯಕ್ಷೆ ಸುನಂದಾ ಬಾರ್ಕುಲಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು. ಆಲಂಕಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ರೈತರು ತಾವು ಬೆಳೆದ ಕೃಷಿಗೆ ನೀರುಣಿಸಲು ವಿದ್ಯುತ್‌ ಲೋ-ವೋಲ್ಟೇಜ್‌ ಸಮಸ್ಯೆ ಅಡ್ಡಿಯಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಮಂಡಲ ಪಂಚಾಯತ್‌ನ ಮಾಜಿ ಅಧ್ಯಕ್ಷ ರಾಮ್‌ಮೂರ್ತಿ ಆಚಾರ್ಯ ಹಾಗೂ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಆಲಂಕಾರು ಮೆಸ್ಕಾಂನ ಜೂನಿಯರ್‌ ಎಂಜಿನಿಯರ್‌ ಜೋಸೆಫ್ ಗೊನ್ಸಾಲ್ವಿಸ್‌ ಅವರನ್ನು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೆಇ, ಆಲಂಕಾರಿನಲ್ಲಿ 110/33/11 ಕೆವಿಎ ಸಬ್‌ಸ್ಟೇಷನ್‌ ನಿರ್ಮಾಣಗೊಂಡರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಾಗಲಿದೆ. ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಯೋಜನೆ ಅನುಷ್ಠಾನಕ್ಕೆ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಸ್ತುತ ಕಡಬ, ನೆಲ್ಯಾಡಿ, ಸವಣೂರಿನಿಂದ ಆಲಂಕಾರು ಭಾಗಕ್ಕೆ ವಿದ್ಯುತ್‌ ಸರಬರಾಜಾಗುತ್ತಿದ್ದು, ಆಲಂಕಾರು ಈ ವಿಭಾಗದ ಕೊನೆಯ ಸ್ಥಳ. ಇಲ್ಲಿಗೆ ಬರುವಾಗ ವಿದ್ಯುತ್‌ನ ವೋಲ್ಟೇಜ್‌ ಕಡಿಮೆಯಾಗುತ್ತಿದೆ. ನಾವು ಆದಷ್ಟು ಗುಣಮಟ್ಟದ ವಿದ್ಯುತ್‌ ನೀಡಲು ಪ್ರಯತ್ನ ಪಡುತ್ತಿದ್ದೇವೆ ಎಂದರು. ವಿದ್ಯುತ್‌ ಲೋ-ವೋಲ್ಟೇಜ್‌ ಸಮಸ್ಯೆಯನ್ನು ಬಗೆ ಹರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಬರೆಯಲು ಸಭೆ ನಿರ್ಣಯಿಸಿತು.

Advertisement

ಸರ್ವರ್‌ ಸಮಸ್ಯೆ
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಕೆ. ಮಾಹಿತಿ ನೀಡಿದರು. ಎನ್‌. ಸಿ.ಎಸ್‌.ಗೆ ರೈತರು ಸಂಘಕ್ಕೆ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಪಾನ್‌ಕಾರ್ಡ್‌, ಆರ್‌.ಟಿ.ಸಿ. ನೀಡಿ, ರಿಯಾಯಿತಿ ದರದಲ್ಲಿ ಸಿಗುವ ಸಾಲ ಸೌಲಭ್ಯ ಪಡೆಯುವಂತೆ ತಿಳಿಸಿದರು. ಸಂಘದಲ್ಲಿ ಮಣ್ಣು ಪರೀಕ್ಷೆ ಘಟಕ ಕಾರ್ಯಾರಂಭಗೊಂಡಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಕೇಶವ ದೇವಾಡಿಗ ಪ್ರತಿಕ್ರಿಯಿಸಿ, ಪಡಿತರ ಪಡೆಯಲು ಬೆರಳಚ್ಚಿನ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಸರ್ವರ್‌ಗಳ ಸಮಸ್ಯೆಯಿಂದ ಜನರು ಅಲೆದಾಡುವ ಪರಿಸ್ಥಿತಿ ಬಂದಿದೆ. ಸರ್ವರ್‌ ವ್ಯವಸ್ಥೆಯನ್ನು ಸರಿಪಡಿಸುವಂತೆ ಇಲಾಖೆಗೆ ನಿರ್ಣಯ ಕೈಗೊಳ್ಳಲು ತಿಳಿಸಿದರು. ಪಡಿತರ ಚೀಟಿಗೆ ಬೆರಳಚ್ಚು ವ್ಯವಸ್ಥೆಯನ್ನು ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಬರೆಯುವುದಾಗಿ ನಿರ್ಣಯಿಸಲಾಯಿತು.

ಅಕ್ರಮ ಒತ್ತುವರಿ: ಕ್ರಮಕ್ಕೆ ಆಗ್ರಹ
ಗ್ರಾಮ ಪಂಚಾಯತ್‌ ರಸ್ತೆಯ ಅಂಚಿನ ಶರವೂರು ದೇವಸ್ಥಾನದ ಜಾಗವನ್ನು ಸ್ಥಳಿಯರೊಬ್ಬರು ಒತ್ತುವರಿ ಮಾಡಿದ್ದಾರೆ. ವಿಚಾರಿಸಿದರೆ ಸರ್ವೆ ನಂಬರ್‌ 164/1ಪಿ2ನಲ್ಲಿ 0.25 ಸೆಂಟ್ಸ್‌ ಜಾಗ ಅಕ್ರಮ-ಸಕ್ರಮ ಮೂಲಕ ತನ್ನ ಸ್ವಾಧೀನವಾಗಿದೆ ಎಂದು ತಿಳಿಸುತ್ತಿದ್ದಾರೆ. ಯಾವುದೇ ಕೃಷಿ ಚಟುವಟಿಕೆ ಇಲ್ಲದಿದ್ದರೂ ಕಂದಾಯ ಇಲಾಖೆಯಿಂದ ಸಾಗುವಳಿ ಚೀಟಿ ಹೇಗೆ ದೊರೆಯಿತು? ಜಿ.ಪಂ. ರೋಡ್‌ ಮಾರ್ಜಿನ್‌ನಲ್ಲಿ ಆತನಿಗೆ ಸೇರಿದ ಕಟ್ಟಡ ಇದೆ. ಅದಕ್ಕೆ ಉದ್ಯಮ ಪರವಾನಿಗೆ ನೀಡಲಾಗಿದೆ. ಅದರ ಪಕ್ಕ ದುರ್ಗಾಪರಮೇಶ್ವರೀ ದೇವಸ್ಥಾನದ ಜಾಗವಿದ್ದು, ಅದೂ ಒತ್ತುವರಿಯಾಗುವ ಸಂಭವವಿದೆ ಎಂದು ಸ್ಥಳೀಯ ನಿವಾಸಿಗಳು ಸಭೆಯಲ್ಲಿ ದಾಖಲೆಯನ್ನು ತೋರಿಸಿ, ಪಂಚಾಯತ್‌ಗೆ ಮನವಿ ನೀಡಿ, ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಕಂದಾಯ ಇಲಾಖೆಗೆ ಬರೆಯುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಆರೋಗ್ಯ ಇಲಾಖೆಯ ಡಾ| ಜೀನಾ ವಿ.ಜೆ., ಕಡಬ ವಲಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಭವಾನಿ, ಪಶು ಸಂಗೋಪನ ಇಲಾಖೆಯ ಹಿರಿಯ ಪಶು ವೈದ್ಯ ಪರೀಕ್ಷಕ ಅಶೋಕ್‌ ಕೊçಲ, ಶಿಕ್ಷಣ ಇಲಾಖೆಯ ಸಿ.ಆರ್‌.ಪಿ. ಪ್ರದೀಪ್‌ ಬಾಕಿಲ, ಪುತ್ತೂರು ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತ ಕೇಂದ್ರದ ತೀರ್ಥಾನಂದ ಇಲಾಖೆಯ ಮಾಹಿತಿ ನೀಡಿದರು. ಗ್ರಾಮ ಸಭೆಗೆ ಕಂದಾಯ, ಅರಣ್ಯ, ತೋಟಗಾರಿಕೆ, ಕೃಷಿ ಇಲಾಖೆಯ ಇಲಾಖಾಧಿಕಾರಿಗಳ ಗೈರು ಹಾಜರಾತಿಯನ್ನು ಗ್ರಾಮಸ್ಥರು ಖಂಡಿಸಿದರು.

ತಾ.ಪಂ. ಸದಸ್ಯೆ ತಾರಾ ಕೆ. ಮಾತನಾಡಿ, ತಾ.ಪಂ. ಅನುದಾನದಲ್ಲಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಹಾಗೂ ರಸ್ತೆಗಳಿಗೆ ತಮ್ಮ ಅನುದಾನವನ್ನು ವಿನಿಯೋಗ ಮಾಡಿರುವುದಾಗಿ ತಿಳಿಸಿದರು. ಗಾ.ಪಂ. ಹಾಲಿ ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ ಸುಧಾಕರ ಪೂಜಾರಿ ಮಾತನಾಡಿ, ಶಾಸಕರ ಹಾಗೂ ಪಂಚಾಯತ್‌ನ ಅನುದಾನದಲ್ಲಿ ಆಲಂಕಾರು ಗ್ರಾ.ಪಂ. ವ್ಯಾಪ್ತಿಯಲ್ಲಿ 5 ಕೋಟಿ ರೂ.ಗೂ ಅಧಿಕ ಅನುದಾನದಲ್ಲಿ ಅಭಿವೃದ್ಧಿ ಕೆಲಸಕಾರ್ಯಗಳು ನಡೆದಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

Advertisement

ಸುನಂದಾ ಬಾರ್ಕುಲಿ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಶ್ರಮಿಸಿದ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು. ಮುಂದೆ ಬರುವ ಆಡಳಿತ ಮಂಡಳಿಗೂ ಸಹಕಾರ ನೀಡುವಂತೆ ಗ್ರಾಮಸ್ಥರಲ್ಲಿ ವಿನಂತಿಸಿದರು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ವರದಿ ಮಂಡಿಸಿ, ಸ್ವಾಗತಿಸಿ ವಂದಿಸಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಇಂದುಶೇಖರ ಶೆಟ್ಟಿ, ಕೇಶವ ಗೌಡ ಆಲಡ್ಕ, ಕೊರಗಪ್ಪ, ಸುನಂದಾ, ಭವಾನಿ, ಪುಷ್ಪಾ, ಕಿರಿಯ ಆರೋಗ್ಯ ಸಹಾಯಕಿ ಸರೋಜಿನಿ ಉಪಸ್ಥಿತರಿದ್ದರು.

ಗ್ರಾಮಸಭೆ ಸದುಪಯೋಗಪಡಿಸಿಕೊಳ್ಳಿ
ಗ್ರಾ.ಪಂ ಉಪಾಧ್ಯಕ್ಷ ಸದಾನಂದ ಆಚಾರ್ಯ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಮಾರ್ಗದರ್ಶಿ ಅಧಿಕಾರಿ ತಾ.ಪಂ.ನ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸುರೇಶ್‌ ಕುಮಾರ್‌ ಮಾತನಾಡಿ, ಗ್ರಾಮ ಸಭೆ ಗ್ರಾಮಸ್ಥರಿಗೆ ಮಾಹಿತಿ ಪಡೆಯಲು, ಅಹವಾಲು ಸಲ್ಲಿಸಲು ಹಾಗೂ ಜನಪ್ರತಿನಿಧಿಗಳಲ್ಲಿ ಪ್ರಶ್ನೆ ಕೇಳಲು ಸೂಕ್ತ ವೇದಿಕೆಯಾಗಿದ್ದು, ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next